ಜಿಎಂಐಟಿ ಕಾಲೇಜಿನ ಆವರಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ಗಾಂಧಿ ಭವನ, ಪೊಲೀಸ್ ಪಬ್ಲಿಕ್ ಶಾಲೆ ಹಾಗೂ ಜಿಎಂಐಟಿ ಕೇಂದ್ರ ಗ್ರಂಥಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಲ್ಲೆಯ ಹಿರಿಯ ಸ್ವಾತಂತ್ರ್ಯ ಹೋರಾಟಗಾರರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಗಾಂಧಿ ಭವನ, ಪೊಲೀಸ್ ಪಬ್ಲಿಕ್ ಶಾಲೆ, ಜಿಎಂ ಕೇಂದ್ರ ಗ್ರಂಥಾಲಯ ಉದ್ಘಾಟನೆ
ಅಲ್ಪ ಅವಧಿಯಲ್ಲೇ ಸರ್ಕಾರಕ್ಕೆ ಮಹತ್ವಪೂರ್ಣ ಆರಂಭ: ಕೇಂದ್ರ ಗೃಹ ಸಚಿವ ಅಮಿತ್ ಷಾ
ದಾವಣಗೆರೆ, ಆ. 2 – ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡುವ ಮೂಲಕ ಕರ್ನಾಟಕದಲ್ಲಿ ಬಿಜೆಪಿ ಬಲಗೊಳಿಸುವ ಕಾರ್ಯ ಮಾಡಲಾಗಿದೆ ಎಂಬ ಭಾವನೆ ವರಿಷ್ಠರಲ್ಲಿ ಬಂದಿದೆ ಎಂದು ಹೇಳುವ ಮೂಲಕ ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಅಮಿತ್ ಷಾ ಅವರು ಬೊಮ್ಮಾಯಿಗೆ ಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.
ನಗರದ ಜಿ.ಎಂ.ಐ.ಟಿ. ಕಾಲೇಜಿನ ಆವರಣದಲ್ಲಿ ಇಂದು ಆಯೋಜಿಸಲಾಗಿದ್ದ ಗಾಂಧಿ ಭವನ, ಪೊಲೀಸ್ ಪಬ್ಲಿಕ್ ಶಾಲೆ ಹಾಗೂ ಜಿಎಂಐಟಿ ಕೇಂದ್ರ ಗ್ರಂಥಾಲಯ ಉದ್ಘಾಟನಾ ಕಾರ್ಯಕ್ರಮಗಳನ್ನು ನೆರವೇರಿಸಿ ಮಾತನಾ ಡುತ್ತಿದ್ದ ಅಮಿತ್ ಷಾ, ಬೊಮ್ಮಾಯಿ ಅವರು ಮುಖ್ಯಮಂತ್ರಿ ಯಾದ ನಂತರ ಕೈಗೊಳ್ಳುತ್ತಿರುವ ಕಾರ್ಯಗಳನ್ನು ದೆಹಲಿ ವರಿಷ್ಠರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಅವರು ಅಲ್ಪ ಅವಧಿಯಲ್ಲೇ ಸರ್ಕಾರಕ್ಕೆ ಮಹತ್ವಪೂರ್ಣ ಆರಂಭ ನೀಡಿದ್ದಾರೆ ಎಂದರು.
ಸರ್ಕಾರ ನಡೆಸುವಲ್ಲಿ ಹಾಗೂ ಸಾರ್ವಜನಿಕ ಜೀವನದಲ್ಲಿ ಬೊಮ್ಮಾಯಿ ಅನುಭವಿಯಾಗಿ ದ್ದಾರೆ. ಬಹಳ ವರ್ಷಗಳಿಂದ ಅವರು ಬಿಜೆಪಿಯಲ್ಲಿದ್ದಾರೆ. ಅವರ ನೇತೃತ್ವದಲ್ಲಿ ಕರ್ನಾಟಕದಲ್ಲಿ ಬಿಜೆಪಿ ಇನ್ನೊಮ್ಮೆ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ನನಗಿದೆ ಎಂದವರು ಹೇಳಿದರು.
