ಸ್ವಂತ ಖರ್ಚಿನಲ್ಲಿ ಹಿಟಾಚಿ ಮೂಲಕ ಜಲಸಸ್ಯ ರಾಶಿ ತೆರವುಗೊಳಿಸಿದ ಶಾಸಕ ರಾಮಪ್ಪ ಅವರನ್ನು ಅಭಿನಂದಿಸಿದ ರೈತರು
ಮಲೇಬೆನ್ನೂರು, ನ.22- ದೇವರಬೆಳಕೆರೆ ಪಿಕಪ್ ಜಲಾಶಯದಲ್ಲಿ ಗೋಡ್ಬಳೆ ಗೇಟ್ ಬಳಿ ಜಮಾವಣೆಗೊಂಡಿದ್ದ ಜಲಸಸ್ಯ ರಾಶಿಯನ್ನು ಶಾಸಕ ಎಸ್. ರಾಮಪ್ಪ ಅವರು ಸ್ವಂತ ಖರ್ಚಿನಲ್ಲಿ ಹಿಟಾಚಿ ಮೂಲಕ ತೆರವುಗೊಳಿಸುವ ಕಾಮಗಾರಿಗೆ ಸೋಮವಾರ ಚಾಲನೆ ನೀಡಿದರು.
ಜಲಾಶಯದಲ್ಲಿ ನೀರಿನ ಸಂಗ್ರಹವನ್ನು ಹೆಚ್ಚು ಮಾಡಲು ಈ ಹಿಂದೆ ಗೋಡ್ಬಳೆ ಗೇಟನ್ನು ಕಟ್ಟಲಾಗಿತ್ತು. ಆದರೆ ಆ ಗೇಟ್ ಸ್ವಯಂ ಚಾಲಿತವಾಗಿ ಓಪನ್ ಆಗದ ಕಾರಣ ನೀರಿನಲ್ಲಿ ಬೆಳೆಯುವ ಸಸ್ಯರಾಶಿ ಹೆಚ್ಚಾಗಿ, ಜಲಾಶಯದಿಂದ ಹೆಚ್ಚುವರಿ ನೀರು ಸಲೀಸಾಗಿ ಹೊರಹೋಗದ ಕಾರಣ ಹಿನ್ನೀರಿನಲ್ಲಿ ಸಂಕ್ಲೀಪುರ ಸೇರಿದಂತೆ ಅನೇಕ ಗ್ರಾಮಗಳ ನೂರಾರು ಎಕರೆ ಬೆಳೆ ಜಲಾವೃತಗೊಂಡಿದೆ.
ಅಲ್ಲದೆ ಹಿನ್ನೀರಿನ ಒತ್ತಡದಿಂದಾಗಿ ಜಲಾಶಯದ ಬಲಭಾಗದ ಕಲ್ಲಿನ ತಡೆಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದಾಗ, ಶಾಸಕ ರಾಮಪ್ಪ ಅವರು ಭಾನುವಳ್ಳಿ, ಸಂಕ್ಲೀಪುರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನೀರಾವರಿ ಇಲಾಖೆಯ ಎಇಇ ಸಂತೋಷ್ ಅವರಿಗೆ ತುರ್ತು ಕ್ರಮ ವಹಿಸುವಂತೆ ಸೂಚಿಸಿದ್ದರು.
ಆದರೆ ಸಂತೋಷ್ ಅವರು ಸಸ್ಯಜಲ ರಾಶಿ ತೆರವುಗೊಳಿಸಲು ಮತ್ತು ಬಿರುಕು ಬಿಟ್ಟಿರುವ ತಡೆಗೋಡೆ ದುರಸ್ತಿಗೆ ಅಂದಾಜು 5 ಲಕ್ಷ ರೂ. ಯೋಜನೆ ಸಿದ್ಧಪಡಿಸಿ ಮೇಲಾಧಿಕಾರಿಗಳಿಗೆ ಅನುದಾನ ನೀಡುವಂತೆ ಕಳುಹಿಸಲಾಗಿದೆ ಎಂಬ ಮಾಹಿತಿ ನೀಡಿದರು.
ಆ ಅನುದಾನ ಮಂಜೂರಾಗಿ ಬಂದು, ನೀವು ಕೆಲಸ ಮಾಡುವ ವೇಳೆಗೆ ನಮ್ಮ ಎಲ್ಲಾ ಬೆಳೆ ಹಾಳಾಗಿ ಹೋಗುತ್ತದೆ ಎಂದು ರೈತರು ಬೇಸರ ವ್ಯಕ್ತಪಡಿಸಿದರು.
ಆಗ ಶಾಸಕ ರಾಮಪ್ಪ ಅವರು ನಾನೇ 5 ಲಕ್ಷ ರೂ. ಹಣ ಕೊಡುತ್ತೇನೆ. ಸೋಮವಾರದಿಂದ ಕೆಲಸ ಪ್ರಾರಂಭಿಸಿ ಎಂದು ಅಲ್ಲಿಂದಲೇ ಫೋನ್ ಮಾಡಿ ಹಿಟಾಚಿ ಮಾಲೀಕರಿಗೆ ತಿಳಿಸಿದರು.
ಆ ಕೊಟ್ಟ ಮಾತಿನಂತೆ ಶಾಸಕ ರಾಮಪ್ಪ ಅವರು ಸೋಮವಾರ ಬೆಳಿಗ್ಗೆ ಹಿಟಾಚಿ ಮೂಲಕ ಗೋಡ್ಬಳೆ ಗೇಟ್ ಬಳಿ ಸಂಗ್ರಹವಾಗಿದ್ದ ಸಸ್ಯರಾಶಿಯನ್ನು ನೀರಿನಲ್ಲಿ ಹೊರಗೆ ಹೋಗುವಂತೆ ಕೆಲಸ ಮಾಡಿಸುತ್ತಿದ್ದಾರೆಂದು ಸ್ಥಳದಲ್ಲಿದ್ದ ರೈತರು ಸಂತಸ ವ್ಯಕ್ತಪಡಿಸಿದರು.
ಶಾಸಕ ರಾಮಪ್ಪ ಅವರೂ ಸೋಮವಾರ ಸಾಯಂಕಾಲ ಜಲಾಶಯಕ್ಕೆ ಭೇಟಿ ನೀಡಿ, ಹಿಟಾಚಿ ಕೆಲಸವನ್ನು ವೀಕ್ಷಿಸಿದರು. ಈ ವೇಳೆ ಸಂಕ್ಲೀಪುರ, ದೇವರಬೆಳಕೆರೆ, ಬೂದಿಹಾಳ್ ಮತ್ತಿತರೆ ಗ್ರಾಮಗಳ ರೈತರು ಶಾಸಕರನ್ನು ಅಭಿನಂದಿಸಿ, ಬಿರುಕು ಬಿಟ್ಟಿರುವ ತಡೆಗೋಡೆ ದುರಸ್ತಿ ಕೆಲಸವನ್ನು ಕೂಡಲೇ ಮಾಡಿಸಿ, ಅನಾಹುತ ತಪ್ಪಿಸಿ ಎಂದು ಶಾಸಕರಲ್ಲಿ ಮನವಿ ಮಾಡಿದರು.