ಗಾಂಧಿ ಭವನ, ಪೊಲೀಸ್ ವಸತಿ ಶಾಲೆ ಉದ್ಘಾಟನೆ
ದಾವಣಗೆರೆ, ಆ.30 – ಕೇಂದ್ರ ಗೃಹ ಸಚಿವ ಅಮಿತ್ ಷಾ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೆ.2 ರ ಗುರುವಾರದಂದು ಜಿಲ್ಲೆಗೆ ಆಗಮಿಸಲಿದ್ದು, ನಗರದಲ್ಲಿ ನಿರ್ಮಿಸ ಲಾಗಿರುವ ಗಾಂಧಿ ಭವನ ಹಾಗೂ ಹರಿಹರ ತಾಲ್ಲೂಕು ಕೊಂಡಜ್ಜಿ ಗ್ರಾಮದ ಪೊಲೀಸ್ ಪಬ್ಲಿಕ್ ಶಾಲೆಗಳನ್ನು ಉದ್ಘಾಟಿಸುವರು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.
ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಏರ್ಪಡಿಸಿದ್ದ ಕೇಂದ್ರ ಗೃಹ ಸಚಿವರು ಹಾಗೂ ಮುಖ್ಯಮಂತ್ರಿಗಳ ಆಗಮನದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೇಂದ್ರ ಗೃಹ ಸಚಿವರು ಹಾಗೂ ಮುಖ್ಯಮಂತ್ರಿಗಳು ಅಂದು ಬೆಳಿಗ್ಗೆ ಗಾಂಧಿ ಭವನವನ್ನು ಉದ್ಘಾಟಿಸಿ, ಕೊಂಡಜ್ಜಿಯ ಕೊಂಡಜ್ಜಿ ಬಸಪ್ಪ ಸ್ಮಾರಕ ಮತ್ತು ಸಮಾಧಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸುವರು. ನಂತರ ಪೊಲೀಸ್ ಪಬ್ಲಿಕ್ ಶಾಲೆ ಹಾಗೂ ನಾಮಫಲಕ ಉದ್ಘಾಟನೆ ಮತ್ತು ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗಿಯಾಗುವರು ಎಂದು ತಿಳಿಸಿದರು.
ಈ ಕಾರ್ಯಕ್ರಮಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಮತ್ತು ಇನ್ನೂ ಕೆಲ ಸಚಿವರು ಭಾಗಿಯಾಗುವ ನಿರೀಕ್ಷೆ ಇದೆ ಎಂದವರು ಹೇಳಿದ್ದಾರೆ.
ಗಾಂಧಿ ಭವನ ಉದ್ಘಾಟನೆ ನೆರವೇರಿಸಿ ಅಲ್ಲಿಂದ ಶಾಮನೂರು, ಡಿಸಿ ಸರ್ಕಲ್, ಸಂಗೊಳ್ಳಿ ರಾಯಣ್ಣ ಸರ್ಕಲ್ ಮೂಲಕ ಕೊಂಡಜ್ಜಿಗೆ ಹೋಗುವ ಕಾರಣ, ಸೆ.1 ರ ಬೆಳಿಗ್ಗೆ 6 ರಿಂದ 9 ಗಂಟೆಯವರೆಗೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಸ್ಥಳ ಪರಿಶೀಲನೆ ಮಾಡಲಿದ್ದು ಆಯಾ ರಸ್ತೆಗಳಲ್ಲಿ ಹಮ್ಮಿಕೊಂಡಿರುವ ಅನೇಕ ಕಾಮಗಾರಿಗಳನ್ನು ಆದಷ್ಟು ಬೇಗ ಪೂರೈಸಿ ರಸ್ತೆಯನ್ನು ತೆರವುಗೊಳಿಸಿ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಪಾಲಿಕೆ ಆಯುಕ್ತರು, ಸ್ಮಾರ್ಟ್ಸಿಟಿ, ದೂಡಾ ಪ್ರಾಧಿಕಾರ ಹಾಗೂ ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೊಂಡಜ್ಜಿಯಲ್ಲಿ ಸ್ಮಾರಕ ಹಾಗೂ ಸಮಾಧಿಯ ಸುತ್ತಮುತ್ತ ಸ್ವಚ್ಛತೆ ಜೊತೆ ಹೂವಿನ ಅಲಂಕಾರ ಮಾಡಿಸಬೇಕು. ಪುಷ್ಪ ನಮನ ವೇಳೆ ಹೆಚ್ಚಿನ ಜನ ಸೇರದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಎಸ್.ಪಿ ಸಿ.ಬಿ.ರಿಷ್ಯಂತ್ ಮಾತನಾಡಿ, ನಗರದ ಸ್ವಚ್ಛತೆ ಕಡೆ ಹೆಚ್ಚು ಕಾಳಜಿ ವಹಿಸಿ, ರಸ್ತೆಯಲ್ಲಿ ಕಸವಿಲ್ಲದಂತೆ ನೋಡಿಕೊಳ್ಳಬೇಕು. ಕೊಂಡಜ್ಜಿ ರಸ್ತೆ ಬದಿ ಇರುವ ಗಿಡ ಗಂಟಿಗಳನ್ನು ತೆಗೆದು ವಾಹನ ಓಡಾಟಕ್ಕೆ ಯಾವುದೇ ಸಮಸ್ಯೆಯಾಗದಂತೆ ಕೆಲಸ ನಿರ್ವಹಿಸುವ ಜವಾಬ್ದಾರಿಯನ್ನು ಮಹಾನಗರ ಪಾಲಿಕೆ ಹಾಗೂ ಪಿಡಬ್ಲ್ಯೂಡಿ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದರು.
ಈ ವೇಳೆ ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಜೀವ್ ಎಂ, ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.