ಕರ್ನಾಟಕದಲ್ಲಿ ಹೊಸ ವ್ಯಕ್ತಿಗೆ ಅವಕಾಶ ನೀಡುವಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ತಿಳಿಸಿದ್ದರು. ಅದರಂತೆ ಬೊಮ್ಮಾಯಿ ಅವರಿಗೆ ಮುಖ್ಯಮಂತ್ರಿ ಹುದ್ದೆಯ ಜವಾಬ್ದಾರಿ ನೀಡಲಾಗಿತ್ತು ಎಂದ ಅಮಿತ್ ಷಾ, ಯಡಿಯೂರಪ್ಪ ಅವಧಿಯಲ್ಲಿ ಕರ್ನಾಟಕದಲ್ಲಿ ವಿಕಾಸದ ಯುಗ ಆರಂಭವಾಗಿತ್ತು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ತಿಂಗಳಲ್ಲೇ ರಾಜ್ಯದ 90% ಜನರಿಗೆ ಲಸಿಕೆ
ಭಾರತ ವಿಶ್ವದಲ್ಲೇ ಅತಿ ದೊಡ್ಡ ಲಸಿಕಾ ಅಭಿಯಾನ ಆರಂಭಿಸಿದೆ. ಒಂದೇ ದಿನ ದೇಶದ 1.28 ಕೋಟಿ ಜನರಿಗೆ ನಾವು ಲಸಿಕೆ ನೀಡಿದ್ದೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿದ್ದಾರೆ.
ಕರ್ನಾಟಕದಲ್ಲಿ ಇದುವರೆಗೂ 5.20 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. 1.20 ಕೋಟಿ ಜನರು ಎರಡೂ ಡೋಸ್ ಲಸಿಕೆ ಪಡೆದಿದ್ದಾರೆ. ಈ ತಿಂಗಳ ಅಂತ್ಯದೊಳಗೆ ರಾಜ್ಯದ ಶೇ.90ರಷ್ಟು ಜನರಿಗೆ ಲಸಿಕೆ ನೀಡುವ ವಿಶ್ವಾಸವಿದೆ ಎಂದವರು ತಿಳಿಸಿದರು.
ಕೆಲವೆಡೆ ಲಸಿಕೆ ಪಡೆಯಲು ಹಿಂಜರಿಕೆ ಇದೆ. ಬಿಜೆಪಿ ಕಾರ್ಯಕರ್ತರು ಅಂಥವರ ಮನವೊಲಿಸಿ ಲಸಿಕಾ ಕೇಂದ್ರಕ್ಕೆ ಕರೆ ತರಬೇಕು ಎಂದು ಹೇಳಿದ ಅಮಿತ್ ಷಾ, ಶೇ.100ರಷ್ಟು ಜನರಿಗೆ ಲಸಿಕೆ ನೀಡುವುದೇ ಕೊರೊನಾ ವಿರುದ್ಧ ಜಯ ಗಳಿಸುವ ಸಾಧನ ಎಂದು ಹೇಳಿದರು.
ತಮ್ಮದು ಕಾರ್ಯ ಮಾಡುವ ಸರ್ಕಾರ: ಸಿಎಂ
ದಾವಣಗೆರೆ, ಆ. 2 – ತಮ್ಮದು ಮಾತನಾಡುವ ಸರ್ಕಾರ ವಲ್ಲ, ಕಾರ್ಯ ಮಾಡುವ ಸರ್ಕಾರ ಎಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆಶಯದಂತೆ ಅಭಿವೃದ್ಧಿಯ ಸಂಕಲ್ಪ ಮಾಡಿರುವುದಾಗಿ ಹೇಳಿದ್ದಾರೆ.
ನಗರದ ಜಿ.ಎಂ.ಐ.ಟಿ. ಕಾಲೇಜಿನ ಆವರಣದಲ್ಲಿ ಆಯೋಜಿ ಸಲಾಗಿದ್ದ ಗಾಂಧಿ ಭವನ, ಪೊಲೀಸ್ ಪಬ್ಲಿಕ್ ಶಾಲೆ ಹಾಗೂ ಜಿಎಂಐಟಿ ಗ್ರಂಥಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದೇಶ ಈಗ 75ನೇ ಸ್ವಾತಂತ್ರ್ಯ ವರ್ಷಾಚರಣೆಯಲ್ಲಿದೆ. 100ನೇ ಸ್ವಾತಂತ್ರ್ಯೋತ್ಸವದ ವೇಳೆಗೆ ಭಾರತ ವಿಶ್ವ ಮಾನ್ಯ ಹಾಗೂ ವಿಶ್ವ ಗುರುವಿನ ಸ್ಥಾನ ಪಡೆಯಬೇಕು. ಇದಕ್ಕಾಗಿ ಈ ವರ್ಷ ಸಂಕಲ್ಪ ಮಾಡಬೇಕು ಎಂದು ಪ್ರಧಾನಿ ಕರೆ ನೀಡಿದ್ದಾರೆ. ಅದೇ ದಿಸೆಯಲ್ಲಿ ಕಾರ್ಯ ನಿರ್ವಹಿಸುವುದಾಗಿ ಬೊಮ್ಮಾಯಿ ಹೇಳಿದರು.
