ದೂಡಾ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ದೇವರಮನಿ ಶಿವಕುಮಾರ್
ದಾವಣಗೆರೆ, ಆ.26- ದಾವಣಗೆರೆ-ಹರಿಹರ ನಗರಾಭಿವೃದ್ಧಿ ವ್ಯಾಪ್ತಿಯಲ್ಲಿ ಯಾವುದೇ ಅಕ್ರಮ ಲೇಔಟ್ ನಿರ್ಮಿಸಲು ಅವಕಾಶ ನೀಡುವುದಿಲ್ಲ ಎಂದು ದೂಡಾ ನೂತನ ಅಧ್ಯಕ್ಷ ದೇವರಮನಿ ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ದೂಡಾ ಕಚೇರಿ ಸಭಾಂಗಣದಲ್ಲಿ ಇಂದು ಮಧ್ಯಾಹ್ನ ದೂಡಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಯಾರೂ ಕೂಡ ಅಕ್ರಮ ಲೇಔಟ್ಗಳನ್ನು ನಿರ್ಮಿಸಬಾರದು. ದೂಡಾಕ್ಕೆ ಅರ್ಜಿ ಸಲ್ಲಿಸಿ, ಕಾನೂನು ಪ್ರಕಾರ ಬಡಾವಣೆ ನಿರ್ಮಿಸಿ, ಅಭಿವೃದ್ಧಿ ಪಡಿಸಿದ ನಂತರವೇ ನಿವೇಶನ ಹಂಚಿಕೆ ಮಾಡುವಂತೆ ರಿಯಲ್ ಎಸ್ಟೇಟ್ ಉದ್ದಿಮೆದಾರರಲ್ಲಿ ಮನವಿ ಮಾಡಿದರು.
ಅಕ್ರಮ ಸಾಬೀತಾದರೆ ರಾಜಕೀಯ ನಿವೃತ್ತಿ
ದೂಡಾದಿಂದ ಸಕಲ ದಾಖಲೆ ಗಳನ್ನು ಸಲ್ಲಿಸಿ, ಲಾಟರಿ ಮೂಲಕ ನಿವೇಶನ ಪಡೆದಿದ್ದೇನೆ. ಇದು ಕಾನೂನು ಬಾಹಿರವೆಂದು ಸಾಬೀತಾದರೆ ರಾಜಕೀ ಯದಿಂದಲೇ ನಿವೃತ್ತಿ ಹೊಂದುತ್ತೇನೆ ಎಂದು ದೂಡಾ ನೂತನ ಅಧ್ಯಕ್ಷ ದೇವರ ಮನಿ ಶಿವಕುಮಾರ್ ಸ್ಪಷ್ಟಪಡಿಸಿದರು.
2011 ರಲ್ಲಿ ದೂಡಾದಿಂದ ನಿವೇಶನಕ್ಕೆ ಅರ್ಜಿ ಕರೆಯಲಾಗಿತ್ತು. ಸೂಕ್ತ ದಾಖಲೆಗಳೊಂದಿಗೆ ನಾನೂ ಕೂಡ ಅರ್ಜಿ ಸಲ್ಲಿಸಿದ್ದೆ. 2018 ರಲ್ಲಿ ನಡೆದ ಲಾಟರಿ ಮೂಲಕ ನಿವೇಶನ ಆಯ್ಕೆಯಾ ಗಿರುವ ಬಗ್ಗೆ ದೂಡಾ ಪ್ರಮಾಣ ಪತ್ರವನ್ನು ನೀಡಿದೆ. ದೂಡಾದಿಂದ ನೇರವಾಗಿ ನಿವೇಶನ ಮಂಜೂರು ಮಾಡಿಲ್ಲ. ಬಹಿರಂಗವಾಗಿ ನಡೆದ ಲಾಟರಿ ಪ್ರಕ್ರಿಯೆ ಯಲ್ಲಿ ಮಂಜೂರಾಗಿದೆ ಎಂದರು.
