– ಪಂಡಿತಾರಾಧ್ಯ ಶ್ರೀ
ದಾವಣಗೆರೆ, ನ.29- ಆದರ್ಶ ಬದುಕು ಸಾಗಿಸುವ ಮೂಲಕ ಜಗತ್ತಿನಲ್ಲಿ ಚಿರಂಜೀವಿಗಳಾ ಗಿರಲು ಸಾಧ್ಯ ಎಂದು ಸಾಣೇಹಳ್ಳಿಯ ಶ್ರೀ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪ್ರತಿಪಾದಿಸಿದರು.
ಜಮಾಅತೆ ಇಸ್ಲಾಮೀ ಹಿಂದ್ ದಾವಣಗೆರೆ ಘಟಕದ ವತಿಯಿಂದ ನಗರದ ಚನ್ನಗಿರಿ ಕೇಶವಮೂರ್ತಿ ರೋಟರಿ ಸಭಾಂಗಣದಲ್ಲಿ ಇಂದು ಸಂಜೆ ಹಮ್ಮಿಕೊಳ್ಳಲಾಗಿದ್ದ ಸೌಹಾರ್ದ ಸಮಾಜ ಮತ್ತು ಪ್ರವಾದಿ ಮುಹಮ್ಮದ್ (ಸ)ರ ಸಂದೇಶ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ಜಗತ್ತಿನಲ್ಲಿ ಯಾರೂ ಚಿರಂಜೀವಿಗಳಲ್ಲ. ಆದರೆ ಕಪಟ, ಮೋಸ ಇಲ್ಲದೆ ಸ್ನೇಹ, ಪ್ರೀತಿಯಿಂದ ಆದರ್ಶದ ಬದುಕು ಸಾಗಿಸಿದಾಗ ಅವರು ದೈಹಿಕವಾಗಿ ಇರದಿದ್ದರೂ ಜನರು ಗೌರವದಿಂದ ನೆನಪಿಸಿಕೊಳ್ಳುತ್ತಾರೆ. ಆ ಮೂಲಕ ಚಿರಂಜೀವಿಗಳಾಗಲು ಸಾಧ್ಯ ಎಂದು ಹೇಳಿದರು.
ಜಗತ್ತಿನಲ್ಲಿ ಅನೇಕ ಧರ್ಮಗಳಿವೆ. ಎಲ್ಲಾ ಧರ್ಮಗಳ ಮೂಲ ಆಶಯವೂ ಸಕಲ ಜೀವಾತ್ಮರಿಗೆ ಒಳಿತನ್ನು ಬಯಸುವುದೇ ಆಗಿದೆ. ಇವನಾರವ ಎನ್ನದೆ ಇವ ನಮ್ಮವ ಎನ್ನುವ ಹೃದಯ ಶ್ರೀಮಂತಿಕೆಯನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕಿದೆ ಎಂದರು.
ದೇಶದಲ್ಲಿ ಆರ್ಥಿಕ ಶ್ರೀಮಂತರು ಅನೇಕರಿದ್ದಾರೆ. ಆದರೆ ನೈತಿಕ, ಅಧ್ಯಾತ್ಮಿಕ, ಮಾನವೀಯ ಅಂತಃಕರಣದ ಶ್ರೀಮಂತಿಕೆ ಉಳ್ಳುವರಿದ್ದಾರಾ ? ಎಂಬ ಪ್ರಶ್ನೆಗೆ ಉತ್ತರ ಸಿಗುವುದು ಕಷ್ಟವಾಗಿದೆ. ಮಹಾತ್ಮರ ತತ್ವಗಳನ್ನು ಹೇಳುವವರು ತತ್ವಗಳಿಗನುಗುಣವಾಗಿ ಬದುಕು ಕಟ್ಟಿಕೊಳ್ಳುವಲ್ಲಿ ಸೋಲುತ್ತಿದ್ದೇವೆ. ಆ ಮೂಲಕ ಮಾನವ ರೂಪದ ಮೃಗಗಳಾಗುತ್ತಿದ್ದೇವೆ.