75ನೇ ವರ್ಷದ ಈ ಸಂದರ್ಭದಲ್ಲಿ 14 ಯೋಜನೆಗಳನ್ನು ರೂಪಿಸಿದ್ದೇವೆ. ಗ್ರಾಮ ಪಂಚಾಯ್ತಿಗಳ ಸಬಲೀಕರಣ, ಸ್ತ್ರೀ ಶಕ್ತಿ, ಯುವಕರು, ದೀನ ದಲಿತರು, ಪರಿಶಿಷ್ಟರು ಹಾಗೂ ಹಿಂದುಳಿದವರಿಗೆ ಕೌಶಲ್ಯ, 750 ಗ್ರಾಮಗಳಿಗೆ ವಸತಿ ಕಲ್ಪಿಸುವುದೂ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ ಎಂದು ಹೇಳಿದರು.
ಪಿ.ಯು.ಸಿ.ಯಿಂದ ಪಿ.ಜಿ.ವರೆಗೆ ಓದುವ ರೈತರ ಮಕ್ಕಳಿಗಾಗಿ ಶಿಷ್ಯ ವೇತನ ಯೋಜನೆ ರೂಪಿಸಿದ್ದೇವೆ. ಸೆ.5ರಂದು ಕೇಂದ್ರ ಕೃಷಿ ಸಚಿವರು ಈ ಯೋಜನೆಗೆ ಚಾಲನೆ ನೀಡಲಿದ್ದು, 20 ಲಕ್ಷ ರೈತ ಮಕ್ಕಳಿಗೆ ನೆರವು ಸಿಗಲಿದೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬಜೆಟ್ನಲ್ಲಿ ನೀಡಿದ ಕಾರ್ಯಕ್ರಮಗಳನ್ನು ಸಾಕಾರಗೊಳಿಸಲು ಪಣ ತೊಟ್ಟಿದ್ದೇವೆ. ಇನ್ನಷ್ಟು ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ರೂಪಿಸುತ್ತೇವೆ ಎಂದು ಬೊಮ್ಮಾಯಿ ಹೇಳಿದರು.
ಯಡಿಯೂರಪ್ಪ ರೈತ ಹೋರಾಟಗಾರರು. ರಾಜ್ಯದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಹೇಳಿದ ಬೊಮ್ಮಾಯಿ, ಅವರ ನೇತೃತ್ವದಲ್ಲಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ, ಮುನ್ನಡೆಯುತ್ತೇವೆ ಎಂದಿದ್ದಾರೆ.
ಆಪ್ ಗಾಂಧಿ ಕೀ ಭೂಮಿ ಸೆ ಆಯೆ ಹೈ
ನಗರದಲ್ಲಿ ನಿರ್ಮಾಣಗೊಂಡಿರುವ ಗಾಂಧಿ ಭವನದ ಉದ್ಘಾ ಟನೆಗಾಗಿ ಗಾಂಧಿಯವರ ಗುಜರಾತ್ ರಾಜ್ಯದವರೇ ಆದ ಅಮಿತ್ ಷಾ ಆಗಮಿಸಿರುವುದು ಯೋಗಾಯೋಗ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಅಮಿತ್ ಷಾ ಅವರನ್ನು ಉದ್ದೇಶಿಸಿ ಹಿಂದಿಯಲ್ಲಿ ಮಾತನಾಡಿದ ಬೊಮ್ಮಾಯಿ, §ಆಪ್ ಗಾಂಧಿ ಕಿ ಭೂಮಿ ಸೆ ಆಯೆ ಹೈ. ಇಸ್ ಲಿಯೇ ಬಹುತ್ ಸಂತೃಷ್ಟ್ ಹೂ. ಯೇ ಯೋಗಾಯೋಗ್ ಖುಷ್ ನಸೀಬ್ ಹೈ’ (ನೀವು ಗಾಂಧಿ ನಾಡಿನಿಂದ ಬಂದಿದ್ದೀರಿ. ಇದರಿಂದ ನನಗೆ ಬಹಳ ಸಂತೃಪ್ತಿಯಾಗಿದೆ. ಈ ಯೋಗಾಯೋಗ ನಮ್ಮ ಅದೃಷ್ಟ) ಎಂದು ತಿಳಿಸಿದರು.