ದೂಡಾದ ನಿವೇಶನ ಉಚಿತ ಅಲ್ಲ
ನಿವೇಶನಕ್ಕೆ ಅರ್ಜಿ ಸಲ್ಲಿಸುವುದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಕೆಲವು ಗೊಂದಲಗಳಿರಬಹುದು. ಆದರೆ ದೂಡಾದಿಂದ ಯಾವುದೇ ನಿವೇಶನಗಳನ್ನು ಉಚಿತವಾಗಿ ನೀಡಲಾಗುವುದಿಲ್ಲ ಎಂದು ನೂತನ ಅಧ್ಯಕ್ಷ ದೇವರಮನಿ ಶಿವಕುಮಾರ್ ಸ್ಪಷ್ಟಪಡಿಸಿದರು.
ನಿವೇಶನಗಳ ಬೇಡಿಕೆಗೆ ದೂಡಾದಿಂದ ಅರ್ಜಿ ಕರೆಯಲಾಗಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ತದನಂತರ ರೈತರಿಂದ ಭೂಮಿ ಖರೀದಿಸಿ ಬಡಾವಣೆ ನಿರ್ಮಿಸಿ, ನಿಗದಿತ ಬೆಲೆಗೆ ಲಾಟರಿ ಮೂಲಕ ನಿವೇಶನ ಹಂಚಿಕೆ ಮಾಡಲಾಗುವುದು ಎಂದರು.
ನೂರು ರೂ. ಅರ್ಜಿ ಜೊತೆಗೆ ನಿವೇಶನದ ಅಳತೆಗೆ ಅನುಸಾರವಾಗಿ ಪಡೆಯುವ ಹಣದಿಂದ ಸಾರ್ವಜನಿಕರಿಗೆ ಹೊರೆಯಾಗುವುದಿಲ್ಲವೇ? ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ದೇವರಮನಿ ಅವರು, ಇದೀಗ ತಾನೆ ಅಧಿಕಾರ ಸ್ವೀಕರಿಸಿದ್ದೇನೆ. ಅಧಿಕಾರಿಗಳೊಂದಿಗೆ ಚರ್ಚಿಸಿ, ವಾಪಸ್ ಕೊಡಲು ಬರುತ್ತದೆ ಎಂದರೆ ಖಂಡಿತಾ ವಾಪಸ್ ಮಾಡಿಸಿಕೊಡುತ್ತೇನೆ. ಇಲ್ಲವಾದರೆ ಬಡಾವಣೆ ನಿರ್ಮಿಸಿ ನಿವೇಶನ ಹಂಚಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದರು.
ಶೀಘ್ರ ಬಾತಿ ಕೆರೆ ದೂಡಾಕ್ಕೆ ಹಸ್ತಾಂತರ: ಸಂಸದ ಸಿದ್ದೇಶ್ವರ
ಇನ್ನೂ ಒಂದು ವಾರದೊಳಗೆ ಬಾತಿ ಕೆರೆಯನ್ನು ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಹಸ್ತಾಂತರ ಮಾಡಲಾಗುವುದು. ತನ್ಮೂಲಕ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ತಿಳಿಸಿದ್ದಾರೆ.
ದೂಡಾ ಕಚೇರಿ ಸಭಾಂಗಣದಲ್ಲಿ ತಮ್ಮನ್ನು ಭೇಟಿಯಾದ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ವಾಟರ್ ಪಾರ್ಕ್ ನಿರ್ಮಾಣ ಮಾಡುವ ಜೊತೆಗೆ ಬಾತಿ ಕೆರೆಯನ್ನು ಮನರಂಜನಾ ಕೇಂದ್ರವನ್ನಾಗಿ ಮಾಡಲಾಗುವುದು. ಆರು ತಿಂಗಳಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದರು.
ಶಾಸಕ ಎಸ್.ಎ. ರವೀಂದ್ರನಾಥ್ ಮಾತನಾಡಿ, ಒಳ್ಳೆಯ ಕೆಲಸ ಮಾಡಲು ಅವಕಾಶಗಳು ಸಾಕಷ್ಟಿವೆ. ಅದನ್ನು ಸರಿಯಾದ ರೀತಿ ಬಳಸಿಕೊಂಡು ಜನತೆಗೆ ಉತ್ತಮ ಅಧಿಕಾರ ನೀಡುವಂತೆ ಸಲಹೆ ನೀಡಿದರು.