ಮನುಷ್ಯ ಮೃಗವಾಗದೆ ಮಹಾದೇವನಾಗಬೇ ಕಾದರೆ ಎಲ್ಲರ ಬಗ್ಗೆ ಪ್ರೀತಿ, ಗೌರವ ಇಟ್ಟುಕೊಳ್ಳಬೇಕು. ಹೃದಯ ಶ್ರೀಮಂತಿಕೆ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಬಸವಣ್ಣನವರು ತಿಳಿಸಿಕೊಟ್ಟ ಸಪ್ತ ಸೂತ್ರಗಳಾದ ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯ ಬೇಡ, ಅನ್ಯರಿಗೆ ಅಸಹ್ಯ ಪಡಬೇಡ. ತನ್ನ ಬಣ್ಣಿಸಬೇಡ. ಇದಿರ ಹಳಿಯಲು ಬೇಡ ಎಂಬ ಸೂತ್ರಗಳ ಹಾಗೆ ಬದುಕು ಕಟ್ಟಿಕೊಂಡರೆ ಅಂತರಂಗ ಶುದ್ಧಿಯ ಜೊತೆಗೆ ಬಹಿರಂಗ ಶುದ್ಧಿಯೂ ಆಗುತ್ತದೆ. ಆಗ ಭಗವಂತ ತಾನಾಗಿಯೇ ಒಲೆಯುತ್ತಾನೆ. ಈ ಕಾರ್ಯವನ್ನು ಪ್ರವಾದಿ ಮುಹಮ್ಮದ್ ಅವರು ಪರಿಣಾಮಕಾರಿಯಾಗಿ ಮಾಡಿದ್ದರು ಎಂದು ಶ್ರೀಗಳು ನುಡಿದರು.
ಜಮಾಅತೆ ಇಸ್ಲಾಮೀ ಹಿಂದ್ನ ರಾಜ್ಯ ಕಾರ್ಯದರ್ಶಿ ಜ.ಮುಹಮ್ಮದ್ ಕುಂಞ ಮಾತನಾಡುತ್ತಾ, ಜಗತ್ತಿನ ಎಲ್ಲರೂ ಸಹೋದರ, ಸಹೋಯದರಿಯರು ಎಂದು ತಿಳಿಯುವುದೇ ಧರ್ಮ ಎಂದು ಪ್ರವಾದಿ ಮುಹಮ್ಮದ್ ಅವರು ಪ್ರತಿಪಾದಿಸಿದ್ದರು.
ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಬೇಕು. ಅವರ ಮನಸ್ಸಿಗೆ ನೋವು ಕೊಡುವುದು ದೊಡ್ಡ ಅಪರಾಧ ಎಂದಿದ್ದ ಅವರು, ಪ್ರತಿಯೊಬ್ಬರನ್ನೂ ಗೌರವಿಸಬೇಕು ಎಂದು ಹೇಳುವ ಮೂಲಕ ಜಗತ್ತಿಗೆ ಅಧ್ಯಾತ್ಮಿಕತೆಯ ಪಾಠ ಕಲಿಸಿಕೊಟ್ಟವರು ಎಂದು ಹೇಳಿದರು.
ಆಗರ್ಭ ಶ್ರೀಮಂತಿಕೆಯಲ್ಲಿ ಬದುಕುವ ಸಾಧ್ಯತೆ ಇದ್ದರೂ ಕನಿಷ್ಟ ಸವಲತ್ತಿನಲ್ಲಿ ಹೆಚ್ಚು ಸಂತೋಷದಿಂದ ಹೇಗೆ ಬದುಕಬಹುದು ಎಂದು ಬದುಕಿ ಜಗತ್ತಿಗೇ ತೋರಿಸಿಕೊಟ್ಟವರು ಪ್ರವಾದಿ ಮುಹಮ್ಮದ್ ಅವರು ಎಂದು ಬಣ್ಣಿಸಿದರು.
ಜಮಾಅತೆ ಇಸ್ಲಾಮೀ ಹಿಂದ್ ಅಧ್ಯಕ್ಷ ಅಯೂಬ್ ಖಾನ್, ವಲಯ ಸಂಚಾಲಕ ಸಲೀಂ ಉಮ್ರಿ, ಜಿಲ್ಲಾ ಸಂಚಾಲಕ ಮಹಬೂಬ್ ಅಲಿ ಮತ್ತು ಇತರರು ಉಪಸ್ಥಿತರಿದ್ದರು.