ಉದ್ಯೋಗ ಮೇಳದಲ್ಲಿ 188 ವಿದ್ಯಾರ್ಥಿಗಳ ಆಯ್ಕೆ
ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಶುಕ್ರವಾರ ನಡೆದ ಉದ್ಯೋಗ ಮೇಳದಲ್ಲಿ 188 ವಿದ್ಯಾರ್ಥಿಗಳು ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ ಎಂದು ಪ್ರಾಚಾರ್ಯ ಎನ್. ಏಕನಾಥ ತಿಳಿಸಿದ್ದಾರೆ.
ಇಂಕ್ ಇಂಪ್ಯಾಕ್ಟ್, ಸನ್ ಇಂಡಿಯಾ ಕಂಪನಿ, ಹೊಂಡಾ ಮೋಟಾರ್ ಸೈಕಲ್ ಅಂಡ್ ಸ್ಕೂಟರ್ ಇಂಡಿಯಾ ಪ್ರೈ.ಲಿ., ನಟರಾಜ ಟ್ರ್ಯಾಕ್ಟರ್ ಸೇರಿದಂತೆ 9 ಕಂಪನಿಗಳು ಹಾಗೂ 475 ಉದ್ಯೋಗಾಕಾಂಕ್ಷಿಗಳು ಮೇಳದಲ್ಲಿ ಪಾಲ್ಗೊಂಡಿದ್ದಾಗಿ ಅವರು ಹೇಳಿದರು.
ದಾವಣಗೆರೆ, ಆ. 27- ಐಟಿಐ ಕಾಲೇಜುಗಳಲ್ಲಿ ತರಬೇತಿ ಪಡೆದ ಅನೇಕರು ಸ್ವಾವಲಂಬಿಗಳಾಗಿ ಜೀವನ ಸಾಗಿಸುತ್ತಿದ್ದಾರೆ. ಮತ್ತೆ ಕೆಲವರು ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ದೇಶದಲ್ಲಿನ ನಿರುದ್ಯೋಗ ಸಮಸ್ಯೆ ನೀಗಿಸುವಲ್ಲಿ ವೃತ್ತಿ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.
ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ) ಹಾಗೂ ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ಐಟಿಐ ಕಾಲೇ ಜಿನ ಸರ್.ಎಂ. ವಿಶ್ವೇಶ್ವರಯ್ಯ ವೇದಿಕೆಯಲ್ಲಿ ಇಂದು ಮಧ್ಯಾಹ್ನ ಹಮ್ಮಿಕೊಳ್ಳಲಾಗಿದ್ದ ಕಂಪ್ಯೂ ಟರ್ ಲ್ಯಾಬ್ ಹಾಗೂ ಸ್ಮಾರ್ಟ್ ಕ್ಲಾಸ್ ಉದ್ಘಾ ಟನೆ ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ಇಲಾಖೆಯಿಂದ ಟೂಲ್ ಕಿಟ್ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ನಗರದಲ್ಲಿನ ಈ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಕಳೆದ 56 ವರ್ಷಗಳಿಂದ ತರಬೇತಿ ಪಡೆದ ವಿದ್ಯಾರ್ಥಿಗಳು ಇಂದು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಪ್ರಸ್ತುತ 13 ಬಗೆಯ ತರಬೇತಿಯನ್ನು ಈ ಕಾಲೇಜಿನಲ್ಲಿ ನೀಡಲಾಗುತ್ತಿದೆ. ಶೇ.80ರಷ್ಟು ವಿದ್ಯಾರ್ಥಿಗಳು ಕ್ಯಾಂಪಸ್ ಇಂಟರ್‌ವ್ಯೂಗಳಲ್ಲಿ ಆಯ್ಕೆಯಾಗು ತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರೈತ ಮಕ್ಕಳಿಗೆ ವಿದ್ಯಾರ್ಥಿ ವೇತನ ಘೋಷಿಸಿ ಕಾರ್ಯರೂಪಕ್ಕೂ ತಂದಿದ್ದಾರೆ. ಇದರಿಂದಾಗಿ ಎಲ್ಲಾ ವರ್ಗದ ವಿದ್ಯಾರ್ಥಿ ಗಳಿಗೂ ಲಾಭ ದೊರೆಯಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರತಿ ವಿದ್ಯಾರ್ಥಿಗೆ ವಿದ್ಯಾಭ್ಯಾಸಕ್ಕೆಂದು ವರ್ಷಕ್ಕೆ ಲಕ್ಷಕ್ಕೂ ಹೆಚ್ಚು ಹಣ ಖರ್ಚು ಮಾಡುತ್ತಿವೆ. ಇದನ್ನು ಸದ್ಬಳಕೆ ಮಾಡಿಕೊಂಡು ಸ್ವಾವಲಂಬಿಗಳಾಗಬೇಕು ಎಂದು ಸಲಹೆ ನೀಡಿದರು.
