ಜಿಲ್ಲಾ ಕಸಾಪ ಅಧ್ಯಕ್ಷರಾಗಿ ಕಾರ್ಯಭಾರ ವಹಿಸಿಕೊಂಡ ಬಿ. ವಾಮದೇವಪ್ಪ
ಚುನಾವಣೆ ನಡೆದು ಆಪಾದನೆ ತಪ್ಪಿತು
ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ನಡೆಯದೇ ಚುನಾವಣೆ ನಡೆದಿದ್ದು ಒಳ್ಳೆಯದೇ ಆಯಿತು. ಸ್ವಾಮೀಜಿಗಳ ಕಾಲು ಹಿಡಿದು ಗೆದ್ದರು ಎಂಬ ಆಪಾದನೆ ತಪ್ಪಿತು ಎಂದು ಕ.ಸಾ.ಪ. ನೂತನ ಅಧ್ಯಕ್ಷ ಬಿ.ವಾಮದೇವಪ್ಪ ಹೇಳಿದ್ದಾರೆ. ಚುನಾವಣೆಗೆ ಮುಂಚೆ ತರಳಬಾಳು ಮಠದ ಹರಳಕಟ್ಟೆ ಪೀಠದ ಪೀಠಾಧ್ಯಕ್ಷರಾದ ಶ್ರೀ ಶಿವಪ್ರಕಾಶ ಸ್ವಾಮೀಜಿ ಅವರು ಅನುಭವ ಮಂಟಪದಲ್ಲಿ ಕರೆದಿದ್ದ ಆಕಾಂಕ್ಷಿಗಳ ಸಭೆಯಲ್ಲಿ ಒಬ್ಬರು ಹೊರತು ಪಡಿಸಿ ಉಳಿದವರೆಲ್ಲ ಬಂದಿದ್ದರು. ಶ್ರೀಗಳ ಆಶಯದಂತೆ ಎಲ್ಲರೂ ತಮ್ಮ ಪರವಾಗಿ ನಾಮಪತ್ರ ವಾಪಸ್ ಪಡೆದರು. ಅಂದೇ ನನ್ನ ಗೆಲುವು ನಿಶ್ಚಿತವಾಗಿತ್ತು ಎಂದವರು ತಿಳಿಸಿದರು.
ದಾವಣಗೆರೆ, ನ. 25 – ತಾಲ್ಲೂಕು ಹಾಗೂ ಹೋಬಳಿ ಘಟಕಗಳಲ್ಲಿ ಕನ್ನಡ ಭವನಗಳ ನಿರ್ಮಾಣ, ಆನ್‌ಲೈನ್ ಮೂಲಕ ಸದಸ್ಯತ್ವ ನೋಂದಣಿ, ತಾಲ್ಲೂಕು ಘಟಕ ಗಳಲ್ಲಿ ವ್ಯವಸ್ಥಿತ ಕಾರ್ಯಪಡೆಗಳ ರಚನೆ, ವಿಶ್ವ ಕನ್ನಡ ಸಮ್ಮೇಳನ ಆಚರಣೆ ಸೇರಿದಂತೆ ಹಲವಾರು ಕ್ರಮಗಳ ಮೂಲಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತನ್ನು ರಾಜ್ಯದಲ್ಲೇ ಆದರ್ಶ ವಾಗಿ ಮಾಡುವ ಗುರಿ ಹೊಂದಿರುವುದಾಗಿ ಜಿಲ್ಲಾ ಕ.ಸಾ.ಪ. ನೂತನ ಅಧ್ಯಕ್ಷ ಬಿ.ವಾಮದೇವಪ್ಪ ತಿಳಿಸಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಅವರಿಂದ ಪರಿಷತ್ ಅಧ್ಯಕ್ಷ ಸ್ಥಾನದ ಕಾರ್ಯಭಾರ ಸ್ವೀಕರಿಸಿದ ನಂತರ ಕುವೆಂಪು ಕನ್ನಡ ಭವನ ದಲ್ಲಿ ಆಯೋಜಿಸ ಲಾಗಿದ್ದ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಮಹಲಿಂಗ ರಂಗ ಪ್ರಶಸ್ತಿ ಹಾಗೂ ಎಸ್‌ಎಸ್‌ಎಲ್‌ಸಿಯಲ್ಲಿ ಸಾಧನೆ ಮಾಡಿದವರಿಗೆ ಕನ್ನಡ ರತ್ನ ಪ್ರಶಸ್ತಿ ನೀಡುವ ಕಾರ್ಯಗಳನ್ನು ಕೈಗೊಳ್ಳುವ ಜೊತೆಗೆ ಸದಸ್ಯತ್ವ ಪಡೆಯುವ ಶುಲ್ಕ ಕಡಿಮೆ ಮಾಡಲು ರಾಜ್ಯ ಪರಿಷತ್ ಜೊತೆ ಚರ್ಚಿಸುವುದಾಗಿ ಹೇಳಿದರು.
