ಸಿರಿಗೆರೆ ಮಠ ಹಾಗೂ ತಮ್ಮ ವಿರುದ್ಧ ದಾವಣಗೆರೆಯಲ್ಲಿ ಕೆಲವರು ಮಾಡಿದ್ದ ಆರೋಪಗಳಿಗೆ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಶುಕ್ರವಾರ ಸಿರಿಗೆರೆಯಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಸಾಕ್ಷಿ ಸಹಿತ ಉತ್ತರ ನೀಡಿದರು.
ಸಭೆಯಲ್ಲಿ ಪಾಲ್ಗೊಂಡಿದ್ದ ಮುಖಂಡರು ಸಮಾಜದ ತೇಜೋವಧೆ ಮಾಡಿದವರಿಗೆ ಸಾಮಾಜಿಕವಾಗಿ ಉತ್ತರ ನೀಡುವುದಾಗಿ ಹೇಳಿಕೆ ನೀಡಿದರು.
ಆರೋಪ ಮಾಡಿದವರಿಂದಲೇ ಶ್ರೀಮಠದ ದುರ್ಬಳಕೆ
ಸಿರಿಗೆರೆ, ನ. 19 – ತರಳಬಾಳು ಶ್ರೀಮಠ ಹಾಗೂ ತಮ್ಮ ವಿರುದ್ಧ ಆರೋಪ ಮಾಡುತ್ತಿರುವವರೇ ಮಠದ ಆಸ್ತಿಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿರುವ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಆಧಾರ ರಹಿತ ಆರೋಪ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.
ಸಿರಿಗೆರೆಯ ಶ್ರೀ ಗುರುಶಾಂತೇಶ್ವರ ದಾಸೋಹ ಮಂಟಪದಲ್ಲಿ ಸಾಧು ಸದ್ಧರ್ಮ ವೀರಶೈವ ಸಂಘದ ವತಿಯಿಂದ ಕರೆಯಲಾಗಿದ್ದ ಸಮಾಜದ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಮಠದಿಂದ ಅನುದಾನ ಪಡೆದವರು ಹಾಗೂ ತಿಂದು ತೇಗಿದವರು ಈಗ ಆರೋಪ ಮಾಡುತ್ತಿದ್ದಾರೆ. ಬೆಂಗಳೂರಿನ ತರಳಬಾಳು ಕೇಂದ್ರದಲ್ಲಿ ರಿಯಲ್ ಎಸ್ಟೇಟ್ ದಂಧೆ ಮಾಡದಂತೆ ತಾವು ನಿರ್ಬಂಧಿಸಿದ ಕಾರಣ ತಮ್ಮ ಹಾಗೂ ಮಠದ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ದಾವಣಗೆರೆಯಲ್ಲಿ ಇತ್ತೀಚೆಗೆ ಕೆಲವರು ಪತ್ರಿಕಾಗೋಷ್ಠಿಯಲ್ಲಿ ತರಳಬಾಳು ಶ್ರೀಗಳು ಹಾಗೂ ಮಠದ ಬಗ್ಗೆ ಮಾಡಿರುವ ಆರೋಪಗಳ ಹಿನ್ನೆಲೆಯಲ್ಲಿ ಈ ಸಭೆಯನ್ನು ಕರೆಯಲಾಗಿತ್ತು. ರಿಯಲ್ ಎಸ್ಟೇಟ್ಗಾಗಿ ಕೆಲವರು ನಮ್ಮ ಹೆಸರು ದುರ್ಬಳಕೆ ಮಾಡಿಕೊಂಡಿದ್ದಾರೆ. ಮಠದಿಂದ ರಿಯಲ್ ಎಸ್ಟೇಟ್ ನಡೆಯುತ್ತಿದೆ ಎಂದು ತಪ್ಪಾಗಿ ತಿಳಿದ ಜನರು, ಈ ವ್ಯವಹಾರಕ್ಕೆ ದುಡ್ಡು ಕೊಡುತ್ತಾ ಹೋದರು. ಈ ಬಗ್ಗೆ ಕಳೆದ ಜೂನ್ ತಿಂಗಳಲ್ಲಿಯೇ ವಿವರವಾಗಿ ಹೇಳಿದ್ದೇನೆ ಎಂದು ಶ್ರೀಗಳು ತಿಳಿಸಿದರು.