ರಕ್ಷಣಾ ಕಾರಣದಿಂದ ಕಾರ್ಯಕ್ರಮದ ಸ್ಥಳ ಬದಲಾವಣೆ
ನಗರದಲ್ಲಿರುವ ಗಾಂಧಿ ಭವನ ಹಾಗೂ ಹರಿಹರ ತಾಲ್ಲೂಕಿನ ಕೊಂಡಜ್ಜಿಯಲ್ಲಿನ ಪೊಲೀಸ್ ಪಬ್ಲಿಕ್ ಶಾಲೆಗಳ ಉದ್ಘಾಟನೆ ಯನ್ನು ಸ್ಥಳದಲ್ಲೇ ನೆರವೇರಿಸಲು ಮೊದಲು ನಿರ್ಧರಿಸಲಾಗಿತ್ತಾದರೂ, ರಕ್ಷಣಾ ಕಾರಣಗಳಿಂದಾಗಿ ಕೊನೆ ಕ್ಷಣದಲ್ಲಿ ಉದ್ಘಾಟನೆಯನ್ನು ಜಿಎಂಐಟಿ ಕಾಲೇಜಿನ ಆವರಣದಲ್ಲೇ ನೆರವೇರಿಸಲಾ ಯಿತು. ಬಿಗಿ ಭದ್ರತೆಯ ನಡುವೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಜಿಎಂಐಟಿ ಕ್ಯಾಂಪಸ್ನಲ್ಲಿ ಕಾಲೇಜಿನ ಗ್ರಂಥಾಲಯದ ಉದ್ಘಾಟನೆ ನೆರವೇರಿಸಿ ದರು. ನಂತರ ಗಾಂಧಿ ಭವನ ಹಾಗೂ ಪೊಲೀಸ್ ಪಬ್ಲಿಕ್ ಶಾಲೆಗಳ ಉದ್ಘಾಟನೆ ನೆರವೇರಿಸಿದರು.
ಮಧ್ಯಾಹ್ನ 3.30ರ ವೇಳೆಗೆ ಕಾರ್ಯಕ್ರಮ ಆರಂಭವಾಗಿ, 4.30ಕ್ಕೆ ಪೂರ್ಣಗೊಂಡಿತು.
ಇದಕ್ಕೂ ಮುನ್ನ ಜಿಎಂಐಟಿ ಹೆಲಿಪ್ಯಾಡ್ಗೆ ಹುಬ್ಬಳ್ಳಿಯಿಂದ ಆಗಮಿಸಿದ ಅಮಿತ್ ಷಾ ಅವರೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದ್ದರು.
ಭದ್ರತೆ ಹಾಗೂ ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪಾಲ್ಗೊಳ್ಳಬೇಕಿದ್ದ ಮೂರು ಸ್ಥಳಗಳ ಕಾರ್ಯಕ್ರಮವನ್ನು ದಾವಣಗೆರೆ ಜಿಎಂಐಟಿ ಕಾಲೇಜಿನಲ್ಲಿ ಒಂದೇ ಕಡೆ ನಡೆಸುತ್ತಿದ್ದೇವೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಸ್ಪಷ್ಟಪಡಿಸಿದರು.
ಎಡಿಜಿಪಿ ಎಂ.ಎಂ. ಸಲೀಮ್, ಎಡಿಜಿಪಿ ಕ್ರೈಮ್ ಹಿತೇಂದ್ರ, ದಾವಣಗೆರೆ ಪೂರ್ವ ವಲಯ ಐಜಿಪಿ, ಎಸ್ಪಿ ಸಿ.ಬಿ. ರಿಷ್ಯಂತ್ ಹಲವು ಹಲವು ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು.
