ಕ್ರಮಕ್ಕಾಗಿ ರೇಷ್ಮೆ ಸಚಿವ ಕೆ.ಸಿ. ನಾರಾಯಣಗೌಡ ಸೂಚನೆ
ದಾವಣಗೆರೆ, ಆ. 31 – ನಗರದ ಎ.ಪಿ.ಎಂ.ಸಿ. ಮಾರುಕಟ್ಟೆಯಲ್ಲಿ ಸ್ಥಗಿತಗೊಂಡಿರುವ ರೇಷ್ಮೆ ಮಾರಾಟ ಮಳಿಗೆಗಳಿಗೆ ಮತ್ತೆ ಚಾಲನೆ ನೀಡಲು ಹೈಟೆಕ್ ವ್ಯವಸ್ಥೆ ಕಲ್ಪಿಸಲು ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ರೇಷ್ಮೆ ಖಾತೆ ಸಚಿವ ಕೆ.ಸಿ. ನಾರಾಯಣ ಗೌಡ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ರೇಷ್ಮೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಪ್ರಸಕ್ತ ರೈತರು ರೇಷ್ಮೆ ಗೂಡುಗಳನ್ನು ಮಾರಲು, ರಾಮನಗರ ಇಲ್ಲವೇ ಹಾವೇರಿಗೆ ಹೋಗಬೇಕಿದೆ. ಅದರ ಬದಲು, ಇಲ್ಲೇ ಮಾರುಕಟ್ಟೆ ಆರಂಭಿಸಿದರೆ ರೈತರಿಗೆ ಅನು ಕೂಲವಾಗುತ್ತದೆ. ರಾಮನಗರದಿಂದ ವ್ಯಾಪಾರಿ ಗಳು ಬಂದು ಇಲ್ಲೇ ಖರೀದಿ ಮಾಡುವಂತಾಗಲಿ ಎಂದರು. ಮಾರುಕಟ್ಟೆಯಲ್ಲಿ ರೈತರಿಗೆ ಚೀನಾ ದಲ್ಲಿ ನೀಡಲಾಗುತ್ತಿರುವಂತೆ ಉತ್ತಮ ಸೌಲಭ್ಯಗಳನ್ನು ಕಲ್ಪಿಸುವ ಬಗ್ಗೆಯೂ ಚಿಂತನೆ ನಡೆಸಬೇಕಿದೆ. ಹೈಟೆಕ್ ರೇಷ್ಮೆ ಮಾರುಕಟ್ಟೆ ಸ್ಥಾಪಿಸಿ, ಇದರಲ್ಲಿ ರೈತರಿಗೆ ವಾಸ್ತವ್ಯ, ಬ್ಯಾಂಕಿಂಗ್ ವ್ಯವಸ್ಥೆ, ಸುಸಜ್ಜಿತ ಲಾಕರ್, ಗೋಡೌನ್, ರಾಕ್ ಸಹಿತ ಎಲ್ಲ ಸೌಲಭ್ಯಗಳು ಕಲ್ಪಿಸಬೇಕಿದೆ. ರೈತರಿಗೆ ಯಾವುದೇ ಅನ್ಯಾಯ ಹಾಗೂ ತೊಂದರೆಯಾಗದ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಿಕೊಡಲು ಅಧಿಕಾರಿಗಳು ಪ್ರಸ್ತಾವನೆ ರೂಪಿಸಬೇಕು ಎಂದು ಸಚಿವರು ಹೇಳಿದರು.
ಉತ್ತಮ ಗುಣಮಟ್ಟದ ರೇಷ್ಮೆ ಜಿಲ್ಲೆಯಲ್ಲಿ ಉತ್ಪಾದನೆಯಾಗುತ್ತಿದ್ದು, ಬೇಡಿಕೆಯೂ ಇದೆ. ರೈತರಿಗೆ ರೇಷ್ಮೆ ಕೃಷಿ ಉತ್ತಮ ಲಾಭ ತಂದುಕೊಡುವ ಕೃಷಿ ಚಟುವಟಿಕೆಯಾಗಿದೆ. ಎಕರೆಗೆ ಪ್ರತಿ ತಿಂಗಳು ಸುಮಾರು 40 ರಿಂದ 50 ಸಾವಿರ ರೂ. ಆದಾಯ ಗಳಿಸಲು ಇಲ್ಲಿ ಅವಕಾಶವಿದೆ. ಬೇರೆಲ್ಲ ಬೆಳೆಗಳಿಗಿಂತ ರೇಷ್ಮೆ ಹೆಚ್ಚು ಆದಾಯ ತರುತ್ತದೆ ಎಂದು ಸಚಿವರು ಹೇಳಿದರು.