ರಿಯಲ್ ಎಸ್ಟೇಟ್ ತಡೆದಿದ್ದಕ್ಕೆ ಆರೋಪ: ಮಠದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡದಂತೆ ತಿಳಿಸಿದ ಕಾರಣ ಕೆಲವರು ತಮ್ಮ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ಮಠದ ಮಾಜಿ ಕಾರ್ಯದರ್ಶಿ ಸಿದ್ದಯ್ಯ ಮೈಸೂರಿನಲ್ಲಿರುವ ಮಠದ ಜಾಗವನ್ನು ತನ್ನ ಹೆಸರಿಗೆ ಮಾಡಿಕೊಳ್ಳಲು ಪ್ರಯತ್ನ ನಡೆಿಿಸಿದ್ದನ್ನು ತಡೆಯಲಾಗಿತ್ತು. ಈ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳಲಾಗಿದೆ. ಸಿದ್ದಯ್ಯ ಬಳಿ ಇರುವ ಮಠಕ್ಕೆ ಸಂಬಂಧಿತ ಎಲ್ಲ ದಾಖಲೆಗಳನ್ನು ಕೊಡುವಂತೆ ತಿಳಿಸಲಾಗಿತ್ತು. ಇಷ್ಟಾದರೂ ಕೆಲ ದಾಖಲೆಗಳನ್ನು ಕೊಟ್ಟಿರಲಿಲ್ಲ ಎಂದು ಶ್ರೀಗಳು ಹೇಳಿದರು.
ಮಠದ ಹೆಸರಲ್ಲಿ ನಡೆಸಲಾಗುತ್ತಿದ್ದ ರಿಯಲ್ ಎಸ್ಟೇಟ್ ದಂಧೆ ತಡೆದಿದ್ದಕ್ಕೆ ತಮ್ಮ ಹಾಗೂ ಮಠದ ವಿರುದ್ಧ ಆರೋಪ
ಸಮಾಜದವರು ತಪ್ಪಿತಸ್ಥರ ಬಗ್ಗಿಸಿ
ತಪ್ಪು ಮಾಡುತ್ತಾ ಮಠ, ಸಮಾಜ ಹಾಗೂ ತಮ್ಮ ತೇಜೋವಧೆ ಮಾಡುತ್ತಿರುವವರನ್ನು ಕೋರ್ಟ್ನಲ್ಲಿ ಬಗ್ಗಿಸುತ್ತೇವೆ. ಸಮಾಜದಲ್ಲಿ ಇಂಥವರನ್ನು ಬಗ್ಗಿಸುವ ಜವಾಬ್ದಾರಿ ಸಮಾಜದ್ದಾಗಿದೆ. ಇಂಥವರು ಮಾಡಿರುವ ಆರೋಪಗಳಿಗೆ ದಾಖಲೆ ನೀಡುವಂತೆ ಅವರನ್ನು ಪ್ರಶ್ನಿಸಬೇಕು. ಆದರೆ, ನಿಮ್ಮ ಕೃತ್ಯ ಕಾನೂನು ವಿರುದ್ಧ ಆಗಬಾರದು ಎಂದು ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಶ್ರೀಗಳು ಸಾಧು ಸದ್ಧರ್ಮ ಸಮಾಜದವರಿಗೆ ಹೇಳಿದ್ದಾರೆ.
