ತಾಲ್ಲೂಕಿಗೊಂದು ಕನ್ನಡ ಭವನ ನಿರ್ಮಿಸಲು ಸರ್ಕಾರಕ್ಕೆ ಒತ್ತಡ

ಕಸಾಪ ನೂತನ ಜಿಲ್ಲಾಧ್ಯಕ್ಷ ವಾಮದೇವಪ್ಪ

ಜಗಳೂರು, ನ.22- ಪ್ರತಿ ತಾಲ್ಲೂಕಿಗೊಂದು 50 ಲಕ್ಷ ರೂ.ವೆಚ್ಚದ ಕನ್ನಡ ಭವನ ನಿರ್ಮಿಸಲು ರಾಜ್ಯ ಸಮಿತಿಯ ಜೊತೆಗೂಡಿ ಸರ್ಕಾರದ ಮೇಲೆ ಒತ್ತಡ ತರಲಾಗುವುದು  ಎಂದು ನೂತನ ಕಸಾಪ ಜಿಲ್ಲಾಧ್ಯಕ್ಷ ವಾಮದೇವಪ್ಪ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ವಿವಿಧ ಸಂಘ, ಸಂಸ್ಥೆಗಳಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಪಕ್ಷಾತೀತ, ಜಾತ್ಯತೀತವಾಗಿ ಕಸಾಪ ಮತದಾರರು  ಬೆಂಬಲಿಸಿದ ಪರಿಣಾಮ ರಾಜ್ಯದಲ್ಲಿಯೇ ಅತಿಹೆಚ್ಚು ಅಂತರದ ಮತ ಗಳಿಸಿ ಜಯ ಗಳಿಸಿರುವುದು ನನಗೆ ಸಂತಸ ತಂದಿದೆ. ಬರದ ತಾಲ್ಲೂಕಿನಲ್ಲಿ ಕನ್ನಡ ನಾಡು, ನುಡಿ ವಿಜೃಂಭಿಸಬೇಕಿದೆ. ಮುಂದಿನ ದಿನಗಳಲ್ಲಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಶೀಘ್ರದಲ್ಲಿ ಅದ್ಧೂರಿಯಾಗಿ ತಾಲ್ಲೂಕು ಸಾಹಿತ್ಯ ಸಮ್ಮೇಳ‌ನ ನಡೆಸಬೇಕು. ಕನ್ನಡಪರ ಸಂಘ, ಸಂಸ್ಥೆಗಳು ಸಹಕರಿಸಬೇಕು ಎಂದರು.

ತಾಲ್ಲೂಕಿನ  ಪ್ರತಿ ಗ್ರಾಮದಲ್ಲೂ ಕನ್ನಡ ಧ್ವಜ ಕಂಬ ನೆಡುವ ಗುರಿ ಹೊಂದಲಾಗಿದೆ. ಪ್ರತಿ ಗ್ರಾಮದಲ್ಲೂ ಕನ್ನಡದ ಕಂಪು ಮೂಡಿಸುವ ಜವಾಬ್ದಾರಿ ನಮ್ಮದಾಗಬೇಕಿದೆ. ಎಲ್ಲಾ ಕನ್ನಡ ಮನಸ್ಸುಗಳು,  ಕನ್ನಡಪರ ಸಂಘಟನೆಗಳು ಕೈಜೋಡಿಸಬೇಕು ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ ತಾಯಿ ಬೇರು ಇದ್ದಂತೆ. ಇದಕ್ಕೆ ಗೋಷ್ಠಿಗಳು, ಶರಣ ಸಾಹಿತ್ಯ ಪರಿಷತ್ತು, ಬಯಲು ಸಾಹಿತ್ಯ ವೇದಿಕೆ, ಚುಟುಕು ಸಾಹಿತ್ಯ ಪರಿಷತ್ತು ಸೇರಿದಂತೆ ಎಲ್ಲಾ ಕನ್ನಡಪರ ಸಂಘ-ಸಂಸ್ಥೆಗಳು ಕವಲು ಬೇರುಗಳಾಗಿ ಪೂರಕವಾದರೆ ಯಶಸ್ಸು ಸಾಧ್ಯ ಎಂದರು.

ಕಸಾಪ ಮಾಜಿ ಜಿಲ್ಲಾಧ್ಯಕ್ಷ ಉಜ್ಜಿನಪ್ಪ ಮಾತನಾಡಿ,  ಚುನಾವಣೆಯಲ್ಲಿ 14 ಬೂತ್ ಗಳಲ್ಲಿ ಮುನ್ನಡೆಯಾಗಿ ರಾಜ್ಯದಲ್ಲಿಯೇ ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿರುವುದು ಪ್ರಶಂಸನೀಯ ಎಂದರು.

ಇದೇ ವೇಳೆ ಕಾಂಗ್ರೆಸ್ ಮುಖಂಡ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಅವರ ಬಳಗದವರು  ಜಿಲ್ಲಾಧ್ಯಕ್ಷರನ್ನು ಸನ್ಮಾನಿಸಿ, ಗೌರವಿಸಿದರು.

ಈ ಸಂದರ್ಭದಲ್ಲಿ ನಿವೃತ್ತ ಪ್ರಾಂಶುಪಾಲ, ಸಾಹಿತಿ ಡಿ.ಸಿ. ಮಲ್ಲಿಕಾರ್ಜುನ್, ಕಸಾಪ ತಾಲ್ಲೂಕು ನಿವೃತ್ತ ಅಧ್ಯಕ್ಷ ಹಜರತ್ ಅಲಿ, ಹಿರಿಯ ಸಾಹಿತಿ  ಎನ್.ಟಿ. ಎರ್ರಿಸ್ವಾಮಿ, ಎಂ.ಎಸ್‌. ಬಸವೇಶ್, ಡಿ.ಸಿ. ಮಲ್ಲಿಕಾರ್ಜುನ್, ಶಿಕ್ಷಕಿಯರಾದ ಗೀತಾ, ಸುಜಾತ ಸಿ., ನಿವೃತ್ತ ಶಿಕ್ಷಕ ದೇವರಾಜ್, ಮಂಜುನಾಥ್ ರೆಡ್ಡಿ, ಸಿ.ಲಕ್ಷ್ಮಣ್, ಶಿಕ್ಷಕ ಚಂದ್ರಪ್ಪ, ಸತೀಶ್, ಪತ್ರಕರ್ತರಾದ ಬಿ.ಪಿ. ಸುಭಾನ್, ರವಿಕುಮಾರ್, ಮಾದಿಹಳ್ಳಿ ಮಂಜುನಾಥ್, ವಾಸಿಂ, ಜಿಲ್ಲಾ ಸಮಿತಿಯ ಪದಾಧಿಕಾರಿಗಳಾದ ಅಂಜಿನಪ್ಪ‌, ಷಡಕಪ್ಪ, ಕರವೇ ಸಂಘಟನೆಯ ಮಹಾಂತೇಶ್, ಹಫೀಜ್, ರಕೀಬ್, ತಿಪ್ಪೇಸ್ವಾಮಿ ಮೊದಲಾದವರು ಇದ್ದರು.

error: Content is protected !!