ಶಾಲೆಗಳಲ್ಲಿ ಆಟದ ಮೈದಾನ ಕಡ್ಡಾಯ
ಜಿಲ್ಲಾ ಕೇಂದ್ರಗಳಲ್ಲಿ ಮಹಿಳೆಯರಿಗೆ ಕ್ರೀಡಾ ಹಾಸ್ಟೆಲ್
ದಾವಣಗೆರೆ, ಆ. 31 – ಪ್ರತಿ ಶಾಲೆಯೂ ಆಟಕ್ಕಾಗಿ ಮೈದಾನ ಹೊಂದಿ ರಲೇಬೇಕು. ಕನಿಷ್ಠ ಬಾಡಿಗೆಯಲ್ಲಾದರೂ ಮೈದಾನ ಪಡೆಯದೇ ಇದ್ದರೆ ಅವುಗಳ ಅನುಮತಿ ರದ್ದುಗೊಳಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಕೆ.ಸಿ. ನಾರಾಯಣಗೌಡ ಹೇಳಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು, ಈ ಬಗ್ಗೆ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದೇನೆ. ಪ್ರತಿ ಶಾಲೆಯಲ್ಲಿ ಕನಿಷ್ಠ ಒಂದು ಗಂಟೆ ಕಾಲ ಮಕ್ಕಳನ್ನು ಆಡಿಸಬೇಕಿದೆ. ದೊಡ್ಡ ನಗರಗಳಲ್ಲಿ ಶಾಲೆಗಳಲ್ಲಿ ಮೈದಾನ ಇಲ್ಲ ವಾದರೆ ಬಾಡಿಗೆಗಾದರೂ ಪಡೆಯಬೇಕು ಎಂದು ತಿಳಿಸಲಾಗಿದೆ ಎಂದರು.
ಎಲ್ಲಾ 31 ಜಿಲ್ಲಾ ಕೇಂದ್ರಗಳಲ್ಲಿ ಮಹಿಳೆಯರಿಗಾಗಿ ಕ್ರೀಡಾ ಹಾಸ್ಟೆಲ್ ಗಳನ್ನು ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ತಲಾ 1.50 ಕೋಟಿ ರೂ.ಗಳ ಅನುದಾನ ನೀಡಲಾಗುವುದು. ಇದರಿಂದ ಮಹಿಳಾ ಕ್ರೀಡಾಪಟುಗಳಿಗೆ ಹೆಚ್ಚಿನ ಉತ್ತೇಜನ ಸಿಗಲಿದೆ ಎಂದರು. ಪ್ರಸಕ್ತ ಪೊಲೀಸ್ ಇಲಾಖೆಯಲ್ಲಿ ಮಾತ್ರ ಕ್ರೀಡಾಪಟುಗಳಿಗೆ ಶೇ.2ರ ಮೀಸಲಾತಿ ಇದೆ. ಇದನ್ನು ಎಲ್ಲಾ ಇಲಾಖೆಗಳಿಗೆ ವಿಸ್ತರಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಮ್ಮತಿಸಿದ್ದಾರೆ ಎಂದವರು ಇದೇ ಸಂದರ್ಭದಲ್ಲಿ ಹೇಳಿದರು.
ಪ್ರಸಕ್ತ ಕ್ರೀಡಾಪಟುಗಳು ಬೇರೆ ಕಡೆ ಕೆಲಸಕ್ಕೆ ಹೋಗುತ್ತಿದ್ದಾರೆ. ಕ್ರೀಡಾ ಕೂಟ ಕಲ್ಪಿಸಿದರೆ ಅವರೆಲ್ಲರೂ ಸರ್ಕಾರಿ ವಲಯಕ್ಕೆ ಬರಲಿದ್ದಾರೆ. ನಂತರ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡಲು ಸಾಧ್ಯವಾಗಲಿದೆ ಎಂದರು.