ಕುತ್ತಿಗೆ ಹಿಡಿದು ದೂಡಿರುತ್ತಿದ್ದೆ…
ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ವಿರುದ್ಧ ಪ್ರಕರಣ ದಾಖಲಿಸಿರುವ ಎಸ್.ಎಸ್.ಪಾಟೀಲ್ ಅವರು ಸಾಣೇಹಳ್ಳಿ ಶಾಖಾ ಮಠದ ಸಮಾರಂಭದಲ್ಲಿ ಭಾಗವಹಿಸಲು ಮತ್ತು ಸಾಣೇಹಳ್ಳಿ ಶ್ರೀಗಳಾದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಸನ್ಮಾನಿಸಲು ಬಿಟ್ಟಿದ್ದು, ಸಿರಿಗೆರೆ ಹಾಗೂ ಸಾಣೇಹಳ್ಳಿ ಮಠಗಳ ನಡುವೆ ಅಪಪ್ರಚಾರ ಮಾಡಲು ಕೆಲವರಿಗೆ ಅವಕಾಶ ಕೊಟ್ಟಂತಾಗಿದೆ ಎಂದು ಸಭೆಯಲ್ಲಿದ್ದ ರುದ್ರನಗೌಡ ಪಾಟೀಲ್ ಹೇಳಿದರು.
ಈ ವಿಷಯದ ಬಗ್ಗೆ ಆಂತರಿಕವಾಗಿ ನಿರ್ಧರಿಸಲು ಮಠದಿಂದ ಸಮಿತಿ ರಚಿಸಲಾಗಿದೆ. ಸಮಿತಿ ಸೂಕ್ತ ವಿಷಯವನ್ನು ಸಂಬಂಧಿಸಿದವರಿಗೆ ತಿಳಿಸಲಿದೆ. ಇಲ್ಲಿ ಆ ವಿಷಯ ಬೇಡ ಎಂದು ಭಕ್ತರಿಗೆ ತಿಳಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಸ್ವಾಮಿಗಳು ನ್ಯಾಯವಾಗಿ ಅವರನ್ನು ಹತ್ತಿರ ಬಿಟ್ಟುಕೊಳ್ಳಬಾರದು. ನನ್ನ ಹತ್ತಿರ ಬಂದಿದ್ದರೆ ಕುತ್ತಿಗೆ ಹಿಡಿದು ಹೊರ ದೂಡುತ್ತಿದ್ದೆವು. ಈಗ ಎಲ್ಲಿ ತಪ್ಪಾಗಿದೆಯೋ ಅಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ. ಈ ಸಭೆಯಲ್ಲಿ ವಿಷಯದ ಪ್ರಸ್ತಾಪ ಬೇಡ ಎಂದು ಚರ್ಚೆಗೆ ತೆರೆ ಎಳೆದರು.
ದೊಡ್ಡ ಗುರುಗಳ ಉಗ್ರ ಸ್ವಭಾವ ತಾಳಿದ್ದೇವೆ
ಸಿರಿಗೆರೆ, ನ. 19 – ಸಿರಿಗೆರೆಯ ಹಿರಿಯ ಶ್ರೀಗಳಾದ ಗುರುಶಾಂತೇಶ್ವರ ಸ್ವಾಮೀಜಿ ಅವರು ಶಾಂತ ಸ್ವಭಾವದವರು. ಅವರ ಶಾಂತ ಸ್ವಭಾವ ಇದುವರೆಗೂ ಮೈಗೂಡಿಸಿಕೊಂಡು ಬಂದಿದ್ದೆವು. ಈ ಪರಿಸ್ಥಿತಿಯಲ್ಲಿ ಶಾಂತ ಸ್ವಭಾವ ಕೆಲಸಕ್ಕೆ ಬರುವುದಿಲ್ಲ. ಈಗ ದೊಡ್ಡ ಗುರುಗಳು (ಲಿಂ. ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ) ಅವರ ಉಗ್ರ ಸ್ವಭಾವ ಸ್ವೀಕರಿಸಿದ್ದೇವೆ ಎಂದು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.
ನಾವೀಗ ದೊಡ್ಡ ಗುರುಗಳ ಸ್ವಭಾವವನ್ನು ಕಾರ್ಯರೂಪಕ್ಕೆ ತರಲು ತಾಳಿದ್ದೇವೆ. ಇದನ್ನು ಚಿತಾವಣೆ ಎಂದು ಭಾವಿಸಬಾರದು, ಇದು ಜಾಗೃತಿ ಎಂದು ಶ್ರೀಗಳು ಹೇಳಿದರು.