ದೇಶದಲ್ಲೀಗ ಸಾವಿರಾರು ಆಕ್ಸಿಜನ್ ಘಟಕಗಳನ್ನು ತೆರೆಯುವ ಕಾರ್ಯ ನಡೆದಿದೆ. ಮುಂದೊಮ್ಮೆ ಕೊರೊನಾದ ಇನ್ನೊಂದು ಅಲೆ ಬಂದರೂ ಸಹ, ಅತ್ಯಂತ ವೇಗವಾಗಿ ಆಕ್ಸಿಜನ್ ವಿಷಯದಲ್ಲಿ ಭಾರತ ಆತ್ಮನಿರ್ಭರ್ ಆಗಲಿದೆ. ಆಕ್ಸಿಜನ್ಗಾಗಿ ಬೇರೆಯವರನ್ನು ಅವಲಂಬಿಸುವ ಅಗತ್ಯ ಬರುವುದಿಲ್ಲ ಎಂದು ಗೃಹ ಸಚಿವರು ಹೇಳಿದ್ದಾರೆ.
ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅಮಿತ್ ಷಾ ಅವರು ಈ ಹಿಂದೆ ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ತ್ವರಿತ ವರದಿಗಾಗಿ ಮೊಬೈಲ್ ಫೊರೆನ್ಸಿಕ್ ಲ್ಯಾಬ್ ತೆರೆಯಬೇಕು ಹಾಗೂ ಅಪರಾಧ ನಡೆದ ಸ್ಥಳದಲ್ಲಿ ತನಿಖೆಗಾಗಿ ಆಫೀಸರ್ ಆನ್ ಸೀನ್ ನೇಮಿಸಬೇಕು ಎಂದು ತಿಳಿಸಿದ್ದರು. ಈ ಎರಡೂ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರಾದ ಬಿ.ಎಂ. ಶಿವಲಿಂಗಸ್ವಾಮಿ, ಶೆಟ್ರು ಸಿದ್ದರಾಮಯ್ಯ ಹಾಗೂ ಹೆಚ್. ಮರುಳಸಿದ್ದಪ್ಪ ಅವರನ್ನು ಸನ್ಮಾನಿಸಲಾಯಿತು.
ಶಾಸಕ ಎಸ್.ಎ. ರವೀಂದ್ರನಾಥ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಮೇಲೆ ಗೃಹ ಸಚಿವ ಆರಗ ಜ್ಞಾನೇಂದ್ರ, ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಕೃಷಿ ಸಚಿವ ಬಿ.ಸಿ. ಪಾಟೀಲ್, ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಶಾಸಕರುಗಳಾದ ಎಸ್.ವಿ. ರಾಮಚಂದ್ರ, ಪ್ರೊ. ಲಿಂಗಣ್ಣ, ಎಂ.ಪಿ. ರೇಣುಕಾಚಾರ್ಯ, ಕೆ. ಕರುಣಾಕರ ರೆಡ್ಡಿ, ಪರಿಷತ್ ಸದಸ್ಯ ಮೋಹನ್ ಕುಮಾರ್ ಕೊಂಡಜ್ಜಿ, ಪಾಲಿಕೆ ಮೇಯರ್ ಎಸ್.ಟಿ. ವೀರೇಶ್, ದೂಡಾ ಅಧ್ಯಕ್ಷ ದೇವರಮನೆ ಶಿವಕುಮಾರ್, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ. ಎ.ಹೆಚ್. ಶಿವಯೋಗಿಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಎಂ. ವೀರೇಶ್, ಬಿಜೆಪಿ ಮುಖಂಡರಾದ ಯಶವಂತರಾವ್ ಜಾಧವ್, ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಡಾ. ಪಿ.ಎಸ್.ಹರ್ಷ, ಜಿಲ್ಲಾಧಿಕಾರಿ ಮಹಾತೇಶ್ ಬೀಳಗಿ, ಜಿ.ಪಂ. ಸಿಇಒ ವಿಜಯ ಮಹಾಂತೇಶ್ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ ಅವರು ಸ್ವಾಗತಿಸಿದರೆ, ಸಂಸದ ಜಿ.ಎಂ. ಸಿದ್ದೇಶ್ವರ ವಂದಿಸಿದರು.