ದೂರು ಬಂದರೆ, ಬಾಲ ಬಿಚ್ಚಿದರೆ ಹುಷಾರ್ !

156 ರೌಡಿಶೀಟರ್ ಪರೇಡ್ ನಲ್ಲಿ ಎಸ್ಪಿ ರಿಷ್ಯಂತ್ ಖಡಕ್ ಎಚ್ಚರಿಕೆ

ದಾವಣಗೆರೆ, ಆ.26- ಲ್ಯಾಂಡ್ ಡಿಸ್‌ಪ್ಯೂಟ್ ಪಂಚಾಯ್ತಿ ಮಾಡೋದು, ಜನರಿಗೆ ಹೆದರಿಸೋದು, ಹಫ್ತಾ ವಸೂಲಿ ಮಾಡಲು ಮುಂದಾದರೆ ಯಾವುದೇ ಕಾರಣಕ್ಕೂ ಸಹಿಸಲ್ಲ. ಜನರಿಗೆ ತೊಂದರೆ ಕೊಟ್ಟ ಬಗ್ಗೆ ದೂರು ಬಂದರೆ ಸುಮ್ಮನಿರೋಲ್ಲ. ಬಾಲ ಬಿಚ್ಚಿದರೆ ಹುಷಾರ್ ಎಂದು ಎಸ್ಪಿ ಸಿ.ಬಿ. ರಿಷ್ಯಂತ್ ರೌಡಿಶೀಟರ್‌ಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ನಗರದ ಹೈಸ್ಕೂಲ್ ಮೈದಾನದಲ್ಲಿ ಇಂದು ಬೆಳಿಗ್ಗೆ ನಡೆದ ರೌಡಿಶೀಟರ್‌ಗಳ ಪರೇಡ್‌ನಲ್ಲಿ ಭಾಗವಹಿಸಿದ್ದ ನಗರ ವ್ಯಾಪ್ತಿಗೆ ಸಂಬಂಧಿಸಿದ ವಿವಿಧ ಠಾಣೆಗಳಲ್ಲಿ ರೌಡಿ ಲೀಸ್ಟ್‌ನಲ್ಲಿದ್ದ 156 ರೌಡಿಶೀಟರ್‌ಗಳ ಬಳಿ ಎಸ್ಪಿ ಸಿ.ಬಿ.ರಿಷ್ಯಂತ್ ತೆರಳಿ ಒಬ್ಬೊಬ್ಬರನ್ನೇ ಪೂರ್ವಾಪರ ವಿಚಾರಣೆ ನಡೆಸಿದರು.

ಜನರನ್ನು ಹೆದರಿಸಿ ಕೆಲವರು ಪುಂಡಾಟಿಕೆ ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಸಮಾಜಘಾತುಕ ಕೃತ್ಯಗಳಲ್ಲಿ ತೊಡಗಿದರೆ ಸಹಿಸುವುದಿಲ್ಲ. ಅಮಾಯಕರಿಂದ ಹಣ ವಸೂಲಿ ಮಾಡುವುದು ಸರಿಯಲ್ಲ. ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವುದು ಕಂಡು ಬಂದರೆ, ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಸಿದರು.

ಕೆಲವರು ರೌಡಿಶೀಟರ್‌ನಲ್ಲಿ ಹೆಸರು ಇರೋದೆ ವಸೂಲಿಗೆ ಅಂತಾ ತಿಳಿದುಕೊಂಡಂತಿದೆ. ರಾಜೀ ಪಂಚಾಯಿತಿ, ಜೂಜಾಟ ನಿಲ್ಲಿಸಬೇಕು. ಜನರಿಗೆ ಅನವಶ್ಯಕವಾಗಿ ತೊಂದರೆ ಕೊಟ್ಟರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ವಾರ್ನಿಂಗ್ ಮಾಡಿದರು.

ಪ್ರತಿ ತಿಂಗಳು ರೌಡಿಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತೇವೆ. ಷರತ್ತುಬದ್ಧ ಜಾಮೀನಿನ ಮೇಲೆ ಹೊರಗಿರುವವರು ಅಪರಾಧಿ ಕೃತ್ಯಗಳಲ್ಲಿ ತೊಡಗಿದ್ದರೆ ಜಾಮೀನು ರದ್ದುಗೊಳಿಸಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು. 

ಕೆಲವು ರೌಡಿಶೀಟರ್‌ಗಳಿಗೆ ವಯಸ್ಸಾಗಿದ್ದು, ಹಿಂದಿನ ಕೃತ್ಯಗಳನ್ನು ಬಿಟ್ಟು ಒಳ್ಳೆಯ ಜೀವನ ನಡೆಸುತ್ತಿದ್ದಾರೆ. ಸನ್ನಡತೆ ಆಧಾರದಲ್ಲಿ ಅಂತಹವರನ್ನು ರೌಡಿಶೀಟರ್ ಪಟ್ಟಿಯಿಂದ ಕೈಬಿಡುವ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದರು. 

ಈ ಸಂದರ್ಭದಲ್ಲಿ ಎಎಸ್ಪಿ ಎಂ.ರಾಜೀವ್, ಡಿವೈಎಸ್ಪಿ ನಾಗೇಶ್ ಐತಾಳ್, ಸಿಪಿಐ ಸುರೇಶ್ ಸಗರಿ, ಗಜೇಂದ್ರಪ್ಪ, ಮಂಜುನಾಥ್ ಸೇರಿದಂತೆ ಇತರರು ಇದ್ದರು.

error: Content is protected !!