ದಾವಣಗೆರೆ, ಆ.27- ನಗರಕ್ಕೆ ನೀರು ಸರಬರಾಜು ಮಾಡುವ ಭದ್ರಾ ಕಾಲುವೆಯ ಪಂಪ್‌ಹೌಸ್ ಮತ್ತು ಕೆರೆಯ ನೀರು ಶುದ್ಧೀಕರಣ ಘಟಕಕ್ಕೆ ಮಹಾನಗರ ಪಾಲಿಕೆಯ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಉಮಾ ಪ್ರಕಾಶ್ ಹಾಗೂ ಪಾಲಿಕೆ ಸದಸ್ಯ ಕೆ.ಎಂ.ವೀರೇಶ್ ಅವರುಗಳು ಇಂದು ಬೆಳಿಗ್ಗೆ ಭೇಟಿ ನೀಡಿ ಪರಿಶೀಲಿಸಿದರು.
ಭದ್ರಾ ಕಾಲುವೆ ಬಳಿ ಇರುವ ಪಂಪ್ ಹೌಸ್‌ನಲ್ಲಿ 120 ಹೆಚ್‌ಪಿಯ 4 ಪಂಪುಗಳು ಕಾರ್ಯನಿರ್ವಹಿಸುತ್ತಿವೆ. ದುರಸ್ತಿಯಲ್ಲಿರುವ ಒಂದು ಪಂಪನ್ನು ತುರ್ತಾಗಿ ರಿಪೇರಿ ಮಾಡಿಸಿ, ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವಂತೆ ಉಮಾ ಅವರು, ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ನಂತರ ಕೆರೆಯ ಬಳಿ ಇರುವ ನೀರು ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿ, ಅಲ್ಲಿನ ಶುದ್ಧೀಕರಣ ಕಾರ್ಯಗಳನ್ನು ವೀಕ್ಷಿಸಿದರು.
ಶುದ್ಧೀಕರಣ ಕಾರ್ಯಕ್ಕೆ ಬಳಸುವ ಆಲಂ ಮತ್ತು ಕ್ಲೋರಿನೇಶನ್ ಕಾರ್ಯಗಳನ್ನು ಸರಿಯಾದ ಪ್ರಮಾಣದಲ್ಲಿ ಉಪಯೋಗಿಸುವಂತೆ ಸೂಚಿಸಿದರು. ಕೆರೆ ನೈರುತ್ಯ ಭಾಗದಲ್ಲಿರುವ ಫೆನ್ಸಿಂಗ್ ಹಾಳಾಗಿದ್ದು, ದುರಸ್ತಿಪಡಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಆವರಣದಲ್ಲಿ ಹಂದಿ ಮತ್ತು ದನ ಕರುಗಳು ಮತ್ತು ಅನವಶ್ಯಕ ಜನರು ಓಡಾಡದಂತೆ ರಕ್ಷಣಾ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಮಯದಲ್ಲಿ ಪಾಲಿಕೆಯ ಅಧೀಕ್ಷಕ ಅಭಿಯಂತರ ಎಂ.ಹೆಚ್.ಉದಯಕುಮಾರ್, ಕಾರ್ಯಪಾಲಕ ಅಭಿಯಂತರ ಹರ್ಷಿತ, ಸಹಾಯಕ ಕಾರ್ಯಪಾಲಕ ಅಭಿಯಂತರ ವಿನಾಯಕ, ಸಹಾಯಕ ಇಂಜಿನಿಯರ್‌ಗಳಾದ ಆದಿತ್ಯ ಜೋಷಿ, ಕಿರಣ್ ಕುಮಾರ್ ಅವರುಗಳು ಹಾಜರಿದ್ದರು.