ಕಸಾಪ ಜನ ಸಾಮಾನ್ಯರ ಪರಿಷತ್ ಮಾಡಲಾಗುವುದು: ಮಹೇಶ ಜೋಶಿ

ಕಸಾಪ ಜನ ಸಾಮಾನ್ಯರ ಪರಿಷತ್ ಮಾಡಲಾಗುವುದು: ಮಹೇಶ ಜೋಶಿ - Janathavaniದಾವಣಗೆರೆ, ಆ. 26- ಕನ್ನಡ ಸಾಹಿತ್ಯ ಪರಿಷತ್ತನ್ನು ಜನ ಸಾಮಾನ್ಯರ ಪರಿಷತ್ ಮಾಡುವುದಾಗಿ ಕ.ಸಾ.ಪ. ರಾಜ್ಯಾಧ್ಯಕ್ಷ  ಸ್ಥಾನದ ಅಭ್ಯರ್ಥಿ ನಾಡೋಜ ಡಾ.ಮಹೇಶ ಜೋಶಿ ತಿಳಿಸಿದ್ದಾರೆ.

ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸ್ಪರ್ಧಿಸಿರುವ 21 ಅಭ್ಯರ್ಥಿಗಳ ಪೈಕಿ ತಾವೂ ಒಬ್ಬರಾಗಿದ್ದು, ಗೆಲುವು ತಮ್ಮದಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ತಮ್ಮ ಅವಧಿಯಲ್ಲಿ ಒಂದೂ ಕನ್ನಡ ಶಾಲೆಯನ್ನು ಮುಚ್ಚಲು ಬಿಡುವುದಿಲ್ಲ. ಹೋಬಳಿ, ತಾಲ್ಲೂಕು ಮಟ್ಟದಲ್ಲೂ ಪಾರದರ್ಶಕವಾಗಿ ಚುನಾವಣೆ ನಡೆಯಲು ಕ್ರಮ ಕೈಗೊಳ್ಳಲಾಗುವುದು. ಯುವಕರಿಗೆ ಹಾಗೂ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ತಮ್ಮ ಪ್ರಣಾಳಿಕೆಯಲ್ಲಿನ ವಿಷಯಗಳ ಬಗ್ಗೆ ಹೇಳಿದರು.

ಹಿಂದಿನ ಕ.ಸಾ.ಪ. ಅಧ್ಯಕ್ಷ ಮನು ಬಳಿಗಾರ ಸೇರಿದಂತೆ ಅನೇಕ ಸದಸ್ಯರು ವಿಳಾಸ ಬದಲಿಸಿಕೊಂಡಿಲ್ಲ. ಕೆಲವರು ಮರಣ ಹೊಂದಿದ್ದರೂ ಸದಸ್ಯರಾಗಿಯೇ ಉಳಿದಿದ್ದಾರೆ. ತಾವು ಗೆದ್ದ ನಂತರ ಕ.ಸಾ.ಪ.ಗೆ ಸಂಬಂಧಿಸಿದಂತೆ ಆಪ್ ರಚಿಸಿ, ಆ ಮೂಲಕ ನೂತನ ಸದಸ್ಯತ್ವ ಸೇರ್ಪಡೆ,  ಸದಸ್ಯರ ವಿಳಾಸ ತಿದ್ದುಪಡಿ, ಹೆಸರು ತೆಗೆದು ಹಾಕುವಿಕೆ ಸೇರಿದ ವಿಷಯಗಳು ಸುಲಭವಾಗುವಂತೆ ಮಾಡಲಾಗುವುದು ಎಂದರು.

ಜಿಲ್ಲೆಯಲ್ಲಿ ಕಳೆದ ಬಾರಿ ಶೇ.59.7ರಷ್ಟು ಮಾತ್ರ ಮತದಾನವಾಗಿದೆ. ಕಳೆದ ಬಾರಿಗಿಂತ ಈ ವರ್ಷ 3 ಸಾವಿರ ಮತದಾರರು ಹೆಚ್ಚಾಗಿದ್ದು, ಈ ಬಾರಿ ಹೆಚ್ಚಿನ ಮತದಾನವಾಗುವ ನಿರೀಕ್ಷೆ ಇದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ನಿವೃತ್ತ ನ್ಯಾಯಾಧೀಶರಾದ ಅರಳಿ ನಾಗರಾಜ್, ಸದಾಶಿವಪ್ಪ ಶ್ಯಾಗಲೆ, ಸುಭಾಶ್ಚಂದ್ರ ಬೋಸ್, ಸಾಲಿಗ್ರಾಮ ಗಣೇಶ್ ಶೆಣೈ, ರಾಜಶೇಖರ ಗುಂಡಗತ್ತಿ, ನಾಗರಾಜ್, ಕೆ.ರಾಘವೇಂದ್ರ ನಾಯರಿ ಉಪಸ್ಥಿತರಿದ್ದರು.

error: Content is protected !!