ಸರ್ಕಾರಕ್ಕೆ ತುರ್ತಾಗಿ ಸಮೀಕ್ಷಾ ವರದಿ ಕಳುಹಿಸಬೇಕಿದೆ. ಅರ್ಜಿ ಸಲ್ಲಿಸಲು ಹೆಚ್ಚಿನ ಜನ ಬರುತ್ತಿದ್ದಾರೆ. ಇದರಿಂದ ಜನಕ್ಕೆ ತೊಂದರೆಯಾ ಗುತ್ತಿರುವುದೂ ಗಮನಕ್ಕೆ ಬಂದಿದೆ. ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಿಸುವ ಬಗ್ಗೆ ಸ್ಥಳೀಯ ಶಾಸಕರು, ದೂಡಾ ಅಧ್ಯಕ್ಷರೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು.
– ಬಿ.ಟಿ. ಕುಮಾರ ಸ್ವಾಮಿ, ಆಯುಕ್ತ, ದೂಡಾ
ದಾವಣಗೆರೆ, ಆ. 23- ದಾವಣಗೆರೆ – ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿಪಡಿಸಲು ಉದ್ದೇಶಿಸಿರುವ ವಸತಿ ಬಡಾವಣೆ ಯಲ್ಲಿ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಕರೆಯಲಾಗಿರುವ ಬೇಡಿಕೆ ಸಮೀಕ್ಷೆಗಾಗಿ ಅರ್ಜಿಸಲ್ಲಿಸಲು ಜನತೆ ಮುಗಿ ಬೀಳುತ್ತಲೇ ಇದ್ದಾರೆ.
ಅರ್ಜಿ ಸ್ವೀಕರಿಸುವಾಗಿನಿಂದಲೂ ಇಂದಿನವರೆಗೂ ಜನ ಬೆಳಿಗ್ಗೆಯಿಂದ ಸಂಜೆ ವರೆಗೂ ಸರದಿ ಸಾಲಿನಲ್ಲಿ ನಿಂತು ಅರ್ಜಿ ಸಲ್ಲಿಸುತ್ತಿದ್ದಾರೆ. ಕೆಲವರು ಉಚಿತವಾಗಿ ನಿವೇಶನ ಹಂಚಲಾಗುತ್ತದೆ ಎಂಬ ಗಾಳಿ ಸುದ್ದಿಗೆ ಅರ್ಜಿ ಸಲ್ಲಿಸಲು ಮುಗಿ ಬಿದ್ದಿದ್ದಾರೆ. ಆರಂಭದಲ್ಲಿ ನಗರದ ಪಿ.ಬಿ. ರಸ್ತೆಯಲ್ಲಿರುವ ಬ್ಯಾಂಕ್ ಆಫ್ ಬರೋಡ ಶಾಖೆಯಲ್ಲಿ ಅರ್ಜಿ ಶುಲ್ಕ ಹಾಗೂ ನೋಂದಣಿ ಶುಲ್ಕ ಸಲ್ಲಿಸ ಬೇಕೆಂದು ಪ್ರಾಧಿಕಾರದ ಪ್ರಕಟಣೆಯಲ್ಲಿ ತಿಳಿಸಲಾಗಿತ್ತು. ಆದರೆ ಜನರಿಗೆ ಅನುಕೂಲತೆ ಕಲ್ಪಿಸುವ ದೃಷ್ಟಿಯಿಂದ ಪ್ರಾಧಿಕಾರದ ಕಚೇರಿ ಆವರಣದಲ್ಲಿಯೇ ಶುಲ್ಕ ಕಟ್ಟಿಸಿಕೊಳ್ಳಲು ಅನುವು ಮಾಡಿಕೊಡಲಾಯಿತು.
