ಸಿಬ್ಬಂದಿ ಹೆಚ್ಚಳ, ಕಾಲ್ಡ್ರಾಪ್ ಸಮಸ್ಯೆ ಬಗೆಹರಿಸಲು ಸಂಸದ –ಜಿ.ಎಂ. ಸಿದ್ದೇಶ್ವರ ಸೂಚನೆ
ದಾವಣಗೆರೆ, ಆ. 27 – 2021 ಬಂದರೂ 4ಜಿ ತಂತ್ರಜ್ಞಾನವಿಲ್ಲ, ಕರೆಂಟ್ ಹೋದರೆ ಸ್ವಯಂ ಚಾಲಿತ ಜನರೇಟರ್ ಇಲ್ಲ, ಲ್ಯಾಂಡ್ಲೈನ್ ಬೇಡೆವೆಂದು ಸಂಪರ್ಕ ಕಡಿತಗೊಳಿಸಿಕೊಂಡವರಿಗೆ ವರ್ಷವಾದರೂ ಡೆಪಾಸಿಟ್ ಹಣ ಪಾವತಿಯಾಗಿಲ್ಲ, ಸಲಹಾ ಸಮಿತಿ ಸದಸ್ಯರೇ ಸಮಸ್ಯೆ ಎದುರಿಸಲಾಗದೇ ಸಂಪರ್ಕ ಕಡಿತಗೊಳಿಸಿದ್ದಾರೆ. ಇದು ಬಿ.ಎಸ್.ಎನ್.ಎಲ್. ಎದುರಿಸುತ್ತಿರುವ ಸಂಕಷ್ಟದ ಪರಿಸ್ಥಿತಿ.
ನಗರದ ಬಿಎಸ್ಸೆನ್ನೆಲ್ ಕಚೇರಿಯಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಬಿ.ಎಸ್.ಎನ್.ಎಲ್. ದೂರವಾಣಿ ಸಲಹಾ ಸಮಿತಿ ಸಭೆಯಲ್ಲಿ ಸಂಸ್ಥೆಯ ಸಮಸ್ಯೆಗಳು ಅನಾವರಣ ಗೊಂಡಿದ್ದು, ಸಂಸ್ಥೆಯ ಆಸ್ತಿಗಳನ್ನು ನಗದೀಕರಣ ಗೊಳಿಸುವ ಮೂಲಕ ಪರಿಸ್ಥಿತಿ ನಿಭಾಯಿಸುವ ಪ್ರಸ್ತಾವನೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬಿ.ಎಸ್.ಎನ್.ಎಲ್. ಲ್ಯಾಂಡ್ಲೈನ್ ಗ್ರಾಹಕರ ಸಂಖ್ಯೆ 12 ಸಾವಿರದಿಂದ 8 ಸಾವಿರಕ್ಕೆ ಇಳಿದಿದೆ. ದೂರು ನೀಡಲು ಹೋದರೆ ಕರೆ ಸ್ಪಂದಿಸುವವರೇ ಇಲ್ಲ. ದೂರವಾಣಿ ಸಂಪರ್ಕ ಕಡಿತಗೊಳಿಸಿದವರಿಗೆ ನೀಡ ಬೇಕಾದ ಬಾಕಿಯೇ 54 ಲಕ್ಷ ರೂ. ಇದೆ. ಇದು ಸಂಸ್ಥೆಗೆ ನಾಚಿಕೆ ತರುವ ವಿಷಯ ಎಂದಿರುವ ಸಂಸದರು, ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಿಕೊಳ್ಳುವಂತೆ ತಿಳಿಸಿದ್ದಾರೆ.