ವೃಥಾ ಆರೋಪ ಮಾಡುವುದು ದ್ರೋಹ ಹಾಗೂ ಪಾಪದ ಕೃತ್ಯ ಎಂದ ಶ್ರೀಗಳು, ಸಮಾಜದ ಗೌರವಕ್ಕಾಗಿ ಕೆಲ ವಿಷಯಗಳನ್ನು ಇದುವರೆಗೂ ವಿಷಕಂಠನ ರೀತಿಯಲ್ಲಿ ನುಂಗಿಕೊಂಡು ಬಂದಿದ್ದೆ. ಆದರೆ, ಈಗ ಆ ವಿಷಯಗಳನ್ನು ಸಮಾಜಕ್ಕೆ ವಿಶೇಷವಾಗಿ ಯುವಕರಿಗೆ ತಿಳಿಸುವ ಸಂದರ್ಭ ಬಂದಿದೆ. ಯುವಕರಿಗೆ ಮಠದ ಹಿನ್ನೆಲೆ ತಿಳಿಸುವುದು ತಮ್ಮ ಉದ್ದೇಶ ಎಂದವರು ಹೇಳಿದರು.
ಯಾರಿಗಾದರೂ ಕೌಟುಂಬಿಕ ಸಮಸ್ಯೆ ಎದುರಾದಾಗ ಅಂತರಂಗಿಕವಾಗಿ ಮಾತನಾಡಿ ಬಗೆಹರಿಸಿಕೊಳ್ಳುತ್ತಾರೆಯೇ ಹೊರತು, ವಾಟ್ಸಾಪ್ – ಇಲ್ಲವೇ ಮಾಧ್ಯಮಗಳ ಮೂಲಕ ಮನೆಯ ಸಮಸ್ಯೆಗಳನ್ನು ಹರಿಬಿಡುವುದಿಲ್ಲ. ಹಾಗೆಯೇ ಸಮಾಜದ ಸಮಸ್ಯೆ ಇದ್ದಾಗ ಅಂತರಂಗಿಕವಾಗಿ ಬಗೆಹರಿಸಿಕೊಳ್ಳಬಹುದಿತ್ತು ಎಂದು ಶ್ರೀಗಳು ಹೇಳಿದರು.
ಆರೋಪ ಮಾಡಿದವರೇ ಸಭೆಗೆ ಬಂದಿಲ್ಲ
ನ್ಯಾಯಾಲಯಗಳಲ್ಲಿ ಸಾಮಾನ್ಯವಾಗಿ ಆರೋಪ ಮಾಡಿದವರು ಹಾಜರಾಗುತ್ತಾರೆ, ಆರೋಪಿಗಳು ಗೈರಾಗುತ್ತಾರೆ. ಆದರೆ, ಸಿರಿಗೆರೆ ಮಠದಲ್ಲಿ ಕರೆದ ಸಭೆಗೆ ಆರೋಪಕ್ಕೆ ಗುರಿಯಾದ ನಾವು ಹಾಗೂ ಸಮಾಜದವರು ಬಂದಿದ್ದೇವೆ. ಆರೋಪ ಮಾಡಿದವರೇ ಬಂದಿಲ್ಲ ಎಂದು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ. ಆರೋಪ ಮಾಡಿದವರ ಹೆಸರಿಗೆ ಸಾಧು ಸದ್ಧರ್ಮ ಸಮಾಜದಿಂದ ರಿಜಿಸ್ಟರ್ಡ್ ನೋಟಿಸ್ ಕಳಿಸಲಾಗಿತ್ತು. ಮಾಡಿರುವ ಆರೋಪಗಳಿಗೆ ಇಂದಿನ ಸಭೆಗೆ ಬಂದು ಸಾಕ್ಷಿ ಒದಗಿಸುವಂತೆ ತಿಳಿಸಲಾಗಿತ್ತು. ಆದರೆ, ಅವರಾರೂ ಬಂದಿಲ್ಲ, ಆರೋಪಗಳಿಗೆ ಸಾಕ್ಷಿಗಳನ್ನೂ ಕೊಟ್ಟಿಲ್ಲ ಎಂದರು.
