ಕೃಷ್ಣಪ್ಪನವರ ಮನೆಯನ್ನು ಸ್ಮಾರಕವಾಗಿಸಲು ಒತ್ತಾಯ

ವಿಧಾನಸೌಧದ ಬಳಿ ಪ್ರೊ. ಬಿ. ಕೃಷ್ಣಪ್ಪ ಪ್ರತಿಮೆ ಸ್ಥಾಪನೆಗೆ ಬಿಎಸ್‌ಪಿ ಆಗ್ರಹ

ಹರಿಹರ, ನ. 22 – ದಲಿತ ಚಳವಳಿಯ ಮಹಾನ್ ಚೇತನ ಪ್ರೊ. ಬಿ. ಕೃಷ್ಣಪ್ಪನವರ ಹಾನಿಗೀಡಾಗಿರುವ ಮನೆಯನ್ನು ಸ್ಮಾರಕವಾಗಿ ನಿರ್ಮಾಣ ಮಾಡಬೇಕು ಮತ್ತು ಅವರ ಸಹೋದರರ ಮಕ್ಕಳಿಗೆ ವಾಸಕ್ಕೆ ಮನೆ ನಿರ್ಮಿಸಲು ಸರ್ಕಾರ ಈ ಕೂಡಲೇ 5 ಕೋಟಿ ರೂ. ಬಿಡುಗಡೆ ಮಾಡಬೇಕು ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಉಸ್ತುವಾರಿ ಮಾರಸಂದ್ರ ಮುನಿಯಪ್ಪ ಹೇಳಿದರು.

ನಗರದ ರಚನಾ ಕ್ರೀಡಾ ಟ್ರಸ್ಟ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಬಿಎಸ್‌ಪಿ ಪಕ್ಷದ ವತಿಯಿಂದ ಮನೆಯ ತಾತ್ಕಾಲಿಕ ದುರಸ್ತಿಗೆ 5 ಲಕ್ಷ ರೂಪಾಯಿ ಒಂದು ವಾರದಲ್ಲಿ ನೀಡಲಾಗುವುದು ಎಂದು ಹೇಳಿದರು.

ಪ್ರೊ. ಬಿ. ಕೃಷ್ಣಪ್ಪ ಅವರ ಪ್ರತಿಮೆಯನ್ನು ಬೆಂಗಳೂರಿನ ವಿಧಾನಸೌಧದ ಬಳಿ ನಿರ್ಮಾಣ ಮಾಡಲು ಸರ್ಕಾರ ಚಿಂತನೆ ನಡೆಸಬೇಕು ಎಂದವರು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.

ಕೇಂದ್ರ ಸರ್ಕಾರ ಕೃಷಿ ಕಾಯ್ದೆ ವಾಪಸ್‌ ಪಡೆದಿದ್ದನ್ನು ಸ್ವಾಗತಿಸುತ್ತೇವೆ. ಇದು ರೈತರ ಹೋರಾಟಕ್ಕೆ ಸಿಕ್ಕ ಫಲವಾಗಿದೆ. ಆದರೆ ಇದನ್ನು ವರ್ಷದ ಕೆಳಗೆ ಮಾಡಿದ್ದರೆ ಸುಮಾರು 670 ರೈತರು ಮರಣವನ್ನು ಹೊಂದುವುದನ್ನು ತಪ್ಪಿಸಬಹುದಿತ್ತು. ಮೃತರ ಕುಟುಂಬಕ್ಕೆ ಆರ್ಥಿಕ ನೆರವಿನ ಜೊತೆಗೆ ಸರ್ಕಾರಿ ಉದ್ಯೋಗ ನೀಡಬೇಕು ಮತ್ತು ರೈತರ ಮೇಲಿನ ದಬ್ಬಾಳಿಕೆ ಕೇಸ್ ವಾಪಸ್‌ ಪಡೆಯಬೇಕು ಎಂದವರು ಆಗ್ರಹಿಸಿದರು.

ರಾಜ್ಯದ ಸಮಾಜ ಕಲ್ಯಾಣ ಇಲಾಖೆಯಲ್ಲಿರುವ 30 ಸಾವಿರ ಕೋಟಿ ರೂ. ಹಣ ಬಡವರ ಏಳಿಗೆಗಾಗಿ ಬಳಕೆ ಮಾಡುವುದನ್ನು ಬಿಟ್ಟು ಉಳ್ಳವರ ಪಾಲಾಗಿ ನೆಪ ಮಾತ್ರಕ್ಕೆ ಎಸ್ಸಿ – ಎಸ್ಟಿ ಎಂಬ ಹೆಸರನ್ನು ಬಳಕೆ ಮಾಡಲಾಗುತ್ತದೆ ಎಂದವರು ಇದೇ ಸಂದರ್ಭದಲ್ಲಿ ಆಕ್ಷೇಪಿಸಿದರು.

ಈ ಸಂದರ್ಭದಲ್ಲಿ ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ಹೆಚ್. ಮಲ್ಲೇಶಪ್ಪ, ಜಿಲ್ಲಾ ಅಧ್ಯಕ್ಷ ಡಿ. ಹನುಮಂತಪ್ಪ, ಮಾರಸಂದ್ರ ಸಂದೀಪ್, ಯಶೋಧ ಪ್ರಕಾಶ್, ರಂಗನಾಥ, ಹೊನ್ನಳ್ಳಿ ರಾಮಪ್ಪ, ಕುಂಕುವ ಕೃಷ್ಣಪ್ಪ,  ಪ್ರೊಫೆಸರ್ ಬಿ. ಕೃಷ್ಣಪ್ಪನವರ ವಂಶಸ್ಥರಾದ ಬಸವರಾಜ್, ಸದಾನಂದ, ಹರಿಹರ ಬಿಎಸ್‌ಪಿ ಅಧ್ಯಕ್ಷ ಕೇಶವ ಎಸ್,  ಮಹಮ್ಮದ್ ಖಾಲಿದ್, ಮಂಜುನಾಥ್, ಶಬರೀಶ್ ಇತರರು ಹಾಜರಿದ್ದರು.

error: Content is protected !!