ಕೊರೊನಾ ಎಂಬುದು ವೈದ್ಯಕೀಯ ವಲಯದಲ್ಲಿ ಜೂಜಾಟ

ಹರಪನಹಳ್ಳಿ, ಆ.19- ದೇಶದಲ್ಲಿ ಕೊರೊನಾ 3ನೇ ಅಲೆ ಹರಡುತ್ತಿದೆ. ಜನರು ಜಾಗೃತಿ ವಹಿಸುವುದರ ಜೊತೆಗೆ ಧರ್ಮ ಜಾಗೃತಿ ಕಾರ್ಯಕ್ರಮಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಮೂಲಕ ಕೊರೊನಾವನ್ನು ಹಿಮ್ಮೆಟಿಸಬಹುದು ಎಂದು ಉಜ್ಜಿನಿ ಪೀಠದ ಶ್ರೀ 1008 ಜಗದ್ಗುರು ಸಿದ್ಧಲಿಂಗ ರಾಜ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಅಡವಿಹಳ್ಳಿ ಗ್ರಾಮದ ಸದ್ಗುರು ಶಿವಯೋಗಿ ಚಿರಾಭಿಮಾನಿ ದಾಸೋಹ ಬೃಹನ್ಮಠ ಸ್ವಾಮಿ ಹಾಗೂ ಆಂಜನೇಯ ಸ್ವಾಮಿಯ ದೇವಸ್ಥಾನದ ಉದ್ಘಾಟನೆ ನೆರವೇರಿಸಿ, ಭಕ್ತ ಸಮೂಹಕ್ಕೆ ಜಗದ್ಗುರುಗಳು ಆಶೀರ್ವಚನ ನೀಡಿದರು.

ಕೊರೊನಾ ಸಂದರ್ಭದಲ್ಲಿ ಯಾವುದೇ ಮಠಾಧೀಶರು ಸಂಚಾರ ಮಾಡುವುದು ವಿರಳ. ಆದರೆ ಭಕ್ತರ ಮನವಿಗೆ, ಧರ್ಮ ಜಾಗೃತಿಯನ್ನು ಮೂಡಿಸುವ ಸಲುವಾಗಿಯೇ ಇಂತಹ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವುದು ಅನಿವಾರ್ಯವಾಗಿದ್ದು, ಭಕ್ತರು ಪೂಜೆ ಕಾರ್ಯಕ್ರಮಗಳನ್ನು ಸರಳವಾಗಿ ತಮ್ಮ ತಮ್ಮ ಮನೆಯಲ್ಲಿಯೇ ಆಚರಿಸುವುದು ಸೂಕ್ತ. ಕೊರೊನಾ ಎಂಬುದು ವೈದ್ಯಕೀಯ ವಲಯದಲ್ಲಿ ಜೂಜಾಟವಾಗಿದೆ. ಜನಸಾಮಾನ್ಯರಿಗೆ ಹೊರೆಯಾಗುತ್ತಿದೆ, ಹಾಗಾಗಿ ಕೊರೊನಾ ನಮ್ಮನ್ನು ಬೆನ್ನಟ್ಟುವ ಮೊದಲೇ ನಾವೇ ಜಾಗೃತರಾಗಬೇಕು ಎಂದರು.

ಮಾನಿಹಳ್ಳಿ ಪುರವರ್ಗ ಮಠ ಮಳೆಯೋಗೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವೀರಶೈವ ಧರ್ಮಕ್ಕೆ ಪಂಚಪೀಠಗಳು ಹೈಕಮಾಂಡ್ ಇದ್ದಂತೆ. ಇವುಗಳ ಶಾಖಾ ಮಠಗಳಾಗಿ ಶಿವಾಚಾರ್ಯ ಮಠಗಳು ಹಾಲಸ್ವಾಮಿಗಳ ಗುರು ಪರಂಪರೆಯು ವೀರಶೈವ ಧರ್ಮದ ಸಂಸ್ಕೃತಿಯನ್ನು ಉಪದೇಶ ಮಾಡುತ್ತಾ ಬಂದಿದ್ದಾರೆ. ಅಡವಿಹಳ್ಳಿ ಎಂಬ ಚಿಕ್ಕ ಗ್ರಾಮದಲ್ಲಿ ದಾಸೋಹ ಹಾಗೂ ಬೃಹನ್ಮಠ ನಿರ್ಮಿಸುವುದರ ಮೂಲಕ ಭಕ್ತರ ಮನಸಿನಲ್ಲಿ ನೆಲೆಸಿದ್ದಾರೆ ಎಂದರು.

ಹಗರಿಬೊಮ್ಮನಹಳ್ಳಿಯ ನಂದೀಪುರದ ಶ್ರೀ ಮಹೇಶ್ವರ ಸ್ವಾಮೀಜಿ ಮಾತನಾಡಿ, ನಮ್ಮ ದೇಶದ ಆಚಾರ-ವಿಚಾರ, ನಡೆ-ನುಡಿ, ಜಪ-ತಪಗಳಿಗೆ ಜಗತ್ತಿಗೇ ಮಾದರಿಯಾಗಿದೆ. ಭಾರತದಲ್ಲಿ ಸವೆಯದೇ ಇರುವಂತಹ ಸಂಪತ್ತನ್ನು ಹೊಂದಿದ್ದು ಎಲ್ಲಾ ದೃಷ್ಠಿಯಿಂದ ಜಗತ್ತನೆ ಮೀರಿಸುವ ಶಕ್ತಿ ಭಾರತಕ್ಕಿದೆ. ಆದರೆ, ನಮ್ಮ ದೇಶದ ಜನರು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿರುವುದು ವಿಷಾದನೀಯ ಸಂಗತಿ ಎಂದ ಅವರು, ಮಠಾಧೀಶರುಗಳು ರಾಜಕೀಯ ಪ್ರವೇಶಿಸುವುದು ಸೂಕ್ತವಲ್ಲ, ಆದರೆ, ರಾಜಕಾರಣಿಗಳು ತಪ್ಪು ದಾರಿ ಹಿಡಿದಾಗ ಅವರನ್ನು ಎಚ್ಚರಿಸುವುದು ನಮ್ಮಗಳ ಕರ್ತವ್ಯ ಎಂದರು.

ಈ ಸಂದರ್ಭದಲ್ಲಿ ಅಡವಿಹಳ್ಳಿಯ ಸದ್ಗುರು ಶ್ರೀ ಶಿವಯೋಗಿ ವೀರಗಂಗಾಧರ ಹಾಲಸ್ವಾಮೀಜಿ, ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಮುಷ್ಠೂರು, ಶ್ರೀ ಹಾಲಸ್ವಾಮಿ ಶಿವಾಚಾರ್ಯರು ಉಕ್ಕಡಗಾತ್ರಿ, ಶ್ರೀ ಪಂಚಾಕ್ಷರಿ ಶಿವಾಚಾರ್ಯ ಸ್ವಾಮೀಜಿ ಬೆಣ್ಣೆಹಳ್ಳಿ ಸಾನ್ನಿಧ್ಯ ವಹಿಸಿದ್ದರು. ಗ್ರಾಮದ ಮುಖಂಡರಾದ ಬೆಣ್ಣಿ ಬಸಣ್ಣ, ಬಸವರಾಜಯ್ಯ, ಗಡ್ಡದಗೌಡರ ಮಂಜುನಾಥ್, ಪ್ರಕಾಶ್ ಸೇರಿದಂತೆ ಇನ್ನೂ ಕೆಲವರು ಉಪಸ್ಥಿತರಿದ್ದರು. 

error: Content is protected !!