ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಸಮಾರಂಭದಲ್ಲಿ ಡಾ.ಎಂ.ಜಿ. ಈಶ್ವರಪ್ಪ
ದಾವಣಗೆರೆ, ಆ.25- ಅವಿರತ ಶ್ರಮದಿಂದ ಪ್ರತಿಭೆ ಅನಾವರಣಗೊಳ್ಳಲು ಸಾಧ್ಯವಿದೆ. ವಿದ್ಯಾ ರ್ಥಿಗಳು ಸತತ ಅಧ್ಯಯನದಲ್ಲಿ ತೊಡಗಿಸಿಕೊಂಡು, ಅತಿ ಹೆಚ್ಚು ಅಂಕಗಳನ್ನು ಗಳಿಸುವ ಮೂಲಕ ಶಾಲೆಗೆ ಕೀರ್ತಿ ತರಬೇಕೆಂದು ಬಾಪೂಜಿ ವಿದ್ಯಾಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಡಾ. ಎಂ.ಜಿ. ಈಶ್ವರಪ್ಪ ಕರೆ ನೀಡಿದರು.
ನಗರದ ಎಸ್. ನಿಜಲಿಂಗಪ್ಪ ಬಡಾವಣೆಯಲ್ಲಿನ ಬಿ.ಇ.ಎ. ಪ್ರೌಢಶಾಲೆಯ ವತಿಯಿಂದ ಹಮ್ಮಿಕೊಂಡಿದ್ದ 2019-20 ನೇ ಸಾಲಿನ ಎಸ್ಸೆಸ್ಸೆಲ್ಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಾಷ್ಟ್ರಕವಿ ಕುವೆಂಪು ಅವರು ಮನೆಯಿಂದ ಹೊರ ಬರದೆ ಸತತ 6 ತಿಂಗಳ ಅವಿರತ ಶ್ರಮದ ಫಲವಾಗಿ ರಾಮಾಯಣ ದರ್ಶನಂ ಮಹಾಕಾವ್ಯ ಶ್ರೇಷ್ಠ ಕೃತಿಯಾಗಿ ಹೊರಹೊಮ್ಮಲು ಸಾಧ್ಯವಾಯಿತು.
ಆಹಾರ, ನೀರನ್ನೂ ಲೆಕ್ಕಿಸದೇ ಪ್ರಯೋ ಗಾಲಯದಲ್ಲಿ ನಿರಂತರವಾಗಿ ಸಂಶೋಧನೆ ಮಾಡಿದ್ದರಿಂದಲೇ ಐನ್ಸ್ಟೀನ್ ಖ್ಯಾತಿ ಗಳಿಸಲು ಸಾಧ್ಯವಾಯಿತು ಎಂದು ಇಬ್ಬರು ಮಹಾನ್ ಸಾಧಕರನ್ನು ಉದಾಹರಿಸಿದರು.
ತರಗತಿಯಲ್ಲಿ ದೇಹ ಮತ್ತು ಮನಸ್ಸನ್ನು ಕೇಂದ್ರೀಕರಿಸುವುದರಿಂದ ಪಾಠಗಳನ್ನು ಸರಿಯಾಗಿ ಅರ್ಥೈಸಿಕೊಂಡು ಅತ್ಯುತ್ತಮ ವಿದ್ಯಾರ್ಥಿಗಳಾಗಿ ಬೆಳೆಯಲು ಸಾಧ್ಯವಿದೆ ಎಂದರು.
ಸತತ ಅಧ್ಯಯನಶೀಲರಾಗಿ ಉತ್ತಮ ಅಂಕಗಳನ್ನು ಗಳಿಸುವ ಮೂಲಕ ಶಾಲೆಗೆ ಗೌರವ ತರುವ ಕೆಲಸ ಮಾಡುವಂತೆ ಹಿತ ನುಡಿದರು.
ಬಿಇಎ ಹೈಯರ್ ಪ್ರೈಮರಿ ಮತ್ತು ಬಿಇಎ ಪ್ರೌಢಶಾಲೆಯ ಆಡಳಿತಾಧಿಕಾರಿ ಪ್ರೊ. ವೈ. ವೃಷಭೇಂದ್ರಪ್ಪ ಮಾತನಾಡಿ, ಸಕಾರಾತ್ಮಕ ಚಿಂತನೆಗಳು ಆರೋಗ್ಯಕ್ಕೆ ಪೂರಕವಾಗಿರುತ್ತವೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಆರೋಗ್ಯದ ಕಡೆಗೂ ಹೆಚ್ಚು ಗಮನಹರಿಸುವ ಅಗತ್ಯವಿದೆ ಎಂದು ಹೇಳಿದರು.
