ನೆಮ್ಮದಿ ಜೀವನಕ್ಕೆ ಕಾರಣರಾದ ಪೌರಕಾರ್ಮಿಕರು ಪ್ರಾತಃಸ್ಮರಣೀಯರು

ಪಂಚಮಸಾಲಿ ಕಾರ್ಯಕ್ರಮದಲ್ಲಿ ಮಾಜಿ ಉಪ ಮಹಾಪೌರ ಬಿ. ಲೋಕೇಶ್

ದಾವಣಗೆರೆ, ಆ. 23- ಕೊರೊನಾ ಮಹಾಮಾರಿಯನ್ನು ತಡೆಗಟ್ಟುವಲ್ಲಿ ವೈದ್ಯರು, ದಾದಿಯರು, ಆಸ್ಪತ್ರೆ ಸಿಬ್ಬಂದಿ, ಪೊಲೀಸರು ಸೇರಿದಂತೆ, ಕೊರೊನಾ ವಾರಿಯರ್ಸ್ ಸೇವೆ ಅಮೋಘವಾದುದು ಎಂದು ಹರಿಹರ ಪಂಚಮಸಾಲಿ ಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ ಶ್ಲ್ಯಾಘಿಸಿದರು.

ಹರ ಸೇವಾ ಸಂಸ್ಥೆ, ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ನಗರ ಘಟಕ, ನಗರ ಯುವ ಘಟಕ ಮತ್ತು ನಗರ ಮಹಿಳಾ ಘಟಕಗಳ ಸಂಯುಕ್ತಾಶ್ರಯದಲ್ಲಿ ನಗರದ ಡಾ. ಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ  ಹಿರೇಮಠದ ಸಭಾಂಗಣದಲ್ಲಿ ಇಂದು ಹಮ್ಮಿಕೊಂಡಿದ್ದ ಕೊರೊನಾ ವಾರಿಯರ್ಸ್ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಮಗೆ ಸೇವೆ ಮಾಡಲು ಸಾಧ್ಯವಾಗದಿದ್ದರೂ,  ಸಮಾಜದಲ್ಲಿ ನಿಸ್ವಾರ್ಥ ಸೇವೆ ಮಾಡುತ್ತಿರುವ ಸಾಧಕರನ್ನು ಗುರುತಿಸುತ್ತಿರುವುದು ಕೂಡ ಪುಣ್ಯದ ಕೆಲಸವಾಗಿದೆ. ಪಂಚಮಸಾಲಿ ಸಮಾಜ ಪ್ರತಿ ವರ್ಷ ಸಾಮೂಹಿಕ ವಿವಾಹ ಮಾಡುವ ಮೂಲಕ ಸಮಾಜದ ಬಡ ಜನರಿಗೆ ನೆರವಾಗುತ್ತಾ ಬಂದಿದೆ. ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಸಾಮೂಹಿಕ ವಿವಾಹಗಳನ್ನು ಏರ್ಪಡಿಸಲು ಸಾಧ್ಯವಾಗಿಲ್ಲ. ಇದುವರೆಗೂ 1080 ಜೋಡಿಗಳು ವಿವಾಹ ಮಹೋತ್ಸವದಲ್ಲಿ ದಾಂಪತ್ಯಕ್ಕೆ ಕಾಲಿರಿಸಿದ್ದಾರೆ. ಅವರಿಗೆ ಸರ್ಕಾರದಿಂದ ಒಟ್ಟು 1 ಕೋಟಿ ಸಹಾಯ ಧನವನ್ನು ಮಂಜೂರು ಮಾಡಿಸಿ ಕೊಡಲಾಗಿದೆ ಎಂದು ಮಾಹಿತಿ ನೀಡಿದರು.

ಪಾಲಿಕೆ ಮಾಜಿ ಉಪ ಮಹಾಪೌರರಾದ ಬಿ. ಲೋಕೇಶ್ ಮಾತನಾಡಿ, ಕೊರೊನಾ ಮಹಾಮಾರಿಯನ್ನು ತೊಲಗಿಸಲು ಸೇನಾನಿಗಳಂತೆ, ಜೀವದ ಹಂಗು ತೊರೆದು ರೋಗಿಗಳನ್ನು ಆರೈಕೆ ಮಾಡಿದ ವೈದ್ಯರು, ದಾದಿಯರು, ಸಿಬ್ಬಂದಿ, ಪೊಲೀಸರು, ಪೌರ ಕಾರ್ಮಿಕರ ಸೇವೆಯನ್ನು ಯಾರೂ ಮರೆಯುವಂತಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಗರ ವಾಸಿಗಳು ನೆಮ್ಮದಿ ಜೀವನ ನಡೆಸಲು ಪೌರಕಾರ್ಮಿಕರ ಪಾತ್ರ ಬಹುಮುಖ್ಯ. ಆದ್ದರಿಂದ ಇವರನ್ನು ಪ್ರಾತ:ಸ್ಮರಣೀಯರೆಂದು ಕರೆಯುವುದು ಸೂಕ್ತ ಎಂದು ಅವರು ಅಭಿಪ್ರಾಯಪಟ್ಟರು.

ಡಾ. ಎ.ಎಂ. ಶಿವಕುಮಾರ್ ಮಾತನಾಡಿ, ರಕ್ತದಾನ ಮಹಾದಾನವಾಗಿದ್ದು, ಆರೋಗ್ಯವಂತ ಯುವ ಜನರು ರಕ್ತ ಕೊಡುವುದರಿಂದ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ರೋಗಿಗಳ ಜೀವ ಉಳಿಸಲು ಸಹಕಾರಿಯಾಗುತ್ತದೆ ಎಂದರು.

ಡಾ.ಎ.ಕೆ. ರುದ್ರಮುನಿ ಮಾತನಾಡಿದರು. ಜ್ಯೋತಿ ಗ್ಯಾಸ್ ಏಜೆನ್ಸೀಸ್ ಮಾಲೀಕರಾದ ಅಂದನೂರು ಆನಂದ್, ಸಮಾಜದ ಮುಖಂಡರಾದ ಕಂಚಿಕೆರೆ ಮಹೇಶ್ ಮತ್ತಿತರರು ಉಪಸ್ಥಿತರಿದ್ದರು. ನಗರ ಘಟಕದ ಅಧ್ಯಕ್ಷ ಶಿವಶಂಕರ್ ಕೈದಾಳೆ ಅಧ್ಯಕ್ಷತೆ ವಹಿಸಿದ್ದರು.

ಮಮತಾ ಶ್ರೀಧರ್, ಕೊಟ್ರಮ್ಮ ಮುರುಗೇಶ್ ಪ್ರಾರ್ಥಿಸಿದರು. ನಗರ ಯುವ ಘಟಕದ ಅಧ್ಯಕ್ಷ ಬಾದಾಮಿ ಜಯ್ಯಣ್ಣ ಸ್ವಾಗತಿಸಿದರು. ಶಿವಕುಮಾರ್ ಹೊಸಕೆರೆ ನಿರೂಪಿಸಿದರು. ನಗರ ಮಹಿಳಾ ಘಟಕದ ಅಧ್ಯಕ್ಷರಾದ ವಾಣಿ ಗುರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಷ್ಮಾ ಪಾಟೀಲ್ ವಂದಿಸಿದರು.

error: Content is protected !!