ಇಂದಿನ ಶಿಕ್ಷಣ ಜೀವನ ನಿರ್ವಹಣೆಯನ್ನು ಮಾತ್ರ ಕಲಿಸುತ್ತದೆ. ಮನಸ್ಸಿಗೆ ನೆಮ್ಮದಿ, ಶಾಂತಿ, ಧೈರ್ಯ ಕೊಡುವಂತಹ ಶಿಕ್ಷಣ ಇಲ್ಲವಾಗಿದೆ. ಮನುಷ್ಯನಿಗೆ ಕಷ್ಟ ಬಂದಾಗ ಅದನ್ನು ಹೇಗೆ ಎದುರಿಸಬೇಕು ಅನ್ನುವುದು ಇಂದಿನ ಶಿಕ್ಷಣದಲ್ಲಿ ಇಲ್ಲವಾಗಿದೆ.
– ವಿಜಯ ಅಭಯಶೇಖರ, ಸೂರೀಶ್ವರಜೀ.
ದಾವಣಗೆರೆ, ಸೆ.1 – ಸುಶಿಕ್ಷಿತರು, ಯುವಜನತೆ ಮನೋಕ್ಷೋಭೆಗೆ ಒಳಗಾಗಿ ತಮ್ಮ ಬದುಕನ್ನು ನಾಶ ಮಾಡಿಕೊಳ್ಳುತ್ತಿದ್ದಾರೆ. ಇದರ ಪರಿಹಾರಕ್ಕೆ ಅವರ ಬದುಕಿನಲ್ಲಿ ಶಾಂತಿ, ನೆಮ್ಮದಿ ನೆಲೆಸಬೇಕಿದೆ. ಈ ನಿಟ್ಟಿನಲ್ಲಿ ಜೈಲರ್ ಪುಸ್ತಕ ದಾರಿ ದೀಪವಾಗಲಿದೆ ಎಂದು ಜೈನಾಚಾರ್ಯ ಶ್ರೀ ವಿಜಯ ಅಭಯಶೇಖರ ಸೂರೀಶ್ವರಜೀ ತಿಳಿಸಿದರು.
ನಗರದ ಚೌಕಿಪೇಟೆಯಲ್ಲಿನ ಶ್ರೀ ಸುಪಾರ್ಶ್ವನಾಥ ಜೈನ ಮಂದಿರದಲ್ಲಿ ಇಂದು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಯುವ ಜನತೆ ಸೇರಿದಂತೆ ಸುಶಿಕ್ಷಿತರು ವಿವಿಧ ಹುದ್ದೆಗಳನ್ನು ಅಲಂಕರಿಸಿದರೂ ನಾನಾ ಕಾರಣಗಳಿಗೆ ಮನೋಕ್ಷೋಭೆಗೆ ಒಳಗಾಗಿ ನೆಮ್ಮದಿ, ಶಾಂತಿಯನ್ನೇ ಕಳೆದುಕೊಂಡು ಆತ್ಮಹತ್ಯೆ ದಾರಿ ಹಿಡಿಯುತ್ತಿರುವುದು ಸಹಜವಾಗಿದೆ. ಮನೋಕ್ಷೋಭೆಯಿಂದ ಹೊರ ಬಂದು ಮನಶ್ಯಾಂತಿ, ನೆಮ್ಮದಿ ಕಾಣುವ ದಾರಿಯನ್ನು ಕಾಣುವ ಬಗೆಯನ್ನು ಜೈಲರ್ ಪುಸ್ತಕದಲ್ಲಿ ಬರೆದಿದ್ದೇನೆ. ಅದನ್ನು ಓದಿದಲ್ಲಿ ಮನಸ್ಸಿಗೆ ಶಾಂತಿ ದೊರೆತು ಸುಂದರ ಬದುಕು ಕಟ್ಟಿಕೊಳ್ಳಬಹುದು ಎಂದು ಆಶಯ ವ್ಯಕ್ತಪಡಿಸಿದರು.