ಎಲ್ಲರ ಹೆಸರಲ್ಲೂ ಜಮೀನಿದೆ
ಮಠದ ಜಮೀನನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಲಾ ಗಿದೆ ಎಂಬ ಆರೋಪವನ್ನು ತಳ್ಳಿ ಹಾಕಿರುವ ಸಿರಿಗೆರೆ ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಮಠದ ಹೆಸರಿಗೆ ನೇರವಾಗಿ ಜಮೀನು ಪಡೆಯಲು ವಿಳಂಬವಾಗಿ ತೊಡಕುಗಳು ಉಂಟಾಗುತ್ತವೆ. ಹೀಗಾಗಿ ವ್ಯಕ್ತಿಗಳ ಹೆಸರಿಗೆ ಜಮೀನು ಖರೀದಿಸಿ ನಂತರ ಮಠಕ್ಕೆ ಪಡೆಯಲಾಗುತ್ತದೆ ಎಂದು ಹೇಳಿದ್ದಾರೆ.
ಈ ಬಗ್ಗೆ ವಿವರ ನೀಡಿರುವ ಅವರು, ತಾವೊಬ್ಬರಷ್ಟೇ ಅಲ್ಲದೇ, ಮಾಜಿ ಕಾರ್ಯದರ್ಶಿ ಎಸ್. ಸಿದ್ದಯ್ಯ, ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ಸೇರಿ ಹಲವರ ಹೆಸರಿಗೆ ಮಠದ ಜಮೀನಿದೆ. ಯಾರ ಹೆಸರಿಗೆ ಜಮೀನು ಮಾಡಿದರೂ ಕಬಳಿಸಿದ ಕೆಟ್ಟ ಶಿಷ್ಯರು ಇದುವರೆಗೂ ಇಲ್ಲ ಎಂದವರು ಹೇಳಿದರು.
ಮಠದ ಹೆಸರಿನಲ್ಲಿ ಇರುವ ಜಾಗ ಸಾವಿರಾರು ಎಕರೆಯಷ್ಟಾಗಿದೆ ಎಂದು ಶ್ರೀಗಳು ಸಭೆಗೆ ಪಿ.ಪಿ.ಟಿ. ತೆರೆಯ ಮೂಲಕ ವಿವರ ನೀಡಿದರು. ಅದರ ಪ್ರಕಾರ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಹೆಸರಿನಲ್ಲಿ 609 ಎಕರೆ ಜಮೀನಿದೆ. ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಯವರ ಹೆಸರಿನಲ್ಲಿ 335 ಎಕರೆ, ಎಸ್. ಸಿದ್ದಯ್ಯ ಹೆಸರಿನಲ್ಲಿ 69 ಎಕರೆ, ಎಸ್.ಟಿ.ಜೆ. ಬೃಹನ್ಮಠದ ಕಾರ್ಯದರ್ಶಿ ಹೆಸರಿನಲ್ಲಿ 67 ಎಕರೆ, ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ಹೆಸರಿನಲ್ಲಿ 45 ಎಕರೆ, ತರಳಬಾಳು ಸೌಹಾರ್ದ ಸಹಕಾರ ಕೈಗಾರಿಕೆ ಎಸ್ಟೇಟ್ ಲಿ., ಬೆಂಗಳೂರು ಹೆಸರಿನಲ್ಲಿ 16 ಎಕರೆ, ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೆಸರಿನಲ್ಲಿ 14 ಎಕರೆ, ಶ್ರೀ ತರಳಬಾಳು ಜಗದ್ಗುರು ಎಜುಕೇಷನ್ ಸೊಸೈಟಿ ಹೆಸರಿನಲ್ಲಿ 7 ಎಕರೆ, ಉಜ್ಜಿನಿ ಜಮೀನು 6 ಎಕರೆ, ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿ ಹೆಸರಿನಲ್ಲಿ 3 ಎಕರೆ, ಹೆಚ್.ಜಿ. ರೇವಣ್ಣ ಹೆಸರಿನಲ್ಲಿ 1 ಹಾಗೂ ವಿಶ್ವೇಶ್ವರ ಶರ್ಮ ಹೆಸರಿನಲ್ಲಿ 1 ಎಕರೆ ಜಮೀನಿದೆ.
