ಮಕ್ಕಳಿಗೆ ಸಿಹಿ ನೀಡಿ ಸ್ವಾಗತ, ಮೊದಲ ದಿನವೇ ಉತ್ತಮ ಹಾಜರಾತಿ
ದಾವಣಗೆರೆ, ಆ.23- 9 ರಿಂದ ದ್ವಿತೀಯ ಪಿಯುಸಿ ವರೆಗಿನ ಭೌತಿಕ ತರಗತಿ ಗಳು ಸೋಮವಾರ ಆರಂಭಗೊಂಡ ಹಿನ್ನೆಲೆ ಯಲ್ಲಿ ಬರೋಬ್ಬರಿ ವರ್ಷದ ನಂತರ ಶಾಲೆ ಹಾಗೂ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಕಲವರ ಕೇಳಿ ಬಂತು.
ವಿದ್ಯಾಗಮ ಹಾಗೂ ಆನ್ಲೈನ್ ತರ ಗತಿಗಳಲ್ಲಿಯೇ ಅಭ್ಯಾಸ ನಿರತರಾಗಿದ್ದ ವಿದ್ಯಾ ರ್ಥಿಗಳು ಹಾಗೂ ಶಿಕ್ಷಕರು ಹುರುಪಿನಿಂದಲೇ ಶಾಲೆಗಳಿಗೆ ಆಗಮಿಸಿ ದ್ದರು. ಹಲವೆಡೆ ಮಕ್ಕಳಿಗೆ ಸಿಹಿ ನೀಡಿ ಸ್ವಾಗತಿಸಲಾಯಿತು. ಶಾಲೆ ಯಾವಾಗ ಆರಂಭವಾಗುವುದೋ ಎಂದು ಕಾಯುತ್ತಿದ್ದ ಪೋಷಕರು ನಿಟ್ಟುಸಿರು ಬಿಟ್ಟು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿದ್ದರು.
ಇತ್ತ ಶಾಲೆಗಳಲ್ಲಿ ಕೋವಿಡ್ ಮಾರ್ಗ ಸೂಚಿಗಳನ್ನು ಪಾಲಿಸಿಯೇ ತರಗತಿಗಳನ್ನು ಆರಂಭಿಸಲಾಯಿತು. ಶಾಲೆ ಗಳ ಕೊಠಡಿಗಳು, ಗ್ರಂಥಾಲಯ ಹಾಗೂ ಆವರಣದಲ್ಲಿ ಸ್ಯಾನಿಟೈಸರ್ ಮಾಡಲಾಗಿತ್ತು.
ಮಕ್ಕಳನ್ನು ಥರ್ಮಲ್ ಸ್ಕ್ಯಾನಿಂಗ್ ಮಾಡಿ ತರಗತಿಗಳ ಒಳಗೆ ಕಳುಹಿಸಲಾ ಯಿತು. ಪಾಲಕರ ಅನುಮತಿ ಪತ್ರದೊಂದಿಗೆ ವಿದ್ಯಾರ್ಥಿಗಳು ಆಗಮಿಸಿದ್ದರು. ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1.30ರ ವರೆಗೆ ಮಾತ್ರ ತರಗತಿಗಳಿಗೆ ಅವಕಾಶವಿದ್ದರಿಂದ ಕುಡಿಯುವ ನೀರನ್ನು ಮಾತ್ರ ವಿದ್ಯಾರ್ಥಿಗಳು ತಂದಿದ್ದರು. ಪ್ರತಿ ಕೊಠಡಿಯಲ್ಲಿ 20 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು.