ಗ್ರಾಮೀಣ ವಲಯದಲ್ಲಿರುವ ಪ್ರತಿಭೆಗಳನ್ನು ಗುರುತಿಸಲು ದೊಡ್ಡ ಯೋಜನೆಯನ್ನು ರೂಪಿಸಲಾಗುತ್ತಿದೆ. 2.30 ಲಕ್ಷ ಜನರು ಈ ಕಾರ್ಯಕ್ಕೆ ನಿಯೋಜನೆಗೊಂಡಿದ್ದಾರೆ. ಈ ಯೋಜನೆಯಿಂದ ರಾಜ್ಯ ಹಾಗೂ ದೇಶಕ್ಕೆ ಹೆಸರು ಬರಲಿದೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.
ಮಾಯಕೊಂಡ, ನ್ಯಾಮತಿಗಳಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಸೂಚನೆ
ದಾವಣಗೆರೆ, ಆ. 31 – ಮಾಯಕೊಂಡ ಹಾಗೂ ನ್ಯಾಮತಿಗಳಲ್ಲಿ ಕ್ರೀಡಾಂಗಣ ನಿರ್ಮಿಸಲು ಹಾಗೂ ಜಗಳೂರಿನಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಿಸಲು ಕ್ರಮ ತೆಗೆದುಕೊಳ್ಳುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ. ನಾರಾಯಣಗೌಡ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಸರ್ಕಾರಿ ಕ್ರೀಡಾಂಗಣಗಳಲ್ಲಿ ಹೆಣ್ಣು ಮಕ್ಕಳಿಗೆ ಜಿಮ್ ನಿರ್ಮಿಸಿದ್ದರೂ ಸಹ, ಬರುವವರ ಸಂಖ್ಯೆ ಕಡಿಮೆ ಇದೆ. ಜಿಮ್ಗಳನ್ನು ಉನ್ನತೀಕರಿಸಿ, ಹೆಣ್ಣು ಮಕ್ಕಳು ಬರುವಂತೆ ಮಾಡಬೇಕು ಎಂದವರು ಸೂಚನೆ ನೀಡಿದ್ದಾರೆ. ಕೊರೊನಾ ಕಾರಣದಿಂದ ಮುಚ್ಚಲಾಗಿದ್ದ ಈಜುಕೊಳಗಳನ್ನು ಮತ್ತೆ ತೆರೆಯಲು ಅನುಮತಿ ನೀಡಲಾಗಿದೆ. ಅದರಂತೆ ಜಿಲ್ಲೆಯಲ್ಲಿರುವ ಸರ್ಕಾರಿ ಈಜುಕೊಳಗಳನ್ನು ಮತ್ತೆ ಆರಂಭಿಸುವಂತೆ ಅವರು ಸೂಚನೆ ನೀಡಿದರು.
ಸಂಸದ ಜಿ.ಎಂ. ಸಿದ್ದೇಶ್ವರ್ ಮಾತನಾಡಿ, ನಗರದಲ್ಲಿ 7 ಕೋಟಿ ರೂ. ಅಂದಾಜು ವೆಚ್ಚದಲ್ಲಿ 400 ಮೀಟರ್ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಈ ಬಗ್ಗೆ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ ಎಂದರು.
ರೇಷ್ಮೆ ವಂಚನೆ ತಡೆಗೆ ಸಚಿವರ ನಿಗಾ
ರಾಮನಗರ ರೇಷ್ಮೆಯ ಪ್ರಮುಖ ಮಾರುಕಟ್ಟೆಯಾಗಿದೆ. ಆದರೆ, ಇಲ್ಲಿ ವ್ಯಾಪಾರಿಗಳಿಂದ ರೈತರಿಗೆ ವಂಚನೆಯಾ ಗುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಖುದ್ದು ಭೇಟಿ ನೀಡಿ ಕ್ರಮ ತೆಗೆದು ಕೊಳ್ಳುತ್ತೇನೆ. ತೂಕದಿಂದ ಹಿಡಿದು, ಎಲ್ಲ ವಿಧಗಳಲ್ಲಿ ಆಗುತ್ತಿರುವ ವಂಚನೆಗಳನ್ನು ತಡೆಯುತ್ತೇನೆ ಎಂದು ರೇಷ್ಮೆ ಸಚಿವ ಕೆ.ಸಿ. ನಾರಾಯಣಗೌಡ ತಿಳಿಸಿದ್ದಾರೆ.