ಉತ್ತರಾಧಿಕಾರಿ ಆಯ್ಕೆಗೆ ಸಮಿತಿ
ಬೈಲಾದ ಪ್ರಕಾರ ಉತ್ತರಾಧಿಕಾರಿ ಆಯ್ಕೆ ಶ್ರೀಗಳ ಘೋಷಣೆ
ಸಿರಿಗೆರೆ, ನ. 19 – ಸಾಧು ವೀರಶೈವ ಸಮಾಜದ ಸಮಿತಿ ಹಾಗೂ ತಾವು ಸೇರಿಕೊಂಡು ತರಳಬಾಳು ಮಠದ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವುದಾಗಿ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಘೋಷಿಸಿದ್ದಾರೆ.
ಸಿರಿಗೆರೆಯಲ್ಲಿ ಸಾಧು ಸದ್ಧರ್ಮ ವೀರಶೈವ ಸಂಘದ ವತಿಯಿಂದ ಕರೆಯಲಾಗಿದ್ದ ಸಮಾಜದ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡುತ್ತಿದ್ದ ಅವರು, ಮಠದ ಉತ್ತರಾಧಿಕಾರಿ ಆಯ್ಕೆಗೆ ಬೈಲಾ ಇದೆ. ಬೈಲಾದ ಅನ್ವಯವೇ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಮಠದ ಉತ್ತರಾಧಿಕಾರಿಯನ್ನು ಶ್ರೀಗಳು ತಾವೇ ಆಯ್ಕೆ ಮಾಡಿಕೊಳ್ಳಬೇಕು ಎಂದು ಸಭೆಯಲ್ಲಿದ್ದ ಕೆಲ ಭಕ್ತರು ಮನವಿ ಮಾಡಿಕೊಂಡಿದ್ದನ್ನು ಒಪ್ಪದ ಶ್ರೀಗಳು, ಈಗಾಗಲೇ ತಮ್ಮದು ಏಕಚಕ್ರಾಧಿಪತ್ಯ ಎಂದು ಕೆಲವರು ಟೀಕಿಸುತ್ತಿದ್ದಾರೆ. ಹೀಗಾಗಿ ತಾವೇ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವುದಿಲ್ಲ. ಈ ಹಿಂದೆ ದೊಡ್ಡ ಗುರುಗಳು ಮಾಡಿದ ಹಾಗೆ ಸಮಿತಿ ರಚಿಸಬೇಕು ಎಂದರು. 2012ರಲ್ಲೇ ತಾವು ಪೀಠಾಧೀಶ ಸ್ಥಾನದಿಂದ ನಿವೃತ್ತಿ ಘೋಷಣೆ ಮಾಡಿರುವುದಾಗಿ ಕೆಲವರು ಸುಳ್ಳು ಸುದ್ದಿ ಹರಡಿದ್ದರು. ತಾವು ಆ ರೀತಿಯ ಯಾವುದೇ ಘೋಷಣೆ ಮಾಡಿಲ್ಲ. ಹಿರಿಯ ಜಗದ್ಗುರುಗಳಾದ ಲಿಂ. ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರು ತ್ಯಾಗಪತ್ರ ಘೋಷಣೆ ಮಾಡಿದ ನಂತರವೂ ಕೆಲ ಕಾರಣದಿಂದಾಗಿ ಮುಂದುವರೆಯಬೇಕಾಯಿತು. ಅಂತಹ ಪರಿಸ್ಥಿತಿ ಮತ್ತೆ ಬರಬಾರದು ಎಂದು ತಾವು ತ್ಯಾಗಪತ್ರ ಪ್ರಕಟಿಸಿಲ್ಲ ಎಂದು ಶ್ರೀಗಳು ಹೇಳಿದರು.