ನಿವೇಶನ ಉಚಿತವಲ್ಲ : ದೂಡಾ ಸ್ಪಷ್ಟನೆ
ಪ್ರಾಧಿಕಾರದ ವತಿಯಿಂದ ಅಭಿವೃದ್ಧಿ ಪಡಿಸಲು ಉದ್ದೇಶಿಸಿರುವ ವಸತಿ ಬಡಾವಣೆಗಳಲ್ಲಿ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಜಮೀನು ಖರೀದಿಗೆ ಸಂಬಂಧಿಸಿದಂತೆ ನಿವೇಶನ ಹಂಚಿಕೆ ಮಾಡುವ ಕುರಿತು ಬೇಡಿಕೆ ಸಮೀಕ್ಷೆಯನ್ನು ಸರ್ಕಾಕ್ಕೆ ಕಳುಹಿಸಬೇಕಿದೆ.
ಬೇಡಿಕೆ ಸಮೀಕ್ಷೆ ವರದಿಯನ್ನು ಸರ್ಕಾರಕ್ಕೆ ಕಳುಹಿಸಿ, ಭೂಮಿ ಖರೀದಿಗೆ ಮಂಜೂರಾತಿ ನೀಡಿದ ನಂತರ ಭೂಮಿ ಖರೀದಿಸಿ, ಬಡಾವಣೆ ಅಭಿವೃದ್ಧಿ ಪಡಿಸಿ, ನಿವೇಶನ ಹಂಚಿಕೆ ಕುರಿತು ಮತ್ತೆ ಪ್ರವರ್ಗವಾರು ಅರ್ಜಿ ಆಹ್ವಾನಿಸಲಾಗುತ್ತದೆ.
ಅರ್ಜಿ ಆಹ್ವಾನಿಸುವ ಸಂದರ್ಭದಲ್ಲಿ ಈಗ ಬೇಡಿಕೆ ಸಮೀಕ್ಷೆಯಲ್ಲಿ ನೋಂದಣಿ ಮಾಡಿಕೊಳ್ಳಲಾದ ಅರ್ಜಿದಾರರಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ದೂಡಾ ಸ್ಪಷ್ಟಪಡಿಸಿದೆ. ಪ್ರಾಧಿಕಾರವು ಖರೀದಿಸಿದ ಭೂಮಿ ವೆಚ್ಚ ಹಾಗೂ ಅಭಿವೃದ್ಧಿಪಡಿಸಲು ಉದ್ದೇಶಿಸಿರುವ ವೆಚ್ಚ ಸೇರಿ ನಂತರ ನಿವೇಶನದ ದರವನ್ನು ನಿಗದಿಪಡಿಸಲಾಗುತ್ತದೆಯೇ ಹೊರತು, ಉಚಿತವಾಗಿ ನಿವೇಶನ ನೀಡಲಾಗುತ್ತದೆ ಎಂದು ಜನತೆ ತಪ್ಪಾಗಿ ಭಾವಿಸಬಾರದು ಎಂದು ದೂಡಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಆದಾಗ್ಯೂ ಜನತೆ ಅರ್ಜಿ ಸಲ್ಲಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸುತ್ತಿರುವುದರಿಂದ ಶುಲ್ಕ ತುಂಬಿಸಿಕೊಳ್ಳುವ ಹಾಗೂ ಅರ್ಜಿ ಸ್ವೀಕರಿಸುವ ಕೌಂಟರ್‌ಗಳನ್ನು ಹೆಚ್ಚಿಸಬೇಕೆಂಬುದು ಜನರ ಆಗ್ರಹವಾಗಿದೆ.
ಅರ್ಜಿ ಸಲ್ಲಿಕೆಗೆ ಇದೇ 26ನೇ ತಾರೀಖು ಕೊನೆಯ ದಿನ ಎಂದು ದೂಡಾ ಘೋಷಿಸಿರುವುದರಿಂದ ಜನರು ಅರ್ಜಿಗಳು ಸಿಗುತ್ತೋ ಇಲ್ಲವೋ ಎಂಬಂತೆ ಧಾವಿಸುತ್ತಿದ್ದಾರೆ. ಕೊರೊನಾ ಮರೆತು, ಮಾಸ್ಕ್ ಧರಿಸುವುದಾಗಲೀ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದನ್ನು ಮರೆತು ಜನತೆ ಮುಗಿ ಬೀಳುತ್ತಿರುವುದು ಇದೀಗ ಆತಂಕಕ್ಕೆ ಕಾರಣವಾಗಿದೆ.