ಜಿಲ್ಲೆಯಲ್ಲಿ ಸುಮಾರು 4 ಸಾವಿರ ಶಿಕ್ಷಕರುಗಳು ಪಾಠ ಮಾಡಲಿದ್ದು, ಶೇ.90 ರಷ್ಟು ಶಿಕ್ಷಕರು ಪ್ರಥಮ ಡೋಸ್ ಕೋವಿಡ್ ಲಸಿಕೆ ಪಡೆದಿದ್ದಾರೆ. ಶೇ.75ರಷ್ಟು ಶಿಕ್ಷಕರು ಎರಡೂ ಡೋಸ್ ಲಸಿಕೆ ಪಡೆದಿದ್ದಾರೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಭೌತಿಕ ತರಗತಿಗಳಿಗೆ ಹಾಜರಾಗದ ವಿದ್ಯಾರ್ಥಿಗಳಿಗೆ ಪರ್ಯಾಯವಾಗಿ ಆನ್ಲೈನ್ ಪಾಠ ಕೇಳುವ ಅವಕಾಶವನ್ನು ಒದಗಿಸಲಾಗಿದೆ.
ನಿಟ್ಟುವಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಅದ್ಧೂರಿಯಾಗಿ ನೆರವೇರಿತು. ಅತಿ ಉತ್ಸಾಹದಿಂದ ಮಕ್ಕಳು ಶಾಲೆಗೆ ಆಗಮಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯರು ಮತ್ತು ಸಿಬ್ಬಂದಿ ವರ್ಗದವರು ಸರ್ಕಾರದ ಮಾರ್ಗಸೂಚಿಯಂತೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಿದ್ದರು. ಮಕ್ಕಳನ್ನು ಬ್ಯಾಂಡ್ ವಾದನದೊಂದಿಗೆ ಸ್ವಾಗತಿಸಲಾಯಿತು.
ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ ಹಾಗೂ ಡಯಟ್ ಪ್ರಾಚಾರ್ಯ ಲಿಂಗರಾಜ್ ಶಾಲೆಗೆ ಆಗಮಿಸಿ ಪರಿಶೀಲಿಸಿದರು. ಸ್ಥಳೀಯ ಜನಪ್ರತಿನಿಧಿಗಳಾದ ಶ್ರೀಮತಿ ಉಮಾ ಪ್ರಕಾಶ್ ಹಾಗೂ ಹುಲ್ಲುಮನೆ ಗಣೇಶ್ ಸಹ ಶಾಲೆಗೆ ಆಗಮಿಸಿ ಸಿಹಿ ನೀಡುವ ಮೂಲಕ ಮಕ್ಕಳನ್ನು ಸ್ವಾಗತಿಸಿದರು. ಶೇ.62ರಷ್ಟು ಮಕ್ಕಳು ತರಗತಿಗಳಿಗೆ ಹಾಜರಾಗಿದ್ದರು.
ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಶಾಲೆಗೆ ಆಗಮಿಸಿದ್ದನ್ನು ಕಂಡ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಂತಸ ವ್ಯಕ್ತಪಡಿಸಿದರು.
ಹುಲ್ಲುಮನೆ ಗಣೇಶ್ ಅವರು ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕಗಳನ್ನು ನೀಡಿದರು. ಶಾಲೆಯ ಗಣಿತ ಶಿಕ್ಷಕ ಜಯಪ್ಪನವರು ತಾವೇ ತಯಾರಿಸಿದ ಮೊಬೈಲ್ ಸ್ಟ್ಯಾಂಡ್ ಗಳನ್ನು ಮಕ್ಕಳಿಗೆ ಉಪ ನಿರ್ದೇಶಕರಿಂದ ಕೊಡಿಸಿದರು. ಉಮಾ ಪ್ರಕಾಶ್ ಮಕ್ಕಳಿಗೆ ಶಬ್ಧಕೋಶ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಶಿಕ್ಷಕ ಎಂ. ಸುರೇಶ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ. ಶಿವರುದ್ರಪ್ಪ, ರಾಜು, ಕೆ.ಚಂದ್ರಪ್ಪ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಚಂದ್ರಪ್ಪ ಹಾಗೂ ಸಿಬ್ಬಂದಿ ವರ್ಗದವರು, ಪೋಷಕರು ಇತರರು ಭಾಗವಹಿಸಿದ್ದರು. ಶಿಕ್ಷಕ ಕೆ.ಟಿ. ಜಯಪ್ಪ ಕಾರ್ಯಕ್ರಮ ಸಂಘಟಿಸಿ, ನಿರೂಪಿಸಿದರು