ಮಾರುಕಟ್ಟೆಗೆ ಇಲಾಖೆ ವತಿ ಯಿಂದ ಕಾವಲು ಹಾಕಲಾಗುವುದು. ವಾರದಲ್ಲೇ ವಂಚನೆ ನಿಯಂತ್ರಣಕ್ಕೆ ಕ್ರಮ ತೆಗೆದು ಕೊಳ್ಳಲಾಗುವುದು. ಎಲ್ಲ ಸಮಸ್ಯೆಗಳನ್ನು ಆರು ತಿಂಗಳ ಒಳಗೆ ಬಗೆಹರಿಸ ಲಾಗುವುದು ಎಂದು ಸಚಿ ವರು ಇದೇ ಸಂದರ್ಭದಲ್ಲಿ ತಿಳಿಸಿದರು.
ರೇಷ್ಮೆ ಶೆಡ್ಗಳನ್ನು ರೈತರಿಗೆ ನೀಡು ವಲ್ಲಿ ಭ್ರಷ್ಟಾಚಾರ ನಡೆಯ ಬಾರದು. ಈ ರೀತಿ ಅವ್ಯವಹಾರ ನಡೆ ಸಿದ ಕೆಲವರ ವಿವರ ದೊರೆತಿದ್ದು, ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾ ಗುವುದು ಎಂದೂ ನಾರಾಯಣಗೌಡ ಹೇಳಿದರು.
ರೇಷ್ಮೆ ಗೂಡು ಕೊರತೆ
ರೇಷ್ಮೆ ಸೀರೆಗಳ ಬೇಡಿಕೆ ಹೆಚ್ಚಾಗಿದೆಯಾ ದರೂ, ರೇಷ್ಮೆ ಗೂಡುಗಳ ತೀವ್ರ ಕೊರತೆ ಇದೆ. ಇದರಿಂದಾಗಿ ಅಗತ್ಯ ಪ್ರಮಾಣದಲ್ಲಿ ಸೀರೆಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ರೇಷ್ಮೆ ಸಚಿವ ಕೆ.ಸಿ. ನಾರಾಯಣ ಗೌಡ ಹೇಳಿದ್ದಾರೆ. ಪ್ರಸಕ್ತ 1 ಲಕ್ಷ ಸೀರೆ ಮಾತ್ರ ಉತ್ಪಾದಿಸುವಷ್ಟು ರೇಷ್ಮೆ ಗೂಡು ಗಳು ಉತ್ಪಾದನೆ ಯಾಗುತ್ತಿವೆ. ರಾಜ್ಯದಲ್ಲಿ ರೇಷ್ಮೆ ಗೂಡುಗಳ ಉತ್ಪಾದನೆ ಹೆಚ್ಚಿಸಲು ಅವಕಾಶವಿದೆ. ರೈತರಿಗೆ ಅಂತಹ ಶಕ್ತಿಯೂ ಇದೆ. ರೈತರು ಹೆಚ್ಚಾಗಿ ರೇಷ್ಮೆ ಬೆಳೆಯಲು ಮುಂದೆ ಬರಬೇಕು ಎಂದವರು ತಿಳಿಸಿದರು.
ರೇಷ್ಮೆ ಬೆಳೆಗಾರರಿಗೆ ಸನ್ಮಾನ : ದಾವಣಗೆರೆ ತಾಲ್ಲೂಕಿನ ರೇಷ್ಮೆ ಗೂಡು ಬೆಳೆಗಾರ ಓಂಕಾರಪ್ಪ ಹಾಗೂ ಜಗಳೂರು ತಾಲ್ಲೂಕಿನ ಕೋಟೇಶ್ವರ್ ಅವರು ಅತ್ಯುತ್ತಮ ಇಳುವರಿ ಪಡೆದಿದ್ದು, ವರ್ಷಕ್ಕೆ ಹತ್ತು ಸುತ್ತಿನಲ್ಲಿ ಗೂಡುಗಳನ್ನು ಪಡೆಯುತ್ತಿರುವ ಬಗ್ಗೆ ಸಚಿವರು ಹರ್ಷ ವ್ಯಕ್ತಪಡಿಸಿದ್ದು, ಇಂತಹ ರೈತರಿಗೆ ಮುಖ್ಯಮಂತ್ರಿಗಳಿಂದ ಸನ್ಮಾನ ಮಾಡಿಸುವುದಾಗಿ ಹೇಳಿದರು.