ಪುಸ್ತಕಗಳೇ ನಿಜವಾದ ಆಸ್ತಿ. ವಿದ್ಯಾರ್ಥಿಗಳ ಭಾವನೆಗಳಿಗೆ ಸ್ಪಂದಿಸುವ ಮೂಲಕ ಸಂಸ್ಥೆ ಅವರಿಗೆ ಪ್ರೋತ್ಸಾಹಿಸುವ ಕೆಲಸ ಮಾಡಲಿದೆ. ಪ್ರತಿಭಾವಂತರನ್ನು ಗುರುತಿಸಿ ಅವರನ್ನು ಗೌರವಿಸುವ ಕಾರ್ಯ ಶ್ಲಾಘನೀಯ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಿಇಎ ಹೈಯರ್ ಪ್ರೈಮರಿ ಮತ್ತು ಬಿಇಎ ಪ್ರೌಢಶಾಲೆಯ ಅಧ್ಯಕ್ಷರಾದ ಶ್ರೀಮತಿ ಕಿರುವಾಡಿ ಗಿರಿಜಮ್ಮ ಮಾತನಾಡಿ, ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನಹರಿಸಬೇಕು. ತಂದೆ-ತಾಯಿಗಳಿಗೆ ಋಣಿಗಳಾಗಿರಬೇಕು ಎಂದರು.
ಸಂಸ್ಕಾರವಂತರಾದರೆ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ತಾವು ಶ್ರಮವಹಿಸಿ ಓದುವ ಜೊತೆಗೆ ತಮ್ಮ ಸ್ನೇಹಿತರನ್ನು ಓದಲು ಪ್ರೇರೇಪಿಸಬೇಕೆಂದು ಸಲಹೆ ನೀಡಿದರು.
2019-20 ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದ ಪಿ.ಜೆ. ಬಡಾವಣೆಯ ಬಿಇಎ ಪ್ರೌಢಶಾಲೆಯ ವಿದ್ಯಾರ್ಥಿನಿ ಕೆ. ಧನುಷಾ, ನಿಜಲಿಂಗಪ್ಪ ಬಡಾವಣೆ ಬಿಇಎ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಆರ್. ಸೋನಿಯಾ ಬಾಯಿ, ಗೌಸ್ ಇ ಜಮಾ, ಸಾಕ್ಷಿ ನಾಗರಾಜ್ ಮಶೆಟ್ಟಿ, ಎಂ.ಬಿ. ಸುಹಾಸ್, ಡಿ.ಬಿ. ಗ್ರೀಷ್, ಐಶ್ವರ್ಯ ಎ. ರಾವ್, ನಿತೀಶ್ ಆರ್. ಮಲಡಕರ್, ಕುಣೆಬೆಳಕೆರೆ ಬಾಪೂಜಿ ಪ್ರೌಢಶಾಲೆಯ ಯು. ನಿತ್ಯಾ, ಹರಿಹರದ ಶ್ರೀಮತಿ ಹಾಲಮ್ಮ ಶಾಮನೂರು ಶಿವಪ್ಪ ಪ್ರೌಢಶಾಲೆಯ ಎಂ.ಡಿ. ಆದಿಲ್ ಅತ್ತಾರ್ ಅವರಿಗೆ ನಗದು ಬಹುಮಾನ ನೀಡಿ ಸತ್ಕರಿಸಲಾಯಿತು.
ಸಾಕ್ಷಿ ಮತ್ತು ಗ್ರೀಷ್ಮ ಪ್ರಾರ್ಥಿಸಿದರು.
ಸಹ ಶಿಕ್ಷಕಿ ಎಸ್. ಸಾದಿಯಾಬಾನು ಸ್ವಾಗತಿಸಿದರು. ಸಹ ಶಿಕ್ಷಕ ಕೆ.ಎಂ. ಮಹಂತೇಶ್ ನಿರೂಪಿಸಿದರು. ಸಹ ಶಿಕ್ಷಕ ಎಸ್. ಜಗನ್ನಾಥ್ ವಂದಿಸಿದರು.