ಸರ್ಕಾರದ ನಿಯಮದಂತೆ ಲಸಿಕೆಯನ್ನು ಆಸ್ಪತ್ರೆಯಲ್ಲಿಡಬೇಕು. ಮನೆಗೆ ತೆಗೆದುಕೊಂಡು ಹೋಗುತ್ತಿದ್ದರು ಎನ್ನುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಸಿಬ್ಬಂದಿಗಳಾದ ಶುಶ್ರೂಷಕಿ ರೂಪಾ, ಫಾರ್ಮಾಸಿಸ್ಟ್ ಲಕ್ಷ್ಮೀಶ್ ಲಾಟಿ ಇವರು ಕರ್ತವ್ಯ ಲೋಪವೆಸಗಿದ್ದಾರೆ. ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ.
– ಡಾ.ಚಂದ್ರಮೋಹನ್, ತಾಲ್ಲೂಕು ವೈಧ್ಯಾದಿಕಾರಿ
ಹರಿಹರ, ಆ.18 – 70 ಡೋಸ್‍ಗಳಿರುವ ಕೋವಿಶೀಲ್ಡ್ ಲಸಿಕೆ ಯನ್ನು ಕಾಳಸಂತೆಯಲ್ಲಿ ಮಾರಾಟ ಕ್ಕೆಂದು ಆಸ್ಪತ್ರೆಯ ಸಿಬ್ಬಂದಿಗಳು ಮನೆಗೆ ತೆಗೆದುಕೊಂಡು ಹೋಗುತ್ತಿದ ರೆಂಬ ಆರೋಪದಲ್ಲಿ ಗ್ರಾಮಸ್ಥರು ಸಾಕ್ಷಿ ಸಮೇತ ಹಿಡಿದಿ ರುವ ಘಟನೆ ತಾಲ್ಲೂ ಕಿನ ಕೊಕ್ಕನೂರು ಗ್ರಾಮದಲ್ಲಿ ನಡೆದಿದೆ.
ಕೊಕ್ಕನೂರು ಸರ್ಕಾರಿ ಪ್ರಾಥಮಿ ಕ ಆರೋಗ್ಯ ಕೇಂದ್ರದಲ್ಲಿ ಎಂದಿನಂತೆ ಲಸಿಕೆ ಹಾಕುವ ಕಾರ್ಯವು ನಿರಂತರವಾಗಿ ನಡೆಯುತ್ತಿತ್ತು. ಅದರಂತೆ ಸೋಮ ವಾರ 300 ಕೋವಿಶೀಲ್ಡ್ ಹಾಗೂ 200 ಕೋವ್ಯಾಕ್ಸಿನ್ ಲಸಿಕೆಯನ್ನು ಈ ಕೇಂದ್ರಕ್ಕೆ ನೀಡಲಾಗಿತ್ತು. ಸುಮಾರು 500 ಜನರಿಗೆ ಹಾಕುವ ಲಸಿಕೆಯಲ್ಲಿ 270 ಜನರಿಗೆ ಮಾತ್ರ ಹಾಕಲಾಗಿತ್ತು.ಉಳಿದ 230 ಡೋಸ್‍ಗಳಲ್ಲಿ 180 ಡೋಸನ್ನು ಆಸ್ಪತ್ರೆಯ ಶೀತಲ ಶೇಖರಣಾ ಘಟಕದಲ್ಲಿಟ್ಟು 70 ಡೋಸ್‍ಗಳನ್ನು ಶುಶ್ರೂಷಕಿ ರೂಪಾ ಹಾಗೂ ಪಾರ್ಮಾಸಿಸ್ಟ್ ಲಕ್ಷ್ಮೀಶ್ ಲಾಟಿ ಎಂಬ ಆಸ್ಪತ್ರೆಯ ಸಿಬ್ಬಂದಿಗಳು ಕಾಳ ಸಂತೆಯಲ್ಲಿ ಮಾರಾಟಕ್ಕೆಂದು ಜೊತೆಯಲ್ಲಿ ತೆಗೆದುಕೊಂಡು ಹೋಗುತ್ತಿದ್ದರು ಎನ್ನಲಾಗಿದೆ.
ಈ ವಿಷಯ ತಿಳಿದ ಗ್ರಾಮದ ಯುವಕರಾದ ಶಾಂತರಾಜ್ ಮತ್ತು ಶಿವರಾಜ್ ಇಬ್ಬರು ಆಸ್ಪತ್ರೆ ಸಿಬ್ಬಂದಿಯನ್ನು ಬೈಕ್‍ನಲ್ಲಿ ಹಿಂಬಾಲಿಸಿ ನಂದಿತಾವರೆ ಬಳಿ ಅಡ್ಡಗಟ್ಟಿ ಬೈಕ್ ನಿಲ್ಲಿಸಿ ತಮ್ಮ ಬ್ಯಾಗಿನಲ್ಲಿರುವುದು ಏನು ಎಂದು ಪ್ರಶ್ನಿಸಿದಾಗ, ಆಸ್ಪತ್ರೆಯ ವಿಚಾರ ನಿಮಗೇಕೆ ? ಎಂದು ಸಿಬ್ಬಂದಿಗಳು ಮರು ಪ್ರಶ್ನಿಸಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದ ಯುವಕರು ಇವರನ್ನು ಮರಳಿ ಕೊಕ್ಕನೂರಿಗೆ ಕರೆತಂದು ಗ್ರಾಮಸ್ಥರ ಸಮ್ಮುಖದಲ್ಲಿ ಬ್ಯಾಗ್ ಪರಿಶೀಲಿದಾಗ 7 ಕೋವಿಡ್ ಶೀಲ್ಡ್ ವಾಯಿಲ್ ಪತ್ತೆಯಾಗಿವೆ. ಸಿಬ್ಬಂದಿಗಳನ್ನು ಗ್ರಾಮಸ್ಥರು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ.
ರಜೆಯ ಮೇಲೆ ತೆರಳಿದ್ದ ಕೊಕ್ಕನೂರು ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯ ಖಾದರ್ ಸಾಬ್ ಅವರನ್ನು ಸ್ಥಳಕ್ಕೆ ಕರೆಸಿಕೊಂಡು ಸಿಬ್ಬಂದಿಗಳ ಅವ್ಯವಹಾರದ ಬಗ್ಗೆ ಸಾಕ್ಷಿ ಸಮೇತ ವಿವರಣೆ ನೀಡಿ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಮಂಗಳವಾರ ಬೆಳಿಗ್ಗೆ ತಾಲ್ಲೂಕು ವೈದ್ಯಾಧಿಕಾರಿ ಡಾ.ಚಂದ್ರಮೋಹನ್ ಕೊಕ್ಕನೂರು ಗ್ರಾಮಕ್ಕೆ ಭೇಟಿ ನೀಡಿ ಸಿಬ್ಬಂದಿಗಳು ಹಾಗೂ ವೈದ್ಯ ಮತ್ತು ಗ್ರಾಮಸ್ಥರಿಂದ ವರದಿ ಪಡೆದು ಇಲಾಖೆ ಸಿಬ್ಬಂದಿಗಳು ಮಾಡಿರುವ ತಪ್ಪಿನ ವರದಿಯನ್ನು ಜಿಲ್ಲಾ ವೈದ್ಯಾಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮಕೈಗೊಳ್ಳುವ ಭರವಸೆಯನ್ನು ಗ್ರಾಮಸ್ಥರಿಗೆ ನೀಡಿದ್ದಾರೆ.