ಮೈಸೂರು ಗ್ಯಾಂಗ್ ರೇಪ್; ಸಚಿವರ ಹೇಳಿಕೆ ಖಂಡಿಸಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರತಿಭಟನೆ

ದಾವಣಗೆರೆ, ಆ.27- ಮೈಸೂರು ಗ್ಯಾಂಗ್ ರೇಪ್ ಮತ್ತು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವರು ನೀಡಿರುವ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಜಿಲ್ಲಾ ಮಹಿಳಾ ಕಾಂಗ್ರೆಸ್ ಇಂದು ನಗರದಲ್ಲಿ ಪ್ರತಿಭಟನೆ ನಡೆಸಿತು.

ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತ ನಾಡಿದ ಹಿರಿಯ ಶಾಸಕ ಶಾಮನೂರು ಶಿವಶಂ ಕರಪ್ಪ ಅವರು ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ನಡೆಯುತ್ತಿರುವುದು ಖಂಡನೀಯ. ಇಂತಹ ಪ್ರಕರಣಗಳು ಮರುಕಳಿಸದಂತೆ ಸರ್ಕಾರ ಅತ್ಯಾಚಾರ ಪ್ರಕರಣದಲ್ಲಿ ಭಾಗವಹಿಸಿದ ಆರೋಪಿಗಳನ್ನು ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಆಗ್ರಹಿಸಿದರು.

ಈ ಪ್ರಕರಣ ನಡೆಯಬಾರದಾಗಿತ್ತು, ನಡೆದು ಹೋಗಿದೆ, ಇಲ್ಲಿ ಸರ್ಕಾರದ ತಪ್ಪಿದೆ, ಸರ್ಕಾರದ ವೈಫಲ್ಯವಿದೆ. ಸಾರ್ವಜನಿಕವಾಗಿ ನಿರ್ಜನ ಪ್ರದೇಶಗಳಲ್ಲಿ ಮದ್ಯಪಾನ ಮಾಡಲು ಸ್ವೇಚ್ಛಾಚಾರವಾಗಿ ಬಿಡುವುದೇ ಸರ್ಕಾರದ ಗೃಹ ಇಲಾಖೆಯ ವೈಫಲ್ಯವಾಗಿದೆ ಎಂದು ದೂರಿದರು.

ಉತ್ತರ ಪ್ರದೇಶ, ದೆಹಲಿ ಇಂತಹ ರಾಜ್ಯಗಳಲ್ಲಿ ನಡೆಯುತ್ತಿದ್ದ ಇಂತಹ ಅಮಾನುಷ ಘಟನೆಗಳು ಇದೀಗ ನಮ್ಮ ರಾಜ್ಯದಲ್ಲಿ ಅದರಲ್ಲೂ ಸಾಂಸ್ಕೃತಿಕ ನಗರಿಯಲ್ಲಿ ನಡೆದಿದ್ದು ನಿಜಕ್ಕೂ ಆಘಾತಕಾರಿ ಸಂಗತಿ ಎಂದರು.

ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸುತ್ತಾರೆ. ಕೆಲವು ಸಮಯ ಕಳೆದ ನಂತರ ಜಾಮೀನಿನ ಮೇಲೆ ಹೊರಬರುತ್ತಾರೆ. ಆರೋಪಿಗಳಿಗೆ ಇದು ಕಠಿಣ ಶಿಕ್ಷೆಯಾಗುವುದಿಲ್ಲ, ಸರ್ಕಾರ ಆರಂಭದಲ್ಲಿಯೇ ಇಂತಹ ದುಷ್ಕೃತ್ಯಗಳನ್ನು ಚಿವುಟಿ ಹಾಕುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲೇಬೇಕು ಎಂದು ಒತ್ತಾಯಿಸಿದರು. 

ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಮತಿ ಅನಿತಾಬಾಯಿ ಮಾಲತೇಶ್ ಮಾತನಾಡಿ, ಅತ್ಯಾಚಾರಿಗಳಿಗೆ ಶಿಕ್ಷೆ ಕೊಡಿಸುವ ಬದಲು ಯುವತಿಯದ್ದೇ ತಪ್ಪು ಎಂಬಂತೆ ಮಾತನಾಡುತ್ತಿರುವುದು ಎಷ್ಟು ಸರಿ ? ಎಂದು ಪ್ರಶ್ನಿಸಿ, ಇಂತಹ ಘಟನೆಗಳು ನಡೆದಾಗ ಮಹಿಳೆಯನ್ನು ದೂಷಿಸಲಾಗುತ್ತಿದೆ. ಮಹಿಳೆಯರ ಮೇಲೆ ಶೋಷಣೆ ನಡೆದಾಗ ಮಹಿಳೆಯರದ್ದೇ ತಪ್ಪು ಎಂಬಂತೆ ವಾದ ಮಾಡುವವರಿಗೆ ಛೀಮಾರಿ ಹಾಕಬೇಕು ಎಂದು ಆಗ್ರಹಿಸಿದರು. 

ಅತ್ಯಾಚಾರವೇ ಆಗಿರಬಹುದು. ದೈಹಿಕ ದೌರ್ಜನ್ಯ ಅಥವಾ ಮೌಖಿಕ ಶೋಷಣೆಯೇ ಆಗಿರಬಹುದು. ಆದರೆ, ಇಲ್ಲಿ ಮಹಿಳೆಯನ್ನೇ ದೂಷಿಸಲಾಗುತ್ತದೆ. ನಿನ್ನದೇ ತಪ್ಪು ಎಂದು ಮಹಿಳೆಯರತ್ತ ಬೊಟ್ಟು ಮಾಡುತ್ತಿರುವುದು ದುರ್ದೈವ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಶ್ರೀಮತಿ ಅಶ್ವಿನಿ ಪ್ರಶಾಂತ್, ಪ್ರಧಾನ ಕಾರ್ಯದರ್ಶಿ ಸುಷ್ಮಾ ಪಾಟೀಲ್, ನಾಗರತ್ನಮ್ಮ, ಆಶಾ ಮುರುಳಿ, ಉಮಾ ಕುಮಾರ್, ಗೀತಾ ಚಂದ್ರಶೇಖರ್, ಮಂಗಳಮ್ಮ, ಪುಷ್ಪಾ, ಗೀತಾ ಪ್ರಶಾಂತ್, ಸುನೀತಾ ಭೀಮಣ್ಣ, ಹರೀಶ್ ಕೆ.ಎಲ್.ಬಸಾಪುರ, ಶಶಿಧರ್‌ ಪಾಟೀಲ್, ಮನು ಮತ್ತಿತರರಿದ್ದರು.

error: Content is protected !!