ಇಷ್ಟಾದರೂ ನ್ಯಾಯಾಲಯದಲ್ಲಿ ತಮ್ಮ ವಿರುದ್ಧ ದಾಖಲಿಸಿರುವ ಪ್ರಕರಣಗಳಲ್ಲಿ ಎಸ್.ಎಸ್. ಪಾಟೀಲ್ ಅವರು ಮಾಜಿ ಸ್ವಾಮೀಜಿ – ಕೇರ್ಟೇಕರ್ ಸ್ವಾಮೀಜಿ ಎಂಬೆಲ್ಲ ಪದಗಳನ್ನು ಬಳಸಿರುವುದು ಸರಿಯಲ್ಲ ಎಂದರು.
ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಗಳು ನಾಲ್ಕೈದು ಜನರನ್ನು ಮಠಕ್ಕೆ ಕರೆತಂದು ಸ್ವಾಮೀಜಿಗಳಾಗಲು ತರಬೇತಿ ನೀಡುವ ಪ್ರಯತ್ನ ನಡೆಸಿದ್ದು, ಹಾಗೂ ಅದರಲ್ಲಿ ವಿಫಲವಾಗಿದ್ದನ್ನು ತಿಳಿಸಿದ್ದಾರೆ. ಪೀಠಕ್ಕೆ ಬರುವವರಿಗೆ ಉನ್ನತ ಮಟ್ಟದ ಅರ್ಹತೆ ಇರಬೇಕು ಎಂದು ಹಿರಿಯ ಗುರುಗಳು ತಿಳಿಸಿದ್ದರು. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದವರು ಹೇಳಿದರು.
ನಾವು ರಿಯಲ್ ಎಸ್ಟೇಟ್ ಆರಂಭಿಸಿಲ್ಲ : ದಾವಣಗೆರೆಯಲ್ಲಿ ಕೆಲವರು ಆರೋಪಿಸಿರುವ ಹಾಗೆ ತಾವು ಯಾವುದೇ ರಿಯಲ್ ಎಸ್ಟೇಟ್ ಆರಂಭಿಸಿಲ್ಲ ಹಾಗೂ ಬಂಡವಾಳ ಕೊಟ್ಟಿಲ್ಲ. ಶಿಷ್ಯರು ಯಾವುದೇ ಯೋಜನೆ – ವೃತ್ತಿ ಆರಂಭಿಸಿದಾಗ ಒಳ್ಳೆಯದಾಗಲಿ ಎಂದು ಉದ್ಘಾಟಿಸುತ್ತೇವೆ. ಹಾಗೆಂದು ಇದರಲ್ಲಿ ತಾವೇ ಷಾಮೀಲಾಗಿದ್ದೇವೆ ಎಂದು ಹೇಳುವುದು ಸುಳ್ಳು ಎಂದು ತಿಳಿಸಿದರು.
ಆರೋಪಿಸಿದವರೇ 19 ಕೋಟಿ ರೂ. ಕೊಡಲಿ : ಮಠಕ್ಕೆ ಬಂದ 19 ಕೋಟಿ ರೂ. ದೇಣಿಗೆ ದುರ್ಬಳಕೆ ಮಾಡಿಕೊಂಡಿರುವುದಾಗಿ ಸಾಹಿತಿ ಶಾಂತ ಗಂಗಾಧರ ಆರೋಪಿಸಿರುವುದನ್ನು ಪ್ರಸ್ತಾಪಿಸಿದ ಶ್ರೀಗಳು, ತಾವು ಪೀಠಕ್ಕೆ ಬಂದ ನಂತರದಿಂದ ಇಲ್ಲಿಯವರೆಗೆ 5.67 ಕೋಟಿ ರೂ.ಗಳ ಕಾಣಿಕೆ ಬಂದಿದೆ. ಇದೆಲ್ಲದಕ್ಕೂ ಲೆಕ್ಕ ಇಡಲಾಗಿದೆ. ಶಾಂತ ಗಂಗಾಧರ ಹೇಳಿದ 19 ಕೋಟಿ ರೂ. ತಂದು ಕೊಡಬೇಕು. ಅದಕ್ಕೆ ಮಠದಿಂದ ರಸೀದಿ ಕೊಡಲಾಗುವುದು ಎಂದು ತರಾಟೆಗೆ ತೆಗೆದುಕೊಂಡರು.