ಸಾಹಿತ್ಯ ಪರಿಷತ್‌ನ ಸದಸ್ಯರ ಜೊತೆ ಚರ್ಚಿಸುವ ಮೂಲಕ ಪರಿಷತ್ ಅಭಿವೃದ್ಧಿಗೆ ಕ್ರಿಯಾ ಯೋಜನೆ ರೂಪಿಸಲಾಗುವುದು ಎಂದೂ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಿಕಟಪೂರ್ವ ಅಧ್ಯಕ್ಷ ಡಾ. ಹೆಚ್.ಎಸ್. ಮಂಜುನಾಥ ಕುರ್ಕಿ, ತಾವು ಅಧ್ಯಕ್ಷ ಸ್ಥಾನದ ಚುನಾವಣೆ ಎದುರಿಸಿದಾಗ ತಮ್ಮ ವಿರುದ್ಧ ಸ್ಪರ್ಧಿಸಿದವರನ್ನೇ ಪರಿಷತ್ತಿನ ಪದಾಧಿಕಾರಿಗಳಾಗಿ ನೇಮಿಸಿದ್ದೆ. ಸಾಹಿತ್ಯ ವಲಯದ ನಾವೆಲ್ಲರೂ ಸಹೋದರರೆಂದೇ ಭಾವಿಸಿದ್ದೇನೆ ಎಂದರು.
ಕಸಾಪ ಮಾಜಿ ಅಧ್ಯಕ್ಷ ಹಾಗೂ ತರಳಬಾಳು ವಿದ್ಯಾಸಂಸ್ಥೆಯ ಆಡಳಿತಾಧಿ ಕಾರಿ ಪ್ರೊ. ಎಸ್.ಬಿ. ರಂಗನಾಥ್ ಮಾತನಾಡಿ, ಭಾಷೆ, ನೀರು, ಗಡಿ, ಉದ್ಯೋಗ, ಕನ್ನಡ ಮಾಧ್ಯಮದ ಮುಂತಾದ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರದ ಜೊತೆಗೆ ಸಾಹಿತ್ಯ ಪರಿಷತ್ ಕಾರ್ಯ ನಿರ್ವಹಿಸಬೇಕು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಮಾತನಾಡಿ, ಕನ್ನಡ ಭವನಕ್ಕೆ ಅಗತ್ಯವಾದ ಧ್ವನಿ ವ್ಯವಸ್ಥೆ, ಜನರೇಟರ್, ಶೌಚಾ ಲಯ ಸೇರಿದಂತೆ ಹಲವಾರು ಸೌಲಭ್ಯಗಳಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸುವುದಾಗಿ ಹೇಳಿದರು.
ಹೋಟೆಲ್ ಉದ್ಯಮಿ ಅಣಬೇರು ರಾಜಣ್ಣ ಮಾತನಾಡಿ, ಸಾಹಿತ್ಯ ಪರಿಷತ್ ಚಟುವಟಿಕೆಗಳಿಗಾಗಿ 50 ಸಾವಿರ ರೂ.ಗಳನ್ನು ನೀಡುವುದಾಗಿ ಘೋಷಿಸಿದರು.
ರೈತ ಮುಖಂಡ ಎನ್.ಜಿ. ಪುಟ್ಟಸ್ವಾಮಿ ಮಾತನಾಡಿ, ಸಾಹಿತ್ಯ ಪರಿಷತ್‌ನಲ್ಲಿ ಇನ್ನಷ್ಟು ಉತ್ತಮ ಕೆಲಸಗಳಾಗಬೇಕಿದೆ. ತಾಲ್ಲೂಕಿಗೆ ಒಂದು ಸಾಹಿತ್ಯ ಭವನ ನಿರ್ಮಾಣವಾಗಿ, ರಾಜ್ಯದಲ್ಲೇ ಉತ್ತಮ ಕಾರ್ಯ ನಿರ್ವಹಣೆಯಾಗಲಿ ಎಂದು ಆಶಿಸಿದರು.
ಹರಿಹರ ನಗರಸಭೆ ಮಾಜಿ ಅಧ್ಯಕ್ಷ ರೇವಣಸಿದ್ದಪ್ಪ, ಸಂತೇಬೆನ್ನೂರು ಸಾಹಿತಿ ಕೆ. ಸಿದ್ದಲಿಂಗಪ್ಪ, ಹರಿಹರ ತಾಲ್ಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ಅಂಗಡಿ ರೇವಣ ಸಿದ್ದಪ್ಪ ಮತ್ತಿತರರು ಮಾತನಾಡಿದರು. ವೇದಿಕೆಯ ಮೇಲೆ ಕ.ಸಾ.ಪ. ಮಾಜಿ ಅಧ್ಯಕ್ಷ ಎ.ಆರ್. ಉಜ್ಜಿನಪ್ಪ ಉಪಸ್ಥಿತರಿದ್ದರು.
ಸಿರಾಜ್ ಅಹಮದ್ ಸ್ವಾಗತಿಸಿದರೆ, ಎನ್.ಎಸ್. ರಾಜು ನಿರೂಪಿಸಿದರು.