ಹಿಂದಿನ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಅವಧಿಯಲ್ಲೂ ಸಹ ಸುಮಾರು 60 ಕೋಟಿ ರೂ.ಗಳಷ್ಟು ಕಾಮಗಾರಿಗಳಾಗಿವೆ. ಇದೀಗ ಅಧಿಕಾರ ವಹಿಸಿಕೊಂಡ ದೇವರಮನಿ ಶಿವಕುಮಾರ್ ಅವರಿಗೆ ಯಾವುದೇ ಆಸೆ- ಆಕಾಂಕ್ಷಿಗಳಿಲ್ಲ. ಉತ್ತಮ ಆಡಳಿತ ನೀಡಲಿ ಎಂದು ಶುಭ ಹಾರೈಸಿದರು.
ನೂತನ ಅಧ್ಯಕ್ಷ ದೇವರಮನಿ ಶಿವಕುಮಾರ್ ಮಾತನಾಡಿ, ಸಾರ್ವಜನಿಕರು ದೂಡಾ ಕಚೇರಿಗೆ ಬಂದು ತಮ್ಮ ಅಹವಾಲುಗಳನ್ನು ಸಲ್ಲಿಸಿದ 15 ದಿನಗಳೊಳಗಾಗಿ ಕಾನೂನಾತ್ಮಕವಾಗಿ ವಿಲೇವಾರಿ ಮಾಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಬಿ.ಪಿ. ಹರೀಶ್, ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಪಾಲಿಕೆ ಮೇಯರ್ ಎಸ್.ಟಿ. ವೀರೇಶ್, ದೂಡಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ್, ಬಿಜೆಪಿ ಮುಖಂಡ ಕೆ.ಬಿ. ಶಂಕರನಾರಾಯಣ, ದೂಡಾ ನೂತನ ಸದಸ್ಯರಾದ ಮಾರುತಿರಾವ್ ಘಾಟ್ಗೆ, ಲಕ್ಷ್ಮಣ್, ಬಾತಿ ಚಂದ್ರಶೇಖರ್, ಶ್ರೀಮತಿ ಗೌರಮ್ಮ ವಿ. ಪಾಟೀಲ್, ಆಯುಕ್ತ ಬಿ.ಟಿ. ಕುಮಾರಸ್ವಾಮಿ, ಎಇಇ ಶ್ರೀಕರ, ಯುವ ಮುಖಂಡ ಪಿ.ಸಿ. ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.
ದಾವಣಗೆರೆ – ಹರಿಹರ ನಗರಗಳ ವ್ಯಾಪ್ತಿಯಲ್ಲಿ ಪ್ರಾಧಿಕಾರದಿಂದ ಸುಂದರ ಬಡಾವಣೆ ನಿರ್ಮಿಸಿ, ಬಡವರಿಗೆ ಕೈಗೆಟಕುವ ದರದಲ್ಲಿ ನಿವೇಶನ ನೀಡಬೇಕೆಂಬುದೇ ನಮ್ಮ ಮೂಲ ಉದ್ದೇಶವಾಗಿದೆ. ಇದಕ್ಕಾಗಿ ಈಗಾ ಗಲೇ 51 ಎಕರೆ ಜಮೀನನ್ನು ಗುರುತಿಸಿ, ಸರ್ಕಾರಕ್ಕೆ ಪ್ರಸ್ತಾವನೆ ಕೂಡ ಸಲ್ಲಿಸಲಾಗಿದ್ದು, ಬಡಾವಣೆ ನಿರ್ಮಿಸಲು ತಯಾರಿ ಕೂಡ ಮಾಡಿಕೊಳ್ಳಲಾಗುತ್ತಿದೆ. ಅಗತ್ಯ ಬಿದ್ದಲ್ಲಿ ಸೂಕ್ತ ಜಮೀನು ಸ್ವಾಧೀನಕ್ಕೆ ಮುಂದಾಗು ವುದಾಗಿ ತಿಳಿಸಿದ ಅವರು, ಕೆಲವೇ ತಿಂಗಳು ಗಳಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡುವ ಪ್ರಯತ್ನ ಮಾಡಲಾಗುವುದು ಎಂದರು.
ರಾಜನಹಳ್ಳಿ ಶಿವಕುಮಾರ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ತಮ್ಮ ಅವಧಿಯಲ್ಲೂ ಸಹ ಇನ್ನೂ ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಮಾಡುವ ಭರವಸೆಯನ್ನು ಶಿವಕುಮಾರ್ ನೀಡಿದರು.