ಛಾಯಾಗ್ರಾಹಕರ ವೃತ್ತಿ ವಿಶಿಷ್ಟ, ಮೌಲ್ಯಯುತವಾದದ್ದು: ಡಿಸಿ

ದಾವಣಗೆರೆ, ಆ. 19- ಛಾಯಾಗ್ರಾಹಕರ ವೃತ್ತಿ ವಿಶಿಷ್ಟ ಹಾಗೂ ಮೌಲ್ಯಯುತವಾದ ವೃತ್ತಿ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

ಜಿಲ್ಲಾ ಛಾಯಾಗ್ರಾಹಕರ ಸಂಘ ಹಾಗೂ ಜಿಲ್ಲಾ ಅಖಿಲ ಕರ್ನಾಟಕ ರವಿಚಂದ್ರನ್ ಅಭಿಮಾನಿಗಳ ಸಂಘದ ವತಿಯಿಂದ ನಗರದ ರೋಟರಿ ಬಾಲಭವನದಲ್ಲಿ ಇಂದು ಏರ್ಪಾಡಾಗಿದ್ದ 182ನೇ ವಿಶ್ವ ಛಾಯಾಗ್ರಹಣ ದಿನಾಚರಣೆ,  ತಾಲ್ಲೂಕು ಫೋಟೋ ಮತ್ತು ವಿಡಿಯೋ ಗ್ರಾಫರ್ಸ್ ಸಂಘದ 9ನೇ ವರ್ಷದ ವಾರ್ಷಿಕೋ ತ್ಸವ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮೊಬೈಲ್‌ಗಳು ಬಂದಾಗಿನಿಂದ ಛಾಯಾಗ್ರಾಹಕ ವೃತ್ತಿಗೆ ಪೆಟ್ಟು ಬಿದ್ದಿದೆ. ಇಂತಹ ಸಂದರ್ಭದಲ್ಲೂ ತಮ್ಮ ವೃತ್ತಿಯನ್ನು ಪೋಷಿಸಿಕೊಂಡು ಬರುತ್ತಿರುವ ಛಾಯಾಗ್ರಾ ಹಕರು ಅಭಿನಂದನೆಗೆ ಅರ್ಹರು ಎಂದರು.

ಕಾಯಕ ಯಾವುದೇ ಇರಲಿ. ಶ್ರದ್ಧೆಯಿಂದ ಮಾಡಿದರೆ ದೇವರನ್ನು ಕಾಣಲು ಸಾಧ್ಯ ಎಂದ ಜಿಲ್ಲಾಧಿಕಾರಿ, ಕೊರೊನಾ ದಿನಗಳಲ್ಲಿ ತಮ್ಮ ವೈಯಕ್ತಿಕ ಜೀವನದ ರಕ್ಷಣೆ ಜೊತೆ ಕಾಯಕ ಮಾಡಿಕೊಂಡು ಹೋಗಬೇಕೆಂದು ಛಾಯಾಗ್ರಾಹಕರಿಗೆ ಕಿವಿ ಮಾತು ಹೇಳಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಹಾನಗರ ಪಾಲಿಕೆ ಮೇಯರ್ ಎಸ್.ಟಿ. ವೀರೇಶ್,  ಇಂದಿನ ಸಿಹಿ ಘಟನೆಗಳನ್ನು ನಾಳೆಯ ಸವಿ ನೆನಪುಗಳನ್ನಾಗಿಸುವ ಫೋಟೋ ಗ್ರಾಫರ್‌ ಗಳು ಪ್ರತಿಯೊಬ್ಬರ ಜೀವನದಲ್ಲೂ ಮಹತ್ವದ ಪಾತ್ರ ವಹಿಸುತ್ತಾರೆ.  ಇತ್ತೀಚೆಗೆ ರಾಜಕಾರಣಿಗಳಿಗೆ, ಪ್ರತಿಭಟನಾಕಾರರಿಗೆ ಫೋಟೋ ಗ್ರಾಫರ್‌ಗಳು ಅತಿ ಮುಖ್ಯವಾಗಿ ಬೇಕಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಛಾಯಾಗ್ರಾಹಕ ವೃತ್ತಿಯಲ್ಲಿ ವಿಶ್ವ ದಾಖಲೆ ಮಾಡಿದ ಅನೇಕರಿದ್ದಾರೆ. ಬೆಲೆ ಕಟ್ಟಲಾಗದ ಹಳೆಯ ಫೋಟೋಗಳು ಇವೆ. ಫೋಟೋಗ್ರಫಿ ಹವ್ಯಾಸವಿದ್ದವರಿಗೆ ಸೂಕ್ತ ತರಬೇತಿ ಸಿಕ್ಕರೆ ಈ ವೃತ್ತಿಯಲ್ಲಿ ಸಾಧನೆ ಮಾಡಬಹುದು ಎಂದು ಅಭಿಪ್ರಾಯಪಟ್ಟರು.

ಉದ್ಯಮಿ ಲೋಕಿಕೆರೆ ನಾಗರಾಜ್ ಮಾತನಾಡಿ, ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗ ಫೋಟೋಗ್ರಫಿ. ಆದರೆ ಕಳೆದ ಎರಡು ವರ್ಷಗಳಿಂದ ಛಾಯಾಗ್ರಾಹಕರ ಸ್ಥಿತಿ ಶೋಚನೀಯವಾಗಿದೆ ಎಂದು ಹೇಳಿದರು.

ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.  ಜಿಲ್ಲಾ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಆರ್.ಎನ್. ಪಾಟೀಲ್, ಜಿ.ಮಂಜುನಾಥ್, ಎಸ್.ಎಲ್. ಆನಂದಪ್ಪ ಹಾಗು ಇತರರು ವೇದಿಕೆ ಮೇಲಿದ್ದರು.

error: Content is protected !!