ದಾವಣಗೆರೆ, ಆ.20- ಶಾಲೆಯಲ್ಲಿ ಸಿಗುವ ಶಿಕ್ಷಣ ಅಂಕಕ್ಕೆ ಸೀಮಿತವಾದರೆ, ರಂಗಭೂಮಿಯು ಬದುಕಿನ ಶಿಕ್ಷಣ ನೀಡುತ್ತದೆ. ರಂಗಭೂಮಿ ದೊಡ್ಡ ಶಕ್ತಿ. ಮನಸ್ಸಿನ ವಿಕಾಸಕ್ಕೆ ರಂಗಭೂಮಿ ಅಗತ್ಯ ಎಂದು ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ವಿಶ್ಲೇಷಿಸಿದರು.
ಶ್ರೀ ಗುರು ವಾದ್ಯವೃಂದವು ನಗರದ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ನಿನ್ನೆ ಹಮ್ಮಿಕೊಂಡಿದ್ದ `ಸಾಧ್ವಿ ಸರಸ್ವತಿ’ ನಾಟಕ ಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಚಿಂದೋಡಿ ಮನೆತನವು ರಂಗಭೂಮಿಗೆ ಸೀಮಿತವಾದ ಮನೆತನ. ಎರಡು ವರ್ಷ ಕಳೆದರೆ ಈ ಮನೆತನದ ರಂಗಭೂಮಿ ನಂಟಿಗೆ 100 ವರ್ಷ ತುಂಬಲಿದೆ. ರಂಗಭೂಮಿಗೆ ಮತ್ತೆ ವೈಭವದ ಕಾಲ ಬರುತ್ತದೆ ಎಂಬ ಆಶಾಭಾವನೆ ಇಟ್ಟುಕೊಂಡು ಕೆಲಸ ಮಾಡಿ ಎಂದು ಶ್ರೀಗಳು ಸಲಹೆ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಎಸ್.ಎ. ರವೀಂದ್ರನಾಥ್, ಹಿಂದೆ ನಾಟಕಗಳು ಅಂದರೆ ಸಭಾಂಗಣ ತುಂಬಿ ತುಳುಕುತ್ತಿತ್ತು. ಟಿ.ವಿ. ಬಂದ ಮೇಲೆ ಧಾರಾವಾಹಿಗಳು ಆರಂಭವಾಗಿ ನಾಟಕ ನೋಡುವವರಿಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಮಾಜಿ ಸಚೇತಕ ಡಾ. ಎ.ಎಸ್. ಶಿವಯೋಗಿಸ್ವಾಮಿ ಒಂದು ಕಾಲದಲ್ಲಿ ನಾಟಕ ಕಂಪನಿಗಳು ಎಲ್ಲೇ ನಷ್ಟವಾದರೂ ದಾವಣಗೆರೆಗೆ ಬಂದು ಲಾಭ ಮಾಡಿಕೊಂಡು ಹೋಗುತ್ತಿದ್ದರು. ಈಗ ಬದಲಾದ ಸನ್ನಿವೇಶದಲ್ಲಿ ನಾಟಕಕ್ಕೆ ಮಾತ್ರವಲ್ಲ, ಸಿನಿಮಾಕ್ಕೂ ಪ್ರೇಕ್ಷಕರಿಲ್ಲದಂತಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಡಾ. ಎಚ್.ಎಸ್. ಮಂಜುನಾಥ್ ಕುರ್ಕಿ ಮಾತನಾಡಿ ವಿಜ್ಞಾನ, ತಂತ್ರಜ್ಞಾನ ನಿರೀಕ್ಷೆಗೂ ಮಿರಿ ಬೆಳೆಯುತ್ತಿದೆ. ಇದರ ಪರಿಣಾಮ ಸಾಂಸ್ಕೃತಿಕ ಜಗತ್ತು ಕಣ್ಮರೆಯಾಗುತ್ತಿದೆ. ರಂಗಭೂಮಿ ತನ್ನ ಸತ್ವ ಕಳೆದುಕೊಂಡಿಲ್ಲ. ಆದರೆ ಜನಾಕರ್ಷಣೆಯನ್ನು ಕಳೆದುಕೊಂಡಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ಖಜಾಂಚಿಯೂ ಆದ ವಸ್ತ್ರ ವಿನ್ಯಾಸಕಿ ಸುಜಾತ ಪ್ರಶಾಂತ್ ಕುಮಾರ್ ದಕ್ಷಿಣ ಆಫ್ರಿಕಾಕ್ಕೆ ತೆರಳುವ ಕಾರಣ ಅವರನ್ನು ಸನ್ಮಾನಿಸಲಾಯಿತು.
ಶ್ರೀ ಸೋಮೇಶ್ವರ ವಿದ್ಯಾಲಯದ ಕೆ.ಎಂ. ಸುರೇಶ್ ಉಪಸ್ಥಿತರಿದ್ದರು. ಶ್ರೀ ಗುರು ವಾದ್ಯ ವೃಂದದ ಅಧ್ಯಕ್ಷ ಚಿಂದೋಡಿ ಶಂಭುಲಿಂಗಪ್ಪ ಕಾರ್ಯಕ್ರಮ ನಿರೂಪಿಸಿದರು. ಬಳಿಕ ತ್ರಿವೇಣಿ ಮತ್ತು ತಂಡದವರಿಂದ `ಸಾಧ್ವಿ ಸರಸ್ವತಿ’ ನಾಟಕ ಪ್ರದರ್ಶನ ನಡೆಯಿತು.