ಹಂದಿಗಳನ್ನು ಹಿಡಿದು ಲಸಿಕೆ ಹಾಕಿಯೇ ಮಾಸಡಿ ವರಾಹ ಶಾಲೆಯಲ್ಲಿ ಕಲೆಹಾಕಿ, ರೋಗ ಹತೋಟಿಗೆ ತರಲಾಗುವುದು.
– ಬಾಬು ಹೋಬಳದಾರ್, ಪ.ಪಂ. ಅಧ್ಯಕ್ಷ
ಹೊನ್ನಾಳಿ, ನ.25- ಅನೇಕ ದಿನಗಳಿಂದ ಪ್ರತಿದಿನ ಹೊನ್ನಾಳಿ ಪಟ್ಟಣದಲ್ಲಿ 15 ರಿಂದ 20 ಹಂದಿಗಳ ಸಾವು ಸಂಭವಿಸುತ್ತಿರುವುದಕ್ಕೆ ಕ್ಲಾಸಿಕಲ್ ಸ್ವೈನ್ ಫೀವರ್ ಎಂಬ ರೋಗ ಕಾರಣ ಎಂಬುದಾಗಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಬಾಬು ಹೋಬಳದಾರ್ ತಿಳಿಸಿದರು.
ಗುರುವಾರ ಈ ವಿಷಯವಾಗಿ ಸಭೆ ನಡೆಸಿದ ಅವರು, ಒಂದು ತಿಂಗಳ ಅಂತರದಲ್ಲಿ ಪ್ರತಿದಿನ ಹಂದಿಗಳು ಸಾಯುವುದಕ್ಕೆ ಯಾರೋ ವಿಷವನ್ನು ಇಟ್ಟಿರಬಹುದೆಂದು ಸುಮ್ಮನಿದ್ದೆವು.
ಪಟ್ಟಣದ ಸಾರ್ವಜನಿಕರು ಹಂದಿಗಳ ಸಾವಿನ ಬಗ್ಗೆಯೇ ಹೆಚ್ಚು ದೂರವಾಣಿ ಮಾಡುವುದಲ್ಲದೇ ತಮ್ಮ ಸಮಸ್ಯೆಯನ್ನು ಹಂಚಿಕೊಳ್ಳುತ್ತಿದ್ದರು. ಒಂದು ದಿನ ಸುಮಾರು 40 ಕ್ಕೂ ಹೆಚ್ಚು ಹಂದಿಗಳನ್ನು ಟ್ರ್ಯಾಕ್ಟರ್‌ನಲ್ಲಿ ಹಾಕಿ ಕೊಂಡು ಪಂಚಾಯಿತಿ ಸಿಬ್ಬಂದಿಗಳು ಹೋಗುತ್ತಿರುವುದನ್ನು ಗಮನಿಸಿ, ಇಷ್ಟೊಂದು ಹಂದಿಗಳ ಸಾವಿಗೆ ಏನೋ ಕಾರಣ ಇರಬಹುದೆಂಬ ಶಂಕೆ ಮೂಡಿ ಗಮನ ಹರಿಸಲಾಯಿತು.
ಪಶುವೈದ್ಯಾಧಿಕಾರಿಗಳ ಹಾಗೂ ಆರೋಗ್ಯ ನಿರೀಕ್ಷ ಕರ ಮೂಲಕ ದಾವಣಗೆರೆಗೆ ಸತ್ತ ಹಂದಿಗಳ ವರದಿ ಕಳಿ ಸಿದಾಗ ಯಾವುದೇ ರೋಗವಿಲ್ಲವೆಂದು ವರದಿ ಬಂದಿತು. ಹಂದಿಗಳ ಸಾವಿನ ಪ್ರಮಾಣ ಹೆಚ್ಚಿದ ಕಾರಣ ಮತ್ತೊಷ್ಟು ಅನುಮಾನ ಬಲಗೊಂಡು, ಹಂದಿ ಸತ್ತ ಎರಡು ತಾಸುಗಳಲ್ಲಿ ಅದರ ಶಾಂಪಲ್ ಪಡೆದು, ಬೆಂಗಳೂರು ಲ್ಯಾಬ್‍ಗೆ ಕಳಿಸಿದಾಗ ಕ್ಲಾಸಿಕಲ್ ಸ್ವೈನ್ ಫೀವರ್ ರೋಗವಿರುವ ಬಗ್ಗೆ ಅಲ್ಲಿನ ವೈದ್ಯರು ದೃಢಪಡಿಸಿದರು.
ಬುಧವಾರ ಹಂದಿ ಮಾಲೀಕರು ಹಾಗೂ ಜಿಲ್ಲೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಸಾರ್ವಜನಿಕರಿಗೂ ಈ ಕಾಯಿಲೆ ಬರಬಹುದೆಂಬ ಶಂಕೆ ಇದ್ದು, ಇದರ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಜನತೆಗೆ ಎಚ್ಚರಿಕೆ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ.
ಮಾಸಡಿಯ ವರಾಹ ಶಾಲೆಯಲ್ಲಿ ಹಂದಿಗಳನ್ನು ಇರಿಸಿ ಲಸಿಕೆ ಹಾಕುವ ಪ್ರಕ್ರಿಯೆಗೆ ಮುಂದಾಗಲಿದ್ದು, ಸಾರ್ವಜನಿಕರು ಹಾಗೂ ಹಂದಿ ಮಾಲೀಕರ ವೈದ್ಯಾಧಿಕಾರಿಗಳ ಸಹಕಾರ ಅತಿ ಮುಖ್ಯವಾಗಿದೆ ಎಂದರು.
ಪ್ರತಿ ದಿನ ಹಿಡಿದ ಹಂದಿಗಳಿಗೆ ಚುಚ್ಚು ಮದ್ದು ಹಾಕಿಯೇ ವರಾಹ ಶಾಲೆಗೆ ಬಿಡಲಾಗುವುದು. ಲಸಿಕೆ ಹಾಕಿ 20 ದಿನ ಅಲ್ಲಿಯೇ ಹಂದಿಗಳನ್ನು ಇರಿಸಿ ರೋಗ ಹತೋಟಿ ನಂತರ ಹಂದಿಗಳನ್ನು ಬೇರೆಡೆ ಸಾಗಿಸುವಂತೆ ಸೂಚಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಪಂಚಾಯಿತಿ
ಉಪಾಧ್ಯಕ್ಷರಾದ ರಂಜಿತಾ ಚನ್ನಪ್ಪ, ಪಂಚಾಯಿತಿ ಸದಸ್ಯ ಬಾವಿಮನಿ ರಾಜಣ್ಣ ಸೇರಿದಂತೆ ಶಿವು ಉಡೇದ್, ಮಂಜು ಇಂಚರ ಕೋಳಿ ಸತೀಶ್ ಇದ್ದರು.