ಜೈನ, ಹಿಂದೂ, ಕ್ರಿಸ್ತ, ಮುಸ್ಲಿಂ ಎಲ್ಲಾ ಧರ್ಮೀಯರು, ಆಸ್ತಿಕ-ನಾಸ್ತಿಕರು, ಹಿರಿಯರು, ಯುವಜನರು ಓದುವ ಪುಸ್ತಕವಾಗಿದೆ. ಈ ಪುಸ್ತಕ ಒಮ್ಮೆ ಓದಿದಲ್ಲಿ ಮನಸ್ಸಿಗೆ ಶಾಂತಿ ದೊರಕುತ್ತದೆ. ಮೌಲ್ಯಗಳ ಅಳವಡಿಕೆಗೆ ಮತ್ತಷ್ಟು ಅನುಕೂಲ ಉಂಟಾಗಲಿದೆ ಎಂದರು.
ಈ ಪುಸ್ತಕದಲ್ಲಿ ಕೊನೆಗೆ ಕೆಲವು ಪ್ರಶ್ನೆಗಳಿನ್ನು ಇಡಲಾಗಿದ್ದು, ಅದಕ್ಕೆ ಉತ್ತರ ಕೊಟ್ಟವರಿಗೆ ಬಹುಮಾನ ನೀಡುತ್ತೇವೆಂದರು.
ಸಾಧು-ಸಂತರಿಗಾಗಿ ಸುಮಾರು 50ಕ್ಕೂ ಹೆಚ್ಚು ಪುಸ್ತಕ ಬರೆದಿದ್ದು, ಅದರಲ್ಲಿ ಶಾಸ್ತ್ರಗಳ ಅಭ್ಯಾಸ ಮಾಡಬಹುದಾಗಿದೆ. ಇನ್ನೂ ಜನರ ಕಲ್ಯಾಣದ ದೃಷ್ಟಿಯಿಂದ ಸುಮಾರು 15ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದೇನೆ. ಜೈಲರ್ ಪುಸ್ತಕ ಓದಿದ ಕೆಲವು ನಾಸ್ತಿಕರು ಕರ್ಮಕ್ಕೆ ಒಲವು ತೋರಿದ್ದಾರೆ ಅನ್ನುವುದು ವಿಶೇಷ ಎಂದರು.
ನಮ್ಮ ಇಂದಿನ ಕಷ್ಟಗಳು ಪೂರ್ವ ಜನ್ಮದ ಪಾಪ-ಕರ್ಮಗಳಿಗೆ ಶಿಕ್ಷೆ ಆಗಿರಬಹುದೆಂದು ತಿಳಿದು ನಡೆಯಬೇಕು. ಕಷ್ಟ ಬಂದಿದೆ ಎಂದು ಚಿಂತೆ ಮಾಡದೇ ಪರಿಹಾರ ಕಂಡುಕೊಳ್ಳುವಂತಹ ಚಿಂತನೆ ಮಾಡಬೇಕು, ಇದೇ ಸಾರಾಂಶವನ್ನು ಈ ಪುಸ್ತಕದಲ್ಲಿ ವಿವರಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀ ಸುಪಾರ್ಶ್ವನಾಥ ಜೈನ್ ಮಂದಿರದ ಅಧ್ಯಕ್ಷ ಜಗನ್ಲಾಲ್ ಜೈನ್, ಉಪಾಧ್ಯಕ್ಷ ನರೇಂದ್ರ ಜೈನ್, ಟ್ರಸ್ಟಿಗಳಾದ ರಮೇಶ್ ಜೈನ್, ಅಶೋಕ್ ಜೈನ್, ಭರತ್ ಜೈನ್, ಜಯಚಂದ್ರ ಜೈನ್, ಅಶೋಕ್ ಜೈನ್, ಗೌತಮ್ ಜೈನ್ ಮತ್ತಿತರರಿದ್ದರು.