ಬಿ.ಎಸ್.ಎನ್.ಎಲ್. ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ಬಿಎಸ್ ಎನ್ಎಲ್ ಟವರ್ಗಳ ನಿರ್ವಹಣೆಗೆ ಸಿಬ್ಬಂದಿ ಸಂಖ್ಯೆ ಹೆಚ್ಚಿಸಬೇಕು. ಕಾಲ್ ಡ್ರಾಪ್ ಆಗುವ ಪ್ರಮಾಣ ಇಳಿಸಬೇಕು. ಹೆಚ್ಚಿನ ಸಾಮರ್ಥ್ಯದ ಟವರ್ಗಳನ್ನು ಅಳವಡಿಸಿಕೊಳ್ಳ ಬೇಕು. ದೂರು ನಿವಾರಣೆಗೆ ಸೂಕ್ತ ವ್ಯವಸ್ಥೆ ರೂಪಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಬಿ.ಎಸ್.ಎನ್.ಎಲ್. ಉತ್ತಮ ವಾಗಿ ಕೆಲಸ ಮಾಡುತ್ತಿದೆ. ಆದರೆ, ಇಲ್ಲಿ ಕೆಲಸ ಸರಿ ಇಲ್ಲ. ಕೆಲಸ ಮಾಡಲು ಆಗದೇ ಇದ್ದರೆ ವಿ.ಆರ್.ಎಸ್. ತೆಗೆದುಕೊಂಡು ಹೋಗಿ ಎಂದ ಅವರು, ಉತ್ತಮವಾಗಿ ಕಾರ್ಯನಿರ್ವಹಿಸಿ ಆದಾಯ ಗಳಿಸಿದರೆ ಬಿ.ಎಸ್.ಎನ್.ಎಲ್. 4ಜಿ ಸೇರಿದಂತೆ, ಹೊಸ ತಂತ್ರಜ್ಞಾನ ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಲಹಾ ಸಮಿತಿ ಸದಸ್ಯ ಡಿ.ಎಸ್. ಶಿವಶಂಕರ್, ಬಿಎಸ್ ಎನ್ಎಲ್ ದೂರಿಗೆ ಇರುವ 198 ಸಂಖ್ಯೆಗೆ ಕರೆ ಮಾಡಿದರೆ ಕೇಳುವವರಿಲ್ಲ. ನೇರವಾಗಿ ಕಚೇರಿಗೆ ಬಂದರೆ ಜವಾಬ್ದಾರಿಯುತ ವ್ಯಕ್ತಿ ಸಿಗುತ್ತಿಲ್ಲ. ದೂರವಾಣಿ ಜಾಲದ ನಿರ್ವಹಣೆಯನ್ನು ಹೊರ ಗುತ್ತಿಗೆ ನೀಡಿದರೂ ಕೆಲಸ ಸಮರ್ಪಕವಾಗಿಲ್ಲ. ಇದರಿಂದ ಬೇಸತ್ತು ತಮ್ಮ ಲ್ಯಾಂಡ್ಲೈನ್ ಸಂಪರ್ಕ ವಾಪಸ್ ಕೊಟ್ಟಿದ್ದೇನೆ ಎಂದರು.
ಸಮಸ್ಯೆಗಳಿರುವುದನ್ನು ಒಪ್ಪಿಕೊಂಡ ಬಿ.ಎಸ್.ಎನ್.ಎಲ್. ಪ್ರಧಾನ ವ್ಯವಸ್ಥಾಪಕ ಡಿ.ಕೆ. ತ್ರಿಪಾಠಿ, ಕೊರೊನಾ ಕಾರಣದಿಂದಾಗಿ ಹಣಕಾಸು ಬಿಕ್ಕಟ್ಟು ಉಂಟಾಗಿದೆ. ದೂರವಾಣಿ ಸಂಪರ್ಕ ಕಡಿತಗೊಳಿಸಿಕೊಂಡವರಿಗೆ ಹಣ ನೀಡುವುದು ವಿಳಂಬವಾಗಿದೆ. 4ಜಿ ತಂತ್ರಜ್ಞಾನ ಸಿಗದೇ ಸೇವೆ ಒದಗಿಸುವುದು ಸಮಸ್ಯೆಯಾಗುತ್ತಿದೆ ಎಂದರು.
ದೂರು ನಿರ್ವಹಣೆಯನ್ನು ಹೊರ ಗುತ್ತಿಗೆಗೆ ನೀಡಲಾಗಿದೆ. ಹೀಗಾಗಿ 1500 ಸಂಖ್ಯೆಗೆ ಆನ್ಲೈನ್ ಮೂಲಕವೇ ದೂರು ಸಲ್ಲಿಸಬೇಕಿದೆ. ಅಭಿವೃದ್ಧಿ ಕಾರ್ಯಗಳಿಗೆ ಗುಂಡಿಗಳನ್ನು ತೆಗೆಯುವಾಗ ಬಿ.ಎಸ್.ಎನ್.ಎಲ್. ಕೇಬಲ್ಗಳಿಗೆ ತೊಂದರೆಯಾಗುತ್ತಿದೆ. ವಿದ್ಯುತ್ ಕಡಿತವಾದಾಗ ಸ್ವಯಂ ಚಾಲಿತವಾಗಿ ಆನ್ ಆಗುವ ಜನರೇಟರ್ಗಳಿಲ್ಲ, ಬ್ಯಾಟರಿಗಳ ಕೊರತೆ ಇದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಲಹಾ ಸಮಿತಿ ಸದಸ್ಯ ರಾದ ಹೆಚ್.ಹರೀಶ್, ಹನುಮಂತಪ್ಪ, ಮೋತ್ಯ ನಾಯ್ಕ, ಜಿ. ರೇವಣಸಿದ್ದಪ್ಪ, ಉಪ ಪ್ರಧಾನ ವ್ಯವಸ್ಥಾಪಕ ಪಿ.ಕೆ. ಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು.