ನಗರದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ವಿವರಣೆ
ದಾವಣಗೆರೆ, ಸೆ.1 – ಮುಂಬರುವ ತಾಲ್ಲೂಕು, ಜಿಲ್ಲಾ ಪಂಚಾಯ್ತಿ ಹಾಗೂ ವಿಧಾನಸಭಾ ಚುನಾವಣೆಗಳಲ್ಲಿ ಜಯಭೇರಿ ಭಾರಿಸಲು ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡ ಲಾಗುವುದು. ಪದಾಧಿಕಾರಿಗಳಿಗೆ ತರಬೇತಿ ನೀಡಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದರು.
ನಗರದ ಹೋಟೆಲ್ ಪೂಜಾ ಇಂಟರ್ ನ್ಯಾಷನಲ್‌ನಲ್ಲಿ ಬುಧವಾರ ಸಂಜೆ ಪತ್ರಿಕಾಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ಅವರು, ಈ ತಿಂಗಳೊಳಗೆ ಎಲ್ಲಾ ಗ್ರಾಮ ಪಂಚಾಯ್ತಿ ಮಿತಿಗಳನ್ನು ಹಾಗೂ ಮುಂದಿನ ಎರಡು ತಿಂಗಳಲ್ಲಿ ಬೂತ್ ಕಮಿಟಿಗಳು ರಚನೆಯಾಗಬೇಕಿದೆ. ಪಕ್ಷವನ್ನು ಮಾಸ್ ಬೇಸ್‌ನಿಂದ ಕೇಡರ್ ಬೇಸ್ ಪಕ್ಷ ಮಾಡಲು ಕಾರ್ಯ ಯೋಜನೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಬಿಜೆಪಿಯದ್ದು ಅನೈತಿಕ, ನಿರ್ಜೀವ ಸರ್ಕಾರವಾಗಿದೆ. ಜನರು ಬೇಸತ್ತಿದ್ದಾರೆ. ಭ್ರಮನಿರಸನ ಗೊಂಡಿದ್ದಾರೆ. ಹೀಗಾಗಿ ಮತ್ತೆ ಕಾಂಗ್ರೆಸ್ ಆಡಳಿತ ಬಯಸುತ್ತಿದ್ದಾರೆ ಎಂದು ಹೇಳಿದರು.
ಜೊಲ್ಲೆಗೆ ಝೀರೋ ಪ್ಲಸ್ ಭದ್ರತೆ ಏಕೆ? : ಶಶಿಕಲಾ ಜೊಲ್ಲೆ ಅವರು ಮೊಟ್ಟೆ ಖರೀದಿಯಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆಂದು ಕಾಂಗ್ರೆಸ್ ಆರೋಪಿಸಿ ದ್ದರೂ ಜೊಲ್ಲೆ ಏರ್‌ಪೋರ್ಟ್‌ನಿಂದ ರಾಜಭವನಕ್ಕೆ ಝೀರೋ ಟ್ರಾಫಿಕ್‌ನಲ್ಲಿ ತೆರಳುತ್ತಾರೆಂದರೆ ಬಿಜೆಪಿಯ ಸಿದ್ಧಾಂತಗಳು, ವಿಚಾರಗಳು ಎಲ್ಲಿ ಹೋದವು? ಇದನ್ನು ಜನ ಗಮನಿಸುತ್ತಿದ್ದಾರೆ ಎಂದರು.
ಮೂರನೇ ಅಲೆಗೆ ಬಿಜೆಪಿಯೇ ಹೊಣೆ: ದೇವ ರಾಜ ಅರಸು ಅವರ ಜನ್ಮದಿನ ಆಚರಣೆಗೆ ನಮಗೆ ಅನುಮತಿ ನೀಡದ ಸರ್ಕಾರ ಜನಾಶೀರ್ವಾದ ಯಾತ್ರೆ ಗೆ ಅನುಮತಿ ಕೊಟ್ಟಿದ್ದು. ಮುಂದಿನ ದಿನಗಳಲ್ಲಿ 3ನೇ ಅಲೆ ಬಂದರೆ ಅದು ಬಿಜೆಪಿಯವರಿಂದಲೇ ಎಂದರು.
ಹಿರಿಯರನ್ನು ಕಸದ ಬುಟ್ಟಿಗೆ ಹಾಕುವುದು ಬಿಜೆಪಿ ಸಂಸ್ಕೃತಿ: ಹಿರಿಯೂರು ಪಟ್ಟಣದಲ್ಲಿ ಕಾರ್ಯಕರ್ತರ ಸಭೆಗೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿರುವ ಹಿರಿಯರನ್ನು ಕಸದ ಬುಟ್ಟಿಗೆ ಹಾಕುವುದು ಬಿಜೆಪಿ ಸಂಸ್ಕೃತಿಯಾಗಿದೆ. ಈಗಾಗಲೇ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಅಡ್ವಾಣಿ, ಮುರುಳಿ ಮನೋಹರ್ ಜೋಷಿ ಸೇರಿದಂತೆ ಉಮಾ ಭಾರತಿ ಅವರನ್ನು ಮನೆಯಲ್ಲಿ ಕೂರಿಸಿದ ಕೀರ್ತಿ ಬಿಜೆಪಿಗಿದೆ ಎಂದು ಸಲೀಂ ಅಹ್ಮದ್ ಹೇಳಿದರು.
ಜಿಲ್ಲೆಯ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್
ಜಿಲ್ಲೆಯಲ್ಲಿ ಈ ಬಾರಿ ಕಾಂಗ್ರೆಸ್ ಇತಿಹಾಸ ನಿರ್ಮಿಸಲಿದೆ. ಜಿಲ್ಲೆಯ ಏಳೂ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸ ಲಿದೆ ಎಂದು ಸಲೀಂ ಅಹ್ಮದ್ ಹೇಳಿದರು.
ಕ್ಷಮೆ ಯಾತ್ರೆ ನಡೆಸಲಿ
ಕೇಂದ್ರದ ನಾಲ್ಕು ಸಚಿವರು ಜನಾಶೀರ್ವಾದ ಯಾತ್ರೆ ನಡೆಸಿದ್ದು ಯಾವ ಪುರುಷಾರ್ಥಕ್ಕಾಗಿ ಎಂದು ಸಲೀಂ ಅಹ್ಮದ್ ಪ್ರಶ್ನಿಸಿದರು. ಇವರ ರಾಜಕೀಯ ನಾಟಕಕ್ಕೆ ನಗಬೇಕೋ ಅಳಬೇಕೋ ತಿಳಿಯುತ್ತಿಲ್ಲ. ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದಿದ್ದಕ್ಕೆ, ಪೆಟ್ರೋಲ್, ಡೀಸೆಲ್, ಅಡುಕ ಅನಿಲ ದರ ಏರಿಸಿದ್ದಕ್ಕೆ, ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಹಣವನ್ನು ತರಲು ಸಾಧ್ಯವಾಗದಿದ್ದಕ್ಕೆ ಇವರು `ಜನಾಶೀರ್ವಾದ ಯಾತ್ರೆ’ ಬದಲಿಗೆ `ಕ್ಷಮೆಯಾತ್ರೆ’ ಮಾಡಬೇಕು ಎಂದು ಹೇಳಿದರು.
ಪಕ್ಷದಿಂದ 2.5 ಕೋಟಿ ಜನರಿಗೆ ಸಹಾಯ
ಕಳೆದ ಎರಡು ತಿಂಗಳಲ್ಲಿ 224 ಕ್ಷೇತ್ರಗಳಲ್ಲಿನ 2.5 ಕೋಟಿ ಜನರಿಗೆ ಕಾಂಗ್ರೆಸ್ ಸಹಾಯ ಹಸ್ತ ಚಾಚಿದೆ ಎಂದು ಸಲೀಂ ಅಹ್ಮದ್ ಹೇಳಿದರು.