1978ರಿಂದ ಇಲ್ಲಿಯವರೆಗೆ ಮಠ ಹಾಗೂ ಸಾಧು ವೀರಶೈವ ಸಮಾಜ ಹೊಂದಿರುವ ಆಸ್ತಿಗಳ ವಿವರಗಳನ್ನು ನೀಡಿದ ಶ್ರೀಗಳು, ಮಠ ಹಾಗೂ ಸಮಾಜದ ಒಟ್ಟು ಆಸ್ತಿ ಮೌಲ್ಯ ತಾವು ಮಠಕ್ಕೆ ಬಂದ ಸಮಯದಲ್ಲಿ 50 ಲಕ್ಷ ರೂ. ಆಗಿತ್ತು. ಈಗ ಅದು 500 ಕೋಟಿ ರೂ.ಗಳಿಗೆ ತಲುಪಿದೆ ಎಂದು ಹೇಳಿದರು.
ಏಕಪಕ್ಷೀಯ ಬೈಲಾ ತಿದ್ದುಪಡಿಯಾಗಿಲ್ಲ : ಮಠದ ಬೈಲಾ ಏಕಪಕ್ಷೀಯವಾಗಿ ತಾವೇ ತಿದ್ದುಪಡಿ ಮಾಡಿರುವುದಾಗಿ ಆರೋಪಿಸಿರುವುದನ್ನೂ ತಳ್ಳಿ ಹಾಕಿದ ಶ್ರೀಗಳು, ಶ್ರೀಮದ್ ಸಾಧು ಸದ್ಧರ್ಮ ವೀರಶೈವ ಸಂಘ ಹಾಗೂ ಮಠ ಎರಡೂ ಬೇರೆ ಬೇರೆ ಎಂದು ಸರ್ಕಾರದ ನಿಯಮಗಳು ಹೇಳುತ್ತವೆ. ಹೀಗಾಗಿ ಹಿರಿಯ ಜಗದ್ಗುರು ಲಿಂ. ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಗಳ ಗಮನಕ್ಕೆ ತಂದೇ ಬೈಲಾದಲ್ಲಿ ತಿದ್ದುಪಡಿ ಮಾಡಲಾಗಿತ್ತು. ಆಗ ಬೈಲಾ ತಿದ್ದುಪಡಿ ದಾಖಲೆಗೆ ನೂರಾರು ಶಿಷ್ಯರು ಬಂದು ಸಹಿ ಹಾಕಿದ್ದರು ಎಂದು ತಿಳಿಸಿದರು.
ವೇದಿಕೆಯ ಮೇಲೆ ಸಾಧು ಸದ್ಧರ್ಮ ಸಮಾಜದ ಉಪಾಧ್ಯಕ್ಷ ಬಿ.ಎಲ್. ಶಿವಳ್ಳಿ, ದಾವಣಗೆರೆ ಪಾಲಿಕೆ ಮೇಯರ್ ಎಸ್.ಟಿ. ವೀರೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್, ಸಮಾಜದ ಮುಖಂಡರಾದ ಮಾಗನೂರು ಸಂಗಮೇಶ್ವರ ಗೌಡ್ರು, ಅಣಬೇರು ರಾಜಣ್ಣ, ಬಿ. ವಾಮದೇವಪ್ಪ, ಶಿವಗಂಗಾ ಬಸವರಾಜ, ಅಣಬೇರು ಜೀವನಮೂರ್ತಿ ಮತ್ತಿತರರು ಉಪಸ್ಥಿತರಿದ್ದರು. ಬಿಟ್ಟೂ ಬಿಡದ ಮಳೆಯ ನಡುವೆಯೂ ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಭಕ್ತರು ಮಠದ ಸಭೆಯಲ್ಲಿ ಪಾಲ್ಗೊಂಡಿದ್ದರು.
– ಎಸ್.ಎ.ಶ್ರೀನಿವಾಸ್
[email protected]