ದಾವಿವಿ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ
ದಾವಣಗೆರೆ, ಆ.31- ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ವೃತ್ತಿ ಮತ್ತು ಭವಿಷ್ಯದ ಬದುಕಿಗೆ ಅಗತ್ಯವಿರುವ ಮೌಲ್ಯಗಳನ್ನು ಕಲಿಸುವ ಉದ್ದೇಶವನ್ನು ಹೊತ್ತಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ಉಜ್ವಲ ಭಾರತದ ಕನಸನ್ನು ಸಾಕಾರಗೊಳಿಸಲು ಪೂರಕವಾಗಿದೆ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಅಭಿಪ್ರಾಯಪಟ್ಟರು.
ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-2020ರ ಅನುಷ್ಠಾನ ಕುರಿತು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಸಂಲಗ್ನ ಕಾಲೇಜುಗಳ ಪ್ರಾಚಾರ್ಯರಿಗಾಗಿ ಇಂದು ಏರ್ಪಡಿಸಿದ್ದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಭವಿಷ್ಯಕ್ಕೆ ಅವರ ಆಯ್ಕೆಯ ವಿಷಯಗಳಿಗೇ ಆದ್ಯತೆ ನೀಡಿ ಕಲಿಸುವ ಹೊಸ ಶಿಕ್ಷಣ ನೀತಿಯು, ಶೈಕ್ಷಣಿಕ ಕಲಿಕೆಯ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆ ತರಲಿದೆ. ಪ್ರತಿಯೊಬ್ಬ ವ್ಯಕ್ತಿಯು ನಿರ್ದಿಷ್ಟ ವಿಷಯದಲ್ಲಿ ಪರಿಪೂರ್ಣತೆ ಪಡೆದು ಉನ್ನತಿ ಸಾಧಿಸಲು, ಆ ಕ್ಷೇತ್ರದಲ್ಲಿ ಯಶಸ್ವಿಯಾಗಿ ಮುಂದುವರೆಯಲು ಮಾರ್ಗದರ್ಶಿಯಾಗಿದೆ ಎಂದರು.
ಮೂರು ಮತ್ತು ನಾಲ್ಕು ವರ್ಷಗಳ ಪದವಿಯಲ್ಲಿ ವೃತ್ತಿ ಕೌಶಲ್ಯವನ್ನು ಒಳಗೊಂಡ ಶಿಕ್ಷಣವು ವಿದ್ಯಾರ್ಥಿಗಳ ಕಲಿಕೆಯಲ್ಲಿ ಆಸಕ್ತಿ ಮೂಡಿಸಲಿದೆ. ವಿಷಯಗಳ ಆಯ್ಕೆಯ ಜೊತೆಗೆ ಕೋರ್ಸ್‍ಗಳ ಆಯ್ಕೆಯಲ್ಲೂ ಪೂರ್ಣ ಸ್ವಾತಂತ್ರ್ಯವಿದ್ದು, ಕಾಲೇಜುಗಳ ವಿದ್ಯಾರ್ಥಿಗಳ ಆಸಕ್ತಿಗೆ ತಕ್ಕಂತೆ ಹೊಸ ಕೋರ್ಸ್‍ಗಳನ್ನು ಆರಂಭಿಸಲು ಮತ್ತು ಪ್ರಸ್ತುತ ಲಭ್ಯವಿರುವ ಕೋರ್ಸ್‍ಗಳಲ್ಲಿ ಗುಣಮಟ್ಟ ಕಾಪಾಡಲು ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಪ್ರಸ್ತುತ ಶಿಕ್ಷಣವು ಅಂಕಪಟ್ಟಿಗೆ ಮನ್ನಣೆ ನೀಡಿದರೆ, ಹೊಸ ಶಿಕ್ಷಣ ನೀತಿ ಭವಿಷ್ಯಕ್ಕೆ ದಾರಿ ಆಗಲಿದೆ. ವೃತ್ತಿ, ಪ್ರವೃತ್ತಿಗಳನ್ನು ಒಂದುಗೂಡಿಸಿ, ಆಸಕ್ತಿಯ ವಿಷಯದಲ್ಲಿ ಮುಂದುವರೆಯಲು ಅವಕಾಶ ಕಲ್ಪಿಸಲಾಗಿದೆ. ಅದರ ಜೊತೆಗೆ ವಿದ್ಯಾರ್ಥಿಯು ಏಕಕಾಲಕ್ಕೆ ಹಲವು ಕೋರ್ಸ್‍ಗಳನ್ನು ಕಲಿಯಲು ಅವಕಾಶ ನೀಡಲಾಗಿದ್ದು, ವಿಶೇಷವಾಗಿದೆ ಎಂದು ನುಡಿದರು.
ಪ್ರಾಧ್ಯಾಪಕ ಪ್ರೊ. ರಾಜೀವಲೋಚನ ಅವರು ಮಾತನಾಡಿ, ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ಹಲವು ವೈವಿಧ್ಯಗಳ ಸಂಗಮವಾಗಿದೆ. ವಿದ್ಯಾರ್ಥಿ ಕೇಂದ್ರೀಕೃತ ಶಿಕ್ಷಣವು ಅವರ ಭವಿಷ್ಯದ ಹಾದಿಯನ್ನು ಅವರೇ ಕಂಡುಕೊಳ್ಳಲು ಸಹಕಾರಿ ಆಗಿದೆ. 34 ವರ್ಷಗಳ ನಂತರ ದೇಶದಲ್ಲಿ ಶೈಕ್ಷಣಿಕ ನೀತಿ ರೂಪಿತವಾಗಿದ್ದು, ಭವ್ಯ ಭಾರತದ ಕನಸಿಗೆ ದಿಕ್ಸೂಚಿಯಾಗಿದೆ ಎಂದು ತಿಳಿಸಿದರು.
ಕುಲಸಚಿವರಾದ ಪ್ರೊ|| ಗಾಯತ್ರಿ ದೇವರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪರೀಕ್ಷಾಂಗ ಕುಲಸಚಿವರಾದ ಪ್ರೊ|| ಹೆಚ್.ಎಸ್.ಅನಿತಾ ಮಾತನಾಡಿದರು. ಪ್ರೊ. ಗೋಪಾಲ ಎಂ. ಅಡವಿರಾವ್ ಉಪಸ್ಥಿತರಿದ್ದರು.