ಕೊರೊನಾ 3ನೇ ಅಲೆಯಿಂದ ಪಾರಾಗಲು ಲಸಿಕೆ ಅತ್ಯಗತ್ಯ

ಮಲೇಬೆನ್ನೂರು ಪುರಸಭೆಯಲ್ಲಿನ ಅಧಿಕಾರಿಗಳ ತುರ್ತು ಸಭೆಯಲ್ಲಿ ಜಿ. ನಜ್ಮಾ

ಮಲೇಬೆನ್ನೂರು, ನ. 29- ಕೋವಿಡ್ 3ನೇ ಅಲೆಯಿಂದ ಜನರನ್ನು ಕಾಪಾಡಲು ಕಡ್ಡಾಯವಾಗಿ ಪ್ರತಿಯೊಬ್ಬರಿಗೂ ಲಸಿಕೆ ಹಾಕಲು ಹೆಚ್ಚಿನ ನಿಗಾ ವಹಿಸಿ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ  ನಜ್ಮಾ ತಿಳಿಸಿದ್ದಾರೆ.

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಕೋವಿಡ್ ಲಸಿಕಾ ಅಭಿಯಾನದ ಅಂಗವಾಗಿ ಕರೆದಿದ್ದ ಅಧಿಕಾರಿಗಳ ಹಾಗೂ ಬಿಎಲ್‌ಓಗಳ ತುರ್ತು ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪಟ್ಟಣದಲ್ಲಿ 15,618 ಜನರಿಗೆ ಲಸಿಕೆ ಹಾಕಿದ್ದು, ಬಾಕಿ ಉಳಿದಿರುವ 2400 ಜನರನ್ನು 3-4 ದಿನಗಳಲ್ಲಿ ಪತ್ತೆ ಮಾಡಿ ಲಸಿಕೆ ಹಾಕಿಸಲೇಬೇಕೆಂದು ತಾಕೀತು ಮಾಡಿದ ನಜ್ಮಾ ಅವರು ಲಸಿಕೆ ಹಾಕಿಸಿಕೊಳ್ಳಲು ಒಪ್ಪದಿದ್ದಾಗ ಪೊಲೀಸರ ನೆರವು ಪಡೆದುಕೊಳ್ಳಿ ಎಂದು ಆಶಾ ಹಾಗೂ ಆರೋಗ್ಯ ಕಾರ್ಯಕರ್ತರಿಗೆ  ಕರೆ ನೀಡಿದರು.

ಜನರ ಆರೋಗ್ಯ ಕಾಪಾಡಲು ಸರ್ಕಾರಿ ಲಸಿಕಾ ಅಭಿಯಾನವನ್ನು ಸಂಪೂರ್ಣಗೊಳಿಸಲು ಕಟ್ಟುನಿಟ್ಟಿನ ಆದೇಶ ಮಾಡಿದ್ದು, ಒಂದು ವೇಳೆ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕಿದರೆ, ಅಂತಹವರು ಮುಂದಿನ ದಿನಗಳಲ್ಲಿ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಾರೆ ಎಂದು ನಜ್ಮಾ ಹೇಳಿದರು.

ಈ ವೇಳೆ ಬಿಎಲ್‌ಓಗಳಾದ ಗೋವಿಂದಪ್ಪ ಸಾವಜ್ಜಿ, ದಂಡಿ ತಿಪ್ಪೇಸ್ವಾಮಿ, ಕರಿಬಸಪ್ಪ ಮತ್ತಿತರರು ಲಸಿಕೆ ಹಾಕಿಸಿಕೊಳ್ಳುವಂತೆ ಜನರಿಗೆ ತಿಳಿಸಲು ಹೋದರೆ ನಮಗೆ ಬೈಯ್ಯುತ್ತಾರೆ. ಮೊದಲು ಪಟ್ಟಣದ ಅವ್ಯವಸ್ಥೆ ಸರಿಪಡಿಸಿ ಎಂದು ಜೋರು ಮಾಡುತ್ತಾರೆಂದು ಅಸಹಾಯಕತೆ ವ್ಯಕ್ತಪಡಿಸಿದರು.

ಆಗ ಪಿಎಸ್‌ಐ ರವಿಕುಮಾರ್ ಅವರು ಅಂಥವರ ಬಗ್ಗೆ ಮಾಹಿತಿ ಕೊಡಿ ಎಂದರು.

ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ನಟರಾಜ್  ವೈದಾಧಿಕಾರಿ ಡಾ. ಲಕ್ಷ್ಮಿದೇವಿ, ಉಪತಹಶೀಲ್ದಾರ್ ಆರ್. ರವಿ, ಪ್ರಭಾರ ಮುಖ್ಯಾಧಿಕಾರಿ ಗಣೇಶ್, ಕಂದಾಯ ನಿರೀಕ್ಷಕ ಆನಂದ್, ಗ್ರಾಮ ಲೆಕ್ಕಾಧಿಕಾರಿ ಕೊಟ್ರೇಶ್, ಪ್ರೊಬೇಷನರಿ ಪಿಎಸ್ಐ ಪಾಂಡುರಂಗ, ಪರಿಸರ ಇಂಜಿನಿಯರ್ ಉಮೇಶ್ ಮತ್ತಿತರರು ಸಭೆಯಲ್ಲಿದ್ದರು.

error: Content is protected !!