ಬೆಂಗಳೂರಿನ ನ್ಯಾಶ್‌ಗೆ ಪ್ರಥಮ, ಜಯ ಕರ್ನಾಟಕ ದ್ವಿತೀಯ
ದಾವಣಗೆರೆ, ನ.29 – ಹಿರಿಯ ಶಾಸಕ ಡಾ|| ಶಾಮನೂರು ಶಿವಶಂಕರಪ್ಪ ಅವರ ಧರ್ಮಪತ್ನಿ ದಿ.ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಅವರ ಸವಿನೆನಪಿನ ಅಂಗವಾಗಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಕ್ರೀಡಾಪಟುಗಳ ಸಾಂಸ್ಕೃತಿಕ ಸಂಘ ಹಾಗೂ ದಾವಣಗೆರೆ ಇಲೆವೆನ್ಸ್ ಕ್ರಿಕೆಟ್ ಕ್ಲಬ್ ವತಿಯಿಂದ ನಾಲ್ಕು ದಿನಗಳಿಂದ ನಡೆಯುತ್ತಿದ್ದ 14ನೇ ವರ್ಷದ ಶಾಮನೂರು ಡೈಮಂಡ್ ಹಾಗೂ ಶಿವಗಂಗಾ ಕಪ್ 2021 ರಾಷ್ಟ್ರ ಮಟ್ಟದ ಹೊನಲು ಬೆಳಕಿನ ಟೆನ್ನಿಸ್‌ಬಾಲ್(ಲೀಗ್ ಕಂ ನಾಟೌಟ್) ಕ್ರಿಕೆಟ್ ಟೂರ್ನಿಗೆ ನಿನ್ನೆ ತೆರೆ ಬಿದ್ದಿತು.
ನಿನ್ನೆ ಬೆಳಗಿನ ಜಾವದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಬೆಂಗಳೂರಿನ ನ್ಯಾಶ್ ಮತ್ತು ಜಯ ಕರ್ನಾಟಕ ತಂಡಗಳ ಮಧ್ಯೆ ನಡೆದ ಹಣಾಹಣಿಯಲ್ಲಿ ಬೆಂಗಳೂರಿನ ನ್ಯಾಶ್ ವಿಜಯ ದಾಖಲಿಸುವ ಮೂಲಕ ಪ್ರಥಮ ಸ್ಥಾನ ಪಡೆಯಿತು. ಈ ಮೂಲಕ ಪ್ರಥಮ ಸ್ಥಾನ 3.55 ಲಕ್ಷ ರೂ. ಹಾಗೂ ಶಾಮನೂರು ಡೈಮಂಡ್ ಕಪ್ಪನ್ನು, ಜಯಕರ್ನಾಟಕ ತಂಡ ದ್ವಿತೀಯ ಸ್ಥಾನ 2.25 ಲಕ್ಷ ರೂ. ಹಾಗೂ ಶಿವಗಂಗಾ ಕಪ್ ಹಾಗೂ ತೃತೀಯ ಸ್ಥಾನವನ್ನು ಪಡೆದ ಬೆಂಗಳೂರಿನ ಫ್ರೆಂಡ್ಸ್ ತಂಡ 1.25 ಲಕ್ಷ ರೂ. ನಗದು ಬಹುಮಾನ ಪಡೆಯಿತು. ಉಡುಪಿ ತಂಡ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಡೆಯಿತು.
ಬಹುಮಾನ ವಿತರಣೆ ಸಮಾರಂಭದಲ್ಲಿ ಜಿಲ್ಲಾ ಕ್ರೀಡಾಪಟುಗಳ ಸಾಂಸ್ಕೃತಿಕ ಸಂಘದ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಮಹಾದೇವ್ ಸಿ. ಹಂಪನೂರು, ಉಪಾಧ್ಯಕ್ಷ ಶಿವಗಂಗಾ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಕುರುಡಿ ಗಿರೀಶ್ (ಸ್ವಾಮಿ), ಖಜಾಂಚಿ ಜಯಪ್ರಕಾಶ್, ಪಿ.ಸಿ.ರಾಮನಾಥ್, ವೀರೇಶ್ ಪಟೇಲ್, ರಂಗಸ್ವಾಮಿ, ಸರ್ಕಲ್ ಇನ್‍ಸ್ಪೆಕ್ಟರ್‍ಗಳಾದ ಗಿರೀಶ್, ಶಂಕರ್, ಸುರೇಶ್ ಮತ್ತಿತರರಿದ್ದರು.
ಇದಕ್ಕೂ ಮುನ್ನ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಅವರನ್ನು ಹಾಗೂ ಕ್ರೀಡಾ ಪ್ರೋತ್ಸಾಹಕರನ್ನು ಸನ್ಮಾನಿಸಲಾಯಿತು.
ಈ ಟೂರ್ನಿಯಲ್ಲಿ ಕೋವಿಡ್ ಕಾರಣದಿಂದ ಹೊರ ರಾಜ್ಯದ ಕೇರಳ, ಚೆನ್ನೈ, ಗೋವಾ, ಮಹಾರಾಷ್ಟ್ರ ಹಾಗೂ ರಾಜ್ಯದ ಬೆಂಗಳೂರು, ಮೈಸೂರು, ಮಂಗಳೂರು, ಉಡುಪಿ, ತುಮಕೂರು, ಶಿವಮೊಗ್ಗ, ಹುಬ್ಬಳ್ಳಿ ಸೇರಿದಂತೆ 36 ತಂಡಗಳಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿತ್ತು.
ಅಫಿಷಿಯಲ್ ಕಪ್ ಪ್ರಥಮ ಬಹುಮಾನವನ್ನು ಪೊಲೀಸ್ ತಂಡ ಪಡೆದುಕೊಂಡರೆ, ಮರ್ಚೆಂಟ್ಸ್ ತಂಡ ದ್ವಿತೀಯ ಸ್ಥಾನ ಪಡೆಯಿತು.