ಮತಾಂತರ ನಿಷೇಧ ಕಾಯ್ದೆಗೆ ಕ್ರೈಸ್ತ ಮುಖಂಡರ ಖಂಡನೆ

ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ

ದಾವಣಗೆರೆ, ನ.23- ರಾಜ್ಯ ಸರ್ಕಾರ ಜಾರಿಗೆ ತರಲುದ್ದೇಶಿಸಿರುವ ಮತಾಂತರ ನಿಷೇಧ ಕಾಯ್ದೆಯ ವಿರುದ್ಧ ಕ್ರೈಸ್ತ ಸಮುದಾಯವು ನಗರದ ಜಿಲ್ಲಾಧಿಕಾರಿ ಕಛೇರಿ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಿತು.

ಜಿಲ್ಲಾ ಕ್ರಿಶ್ಚಿಯನ್‌ ವೆಲ್‌ಫೇರ್‌ ಅಸೋಸಿಯೇಷನ್‌ ಆಶ್ರಯದಲ್ಲಿ ಪ್ರತಿಭಟಿಸಿದ ಕ್ರೈಸ್ತ ಸಮುದಾಯದ ಮುಖಂಡರು, ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರಲು ಉದ್ದೇಶಿಸಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಖಂಡಿಸಿ, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ರಾಜ್ಯ ಸರ್ಕಾರವು ಕ್ರೈಸ್ತ ಸಮುದಾಯವನ್ನೇ ಗುರಿ ಇಟ್ಟುಕೊಂಡು ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲು ಹೊರಟಿದೆ. ಶಾಂತಿಪ್ರಿಯರಾದ ನಾವು ಎಂದಿಗೂ ಯಾರನ್ನೂ ಬಲವಂತವಾಗಿ ಮತಾಂತರ ಮಾಡುವುದಿಲ್ಲ. ಸಂವಿಧಾನ ಹಾಗೂ ಕಾನೂನಿಗೆ ತಕ್ಕಂತೆ ನಡೆದುಕೊಂಡಿದ್ದೇವೆ. ಆಮಿಷವೊಡ್ಡಿ ಮತಾಂತರ ಮಾಡುವುದು ಅಸಂವಿಧಾನಿಕ ಹಾಗೂ ಕಾನೂನು ಪ್ರಕಾರ ಅಪರಾಧವಾಗಿದೆ. ಕ್ರೈಸ್ತ ಸಮುದಾಯದವರು ಎಂದಿಗೂ ಬಲವಂತ ಮತಾಂತರ ನಡೆಸಿಲ್ಲ. ಈ ವಿಚಾರದಲ್ಲಿ ನಮ್ಮ ಸಮುದಾಯದ ವಿರುದ್ಧ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು ಪ್ರತಿಪಾದಿಸಿದರು.

ಕ್ರೈಸ್ತ ಮಿಷನರಿಗಳು ವ್ಯಾಪಕವಾಗಿ ಮತಾಂತರ ಮಾಡುತ್ತಿವೆ. ಮತಾಂತರ ತಡೆಯಲು ಹೋದವರ ವಿರುದ್ಧ ಜಾತಿ ನಿಂದನೆ ಹಾಗೂ ಅತ್ಯಾಚಾರ ಪ್ರಕರಣ ದಾಖಲಿಸುತ್ತಿದ್ದಾರೆ ಎಂದು ಶಾಸಕ ಗೂಳಿಹಟ್ಟಿ ಶೇಖರ್‌ ವಿಧಾನ ಸಭೆಯಲ್ಲಿ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಶಾಸಕರ ಹೇಳಿಕೆಯ ನಂತರ ರಾಜ್ಯದಲ್ಲಿ ಕೋಮುಗಲಭೆ ಉಂಟುಮಾಡುತ್ತಿರುವ ಸಂಘಟನೆಯವರು ಶಾಂತಿಗೆ ಭಂಗ ತರುತ್ತಿದ್ದಾರೆ ಎಂದು ಮುಖಂಡರು ಇದೇ ವೇಳೆ ಅಸಮಾಧಾನ ವ್ಯಕ್ತಪಡಿಸಿದರು.

ನಮ್ಮ ಪ್ರಾರ್ಥನಾ ಮಂದಿರ ಹಾಗೂ ಸ್ವಯಂ ಪ್ರೇರಿತರಾಗಿ ಭಕ್ತಿಯಿಂದ ಪ್ರಾರ್ಥನೆಗೆ ಬರುವ ಭಕ್ತರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.

ಹರಿಹರದ ಎ.ಕೆ.ಯು.ಸಿ.ಎಫ್‌.ಎಚ್‌ ಅಧ್ಯಕ್ಷ ಫಾದರ್‌ ಡಾ. ಅಂತೋನಿ ಪೀಟರ್‌, ದಾವಣಗೆರೆಯ ಡಿಸಿಪಿ ಅಧ್ಯಕ್ಷ ಫಾಸ್ಟರ್‌ ಪ್ರೇಮ್‌ಕುಮಾರ್‌, ಡಿ.ಸಿ.ಡಬ್ಲ್ಯು.ಎ ಅಧ್ಯಕ್ಷ ಬಿ. ರಾಜಶೇಖರ್‌, ಅನಿಲ್‌ ನೀಲೋಗಲ್‌, ಡೇನಿಯಲ್‌ ಚಿಂದವಾಲ್‌, ಎಚ್‌. ಮೋಸಸ್‌ ಅಮನ್ನಾ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

error: Content is protected !!