ಬಿಳಿಗೂಡಿಗೆ ಉತ್ತೇಜನ : ರೇಷ್ಮೆ ಇಲಾಖೆ ಪ್ರಭಾರಿ ಉಪನಿರ್ದೇಶಕ ಶ್ರೀಹರ್ಷ ಮಾತನಾಡಿ, ಬಿಳಿಗೂಡಿನಿಂದ ರೈತರಿಗೆ ಹೆಚ್ಚು ಆದಾಯ ಸಿಗುತ್ತದೆ. ಈ ಹಿನ್ನೆಲೆಯಲ್ಲಿ ರೆಂಡಿಟ್ಟೆ ಚಂದ್ರಿಕೆಯ ಬಿಳಿಗೂಡುಗಳಿಗಾಗಿ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಚನ್ನಗಿರಿಯಲ್ಲಿ ರೇಷ್ಮೆ ಇಲಾಖೆಗೆ ಸೇರಿದ 33 ಎಕರೆ ಜಮೀನಿದೆ. ಇದರಲ್ಲಿ ಒಂದೆರಡು ಎಕರೆ ಒತ್ತುವರಿಯಾಗಿದ್ದು, ಅದನ್ನು ತೆರವುಗೊಳಿಸಲಾಗಿದೆ. ಇದಕ್ಕೆ ಬೇಲಿ ಹಾಕಿದರೆ ಹದ್ದುಬಸ್ತಾಗಿರುತ್ತದೆ ಎಂದರು.
ಇಲಾಖೆ ಜಮೀನು ರೈತರಿಗೆ ಗುತ್ತಿಗೆ : ತೋಣಹುಣಸೆಯಲ್ಲಿ ಇಲಾಖೆಗೆ ಸೇರಿದ 37 ಎಕರೆ ಜಮೀನಿದ್ದು, ಇದಕ್ಕೆ ಹೋಗಲು ಸರಿಯಾದ ದಾರಿಯೇ ಇಲ್ಲ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ತಿಳಿಸಿದರು.
ಇಂತಹ ಜಾಗಗಳನ್ನು ರೈತರಿಗೆ ಗುತ್ತಿಗೆಯಲ್ಲಿ ನೀಡಿ. ಇದರಿಂದ ರೈತರ ಆದಾಯ ದುಪ್ಪಟ್ಟಾಗುತ್ತದೆ ಹಾಗೂ ಆಸ್ತಿಗಳ ನಿರ್ವಹಣೆಯೂ ಆಗುತ್ತದೆ. ಇಂತಹ ಆಸ್ತಿಗಳನ್ನು ಇಲಾಖೆಯಿಂದಲೇ ನಿರ್ವಹಣೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಸಚಿವ ನಾರಾಯಗೌಡ ಹೇಳಿದರು.
ಸಭೆಯಲ್ಲಿ ಸಂಸದ ಡಾ. ಜಿ.ಎಂ. ಸಿದ್ದೇಶ್ವರ್, ಶಾಸಕರುಗಳಾದ ಎಸ್.ಎ. ರವೀಂದ್ರನಾಥ್, ಪ್ರೊ. ಲಿಂಗಣ್ಣ, ರೇಷ್ಮೆ ಇಲಾಖೆ ಆಯುಕ್ತ ಪೆದ್ದಪ್ಪಯ್ಯ, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿ.ಪಂ. ಉಪಕಾರ್ಯದರ್ಶಿ ಆನಂದ್, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸ್, ಜವಳಿ ಉದ್ಯಮಿ ಮಂಜುನಾಥ್ ಆರ್. ನಾಯಕ್ ಮತ್ತಿತರರು ಉಪಸ್ಥಿತರಿದ್ದರು.