93.50 ಲಕ್ಷ ಜನರಿಗೆ ಫುಡ್ ಕಿಟ್, 3 ಲಕ್ಷ ಜನರಿಗೆ ಪಿಪಿಇ ಕಿಟ್ ವಿತರಿಸಲಾಗಿದೆ. 1335 ಆಂಬ್ಯುಲೆನ್ಸ್ ನೀಡುವುದೂ ಸೇರಿದಂತೆ
2.5 ಕೋಟಿ ಜನರಿಗೆ ಸಹಾಯ ಮಾಡಲಾಗಿದೆ ಎಂದರು.
ಮೋದಿಗೆ ಆಸ್ಕರ್ ಪ್ರಶಸ್ತಿ ನೀಡಬೇಕು: ಪಕ್ಷ ಆಡಳಿತಕ್ಕೆ ಬಂದರೆ ಸ್ವರ್ಗ ತೋರಿಸುವುದಾಗಿ ಹೇಳಿದ್ದ ಮೋದಿ ಜನತೆಗೆ ನರಕ ತೋರಿಸಿದ್ದಾರೆ ಎಂದು ಸಲೀಂ ಅಹ್ಮದ್ ಹೇಳಿದರು.
ಕೊರೊನಾ ವೇಳೆ ಜನತೆ ಆಕ್ಸಿಜನ್, ವೆಂಟಿಲೇಟರ್, ಬೆಡ್‌ಗಳು, ಆಂಬ್ಯುಲೆನ್ಸ್‌ಗಳು ಸಿಗದೆ ಸಾವನ್ನಪ್ಪಿದ್ದಾರೆ. ಇಂತಹ ನರಕ ತೋರಿಸಿದ ಕೀರ್ತಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಸಲ್ಲುತ್ತದೆ. ಸುಳ್ಳು ಹೇಳುವ ವಿಚಾರಕ್ಕೆ ಮೋದಿಗೆ ಆಸ್ಕರ್ ಪ್ರಶಸ್ತಿ ನೀಡಬೇಕು ಎಂದರು ಲೇವಡಿ ಮಾಡಿದರು.
ಪ್ರಧಾನಿ ಮೋದಿ ಕೇವಲ ಮನ್ ಕೀ ಬಾತ್‌ನಲ್ಲಿ ಮುಳುಗಿ ಹೋಗದೇ ಕಾಮ್‌ಕಿ ಬಾತ್ ಬಗ್ಗೆಯೂ ಮಾತನಾಡಬೇಕು ಎಂದು ಹೇಳಿದರು.
ಬೇಜ್ನೇವಾಲೇ.. ಖರೀದ್ನೇ ವಾಲೆ: ಮೋದಿ ಹಾಗೂ ಅಮಿತ್ ಷಾ ಬೇಜ್‌ನೇ ವಾಲೇ ಯಾದರೆ ಅಂಬಾನಿ ಹಾಗೂ ಅದಾನಿ ಖರೀದ್‌ನೇ ವಾಲೆ ಎಂದು ಸಲೀಂ ಲೇವಡಿ ಮಾಡಿದರು.
ಬಿಎಸ್‌ವೈ ಕಣ್ಣೀರಿನ ಕಥೆ ಏನು?: ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್. ಯಡಿಯೂರಪ್ಪನವರನ್ನು ಬದಲಾಯಿಸಲಾಯಿತು. ಅವರು ಕಣ್ಣೀರು ಹಾಕಿ ರಾಜೀನಾಮೆ ನೀಡಿದ್ದರು. ಆ ಕಣ್ಣೀರಿನ ಹಿಂದಿನ ಕಥೆ ಏನು ? ಸರ್ಕಾರದ ಬಗ್ಗೆ ಕಾಂಗ್ರೆಸ್ ಮಾಡಿದ್ದ ಆರೋಪಕ್ಕೆ ಪ್ರತಿಫಲವಾಗಿ ಬದಲಿಸಲಾಯಿತೋ ಅಥವಾ ಪಕ್ಷದ ಮುಖಂಡರು ಹೇಳಿದ್ದಕ್ಕೋ ಎಂಬುದನ್ನು ಬಿಜೆಪಿ ಮುಖಂಡರು ಜನತೆಗೆ ಸ್ಪಷ್ಟಪಡಿಸಲಿ ಎಂದರು.