ಟೂಲ್ ಕಿಟ್ ಸದ್ಭಳಕೆಯಾಗಲಿ: ಈ ಹಿಂದೆ ಸರ್ಕಾರದಿಂದ ಮಕ್ಕಳಿಗೆ ಉಚಿತವಾಗಿ ಸೈಕಲ್ ನೀಡ ಲಾಗಿತ್ತು. ಆದರೆ ಅವುಗಳನ್ನು ವಿದ್ಯಾರ್ಥಿಗಳಿಗಿಂತ ಹೆಚ್ಚಾಗಿ ಪೋಷಕರು ಉಪಯೋಗಿಸುತ್ತಿದ್ದರು. ಟೂಲ್ ಕಿಟ್ ಸಹ ಆ ರೀತಿ ದುರ್ಬಳಕೆಯಾಗುವುದು ಬೇಡ ಎಂದು ಕಿವಿ ಮಾತು ಹೇಳಿದರು.
ಶಾಸಕ ಎಸ್.ಎ. ರವೀಂದ್ರನಾಥ್ ಮಾತ ನಾಡಿ, ದಾವಣಗೆರೆಯ ಸರ್ಕಾರಿ ಐಟಿಐ ಕಾಲೇಜು ಉತ್ತಮ ತರಬೇತಿಗಾಗಿ ರಾಜ್ಯ ದಲ್ಲಿಯೇ ಪ್ರಸಿದ್ಧಿಯಾಗಿದೆ. ಆದರೆ, ನಗರವು ಲಾರಿ ರಿಪೇರಿ ಮಾಡುವುದು ಸೇರಿದಂತೆ ವಿವಿಧ ಯಂತ್ರಗಳ ರಿಪೇರಿ ಪರಿಣಿತರ ಕೊರತೆ ಎದುರಿಸುತ್ತಿದೆ ಎಂದು ಹೇಳಿದರು.
ದಾವಣಗೆರೆಯಿಂದ ಲಾರಿಗಳನ್ನು ರಿಪೇರಿ ಮಾಡಿಸಲು ಶಿವಮೊಗ್ಗ, ತುಮಕೂರು ಮುಂತಾದ ಜಿಲ್ಲೆಗಳಿಗೆ ಹೋಗುತ್ತಿದ್ದಾರೆ. ಐಟಿಐ ತರಬೇತಿ ಪಡೆದವರು ಎಂಜಿನಿಯರ್ ಗಳಿಗಿಂತ ಬುದ್ದಿವಂತರಾಗಿರುತ್ತಾರೆ. ಆದ್ದರಿಂದ ಇಲ್ಲಿ ವೃತ್ತಿ ತರಬೇತಿ ಪಡೆದು ಉದ್ಯೋಗ ಪಡೆಯಲಷ್ಟೇ ಸೀಮಿತರಾಗದೆ, ದಾವಣಗೆರೆಯಲ್ಲಿ ಉತ್ತಮ ಮೆಕ್ಯಾನಿಕ್‌ಗಳಾಗಿ ಕೊರತೆ ನೀಗಿಸಬೇಕು ಎಂದು ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಎನ್. ಏಕನಾಥ್ ಮಾತನಾಡಿ, ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ 25 ಕಂಪ್ಯೂಟರ್‌ಗಳನ್ನೊಳಗೊಂಡ ಲ್ಯಾಬ್ ಹಾಗೂ 75 ಇಂಚಿನ ಎರಡು ಡಿಜಿಟಲ್ ಬೋರ್ಡ್‌ಗಳನ್ನು ನೀಡಲಾಗಿದ್ದು, ಅವುಗಳನ್ನು 2 ಸ್ಮಾರ್ಟ್ ಕ್ಲಾಸ್‌ಗಳನ್ನಾಗಿ ಉಪ ಯೋಗಿಸಲಾಗುವುದು ಎಂದು ತಿಳಿಸಿದರು.
ಮಹಾನಗರ ಪಾಲಿಕೆ ಮೇಯರ್ ಎಸ್.ಟಿ. ವೀರೇಶ್ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀಮತಿ ಉಮಾ ಪ್ರಕಾಶ್ ಸ್ಮಾರ್ಟ್ ತರಗತಿಗಳನ್ನು ಉದ್ಘಾಟಿಸಿದರು. ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಬಿ. ಮಲ್ಲಾಪುರ ಉಪಸ್ಥಿತರಿ ದ್ದರು. ಉಪನ್ಯಾಸ ಆಂಜನೇಯ ಸ್ವಾಗತಿಸಿದರು.