ಕೇಂದ್ರ-ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲ: ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆಡಳಿತ ನಡೆಸುವಲ್ಲಿ ಸಂಪೂರ್ಣ ವಿಫಲವಾಗಿವೆ ಎಂದು ಸಲೀಂ ಹೇಳಿದರು.
ಕೊರೊನಾ ಓಡಿಸುವುದಾಗಿ ಚಪ್ಪಾಳೆ, ಗಂಟೆ ಬಾರಿಸಿ, ದೀಪ ಹಚ್ಚಿಸಿದ ಪ್ರಧಾನಿಗೆ 2ನೇ ಅಲೆಯನ್ನೂ ತಡೆಯಲಾಗಲಿಲ್ಲ. ಕೊರೊನಾಕ್ಕಾಗಿ ಘೋಷಣೆ ಮಾಡಿದ 20 ಲಕ್ಷ ಕೋಟಿ ರೂ. ಯಾತಕ್ಕೆ ಖರ್ಚು ಮಾಡಿದರೆಂಬ ಮಾಹಿತಿ ಇಲ್ಲ. ಪಿಎಂ ಕೇರ್ಸ್ ಹಣದ ಬಗ್ಗೆಯೂ ಮಾಹಿತಿ ಇಲ್ಲ. 2 ಸಾವಿರ ಕೋಟಿ ರೂ. ಭ್ರಷ್ಟಾಚಾರ ನಡೆದಿದೆ ಮಾಹಿತಿ ಕೊಡಿ ಎಂದು ಕೇಳಿದರೂ ಯಾರೂ ಉತ್ತರಿಸಿಲ್ಲ ಎಂದರು.
ರಾಜ್ಯದಲ್ಲಿ 2ನೇ ಅಲೆ ಬರುವ ಎಚ್ಚರಿಕೆ ಇದ್ದರೂ ಮುಖ್ಯಮಂತ್ರಿ ಹಾಗೂ ಸಚಿವರ ಬದಲಾವಣೆಯಲ್ಲೇ ಕಾಲ ಕಳೆಯಲಾಯಿತು. ಮತ್ತೊಂದು ತಿಂಗಳು ರಮೇಶ್ ಜಾರಕಿಹೊಳೆಯ ಸಿಡಿ ಹಗರಣಕ್ಕೆ ಸಮಯ ವೆಚ್ಚ ಮಾಡಿದರು. ಕೊರೊನಾ ಬಗ್ಗೆ ಕಿಂಚಿತ್ತೂ ಜವಾಬ್ದಾರಿಯಿಲ್ಲದಂತೆ ಸರ್ಕಾರ ವರ್ತಿಸಿದೆ. ಕೊರೊನಾ ಸಾವುಗಳ ಲೆಕ್ಕದಲ್ಲೂ ಸುಳ್ಳು ಹೇಳಲಾಗುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಬಿ. ಮಂಜಪ್ಪ, ಕೆಪಿಸಿಸಿ ವಕ್ತಾರ ಡಿ.ಬಸವರಾಜ್, ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ನಿಖಿಲ್ ಕೊಂಡಜ್ಜಿ, ಲಿಂಗರಾಜ್ ಆನೆಕೊಂಡ, ಜಿ.ಹೆಚ್. ಮರಿಯೋಜಿರಾವ್, ಬಿ.ಹೆಚ್. ವೀರಭದ್ರಪ್ಪ, ಕೆ.ಎಸ್. ಬಸವರಾಜ್, ನಾಗೇಂದ್ರಪ್ಪ, ಸುಭಾಶ್ಚಂದ್ರ ಇತರರು ಉಪಸ್ಥಿತರಿದ್ದರು.