ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಸ್ಪಷ್ಟನೆ
ದಾವಣಗೆರೆ, ನ.19- ಕೇಂದ್ರ ಸರ್ಕಾರ ಮೂರು ಕೃಷಿ ಕಾಯಿದೆಗಳನ್ನು ವಾಪಸ್ ಪಡೆದಿರುವ ಹಿನ್ನೆಲೆಯಲ್ಲಿ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಇಂದು ನಗರದ ಜಯದೇವ ವೃತ್ತದಲ್ಲಿ ವಿಜಯೋತ್ಸವವನ್ನು ಆಚರಿಸಲಾಯಿತು.
ಮೂರು ಕೃಷಿ ಕಾಯಿದೆಗಳನ್ನು ವಾಪಸ್ ಪಡೆದಿರುವುದಾಗಿ ಹೇಳಿಕೆ ನೀಡಿದರೆ ಸಾಲದು, ಪ್ರಧಾನಿಗಳ ಈ ಆದೇಶ ಲೋಕಸಭೆಯಲ್ಲಿ ಮಸೂದೆಯಾಗಿ ಒಪ್ಪಿಗೆ ಪಡೆಯಬೇಕೆಂದು ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಒತ್ತಾಯಿಸಿದ್ದಾರೆ.
600 ಜನ ರೈತರು ಹುತಾತ್ಮರಾದ ನಂತರ ಕೇಂದ್ರ ಸರ್ಕಾರಕ್ಕೆ ಜ್ಞಾನೋದಯವಾಗಿ 3 ಕೃಷಿ ಕಾಯಿದೆಗಳನ್ನು ವಾಪಸ್ ಪಡೆದಿದೆ. ಈ ಮಸೂದೆಗಳ ವಾಪಸಾತಿಗಾಗಿ ಕಳೆದ 16 ತಿಂಗಳಲ್ಲಿ ರೈತ ಸಂಘ, ಹಸಿರು ಸೇನೆಯಿಂದ ದಾವಣಗೆರೆ ಬಂದ್, ರಸ್ತೆ ತಡೆ, ಹೆದ್ದಾರಿ ತಡೆ ಮೊದಲಾದ ಹತ್ತಾರು ಹೋರಾಟಗಳನ್ನು ಮಾಡಿತ್ತು. ಇದರಲ್ಲಿ ಹಿರಿಯ ಕಾರ್ಮಿಕ ಮುಖಂಡ ಎಚ್.ಕೆ.ರಾಮಚಂದ್ರಪ್ಪ ಅವರು ಕೂಡ ಭಾಗಿಯಾಗಿದ್ದನ್ನು ಮಂಜುನಾಥ್ ಸ್ಮರಿಸಿದರು.
ಇಂತಹ 600 ಕ್ಕೂ ಅಧಿಕ ಜನರ ತ್ಯಾಗ, ಬಲಿದಾನವಾದ ಮೇಲೆ ಪ್ರಧಾನಿ ನರೇಂದ್ರ ಮೋದಿಯವರು ಕರಾಳ 3 ಕಾಯಿದೆಗಳನ್ನು ವಾಪಸ್ ಪಡೆದಿರುವುದು ರೈತರ ಹೋರಾಟಕ್ಕೆ ಸಿಕ್ಕ ಆರಂಭಿಕ ಜಯ. ಆದರೆ, ಇದಕ್ಕೆ ನಾವು ತೃಪ್ತರಾಗಿಲ್ಲ. ಲೋಕಸಭೆಯಲ್ಲಿ ಮಸೂದೆ ವಾಪಸಾತಿ ವಿಚಾರವನ್ನು ಮಂಡಿಸಬೇಕು ಮತ್ತು ಬಹುಮತದಿಂದ ಎಲ್ಲಾ ಸಂಸತ್ ಸದಸ್ಯರು ಒಪ್ಪಿಗೆ ನೀಡಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ನಿರಂತವಾಗಿರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಕನಿಷ್ಟ ಬೆಂಬಲ ಬೆಲೆಗೆ ಕಾಯಿದೆ ರೂಪಿಸಲೇಬೇಕೆಂದು ಸಂಘ ಅಂದೇ ಸ್ಪಷ್ಟವಾಗಿ ಹೇಳಿತ್ತು. ಈ ಬಗ್ಗೆ ಇದುವರೆಗೂ ಪ್ರಧಾನಿಗಳು ಎಲ್ಲೂ ಕೂಡ ಪ್ರಸ್ತಾಪ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಎಂಎಸ್‌ಪಿ ಘೋಷಣೆ ಹಾಗೂ ಸ್ವಾಮಿನಾಥನ್ ಆಯೋಗದ ವರದಿ ಯಥಾವತ್ ಜಾರಿಯಾಗುವವರೆಗೂ ಹೋರಾಟ ನಿರಂತರವಾಗಿರಲಿದೆ ಎಂದು ತಿಳಿಸಿದರು.
ರೈತ ಸಂಘದ ಮುಖಂಡರುಗಳು ದಲ್ಲಾಳಿ, ಖರೀದಿದಾರರ ಏಜೆಂಟರು, ದೊಡ್ಡ ಕಂಪನಿಗಳ ಪರ ಇದ್ದಾರೆ ಎಂದು ಬಿಜೆಪಿ ಸಂಸದರ ಅಪಪ್ರಚಾರ ಗಳ ಮಧ್ಯೆಯೂ ಹೋರಾಟ ಮುಂದುವರೆಸಿ ಜಯ ಗಳಿಸಿದ್ದೇವೆ. ನಾವು ಇಷ್ಟೆಲ್ಲಾ ಮಾತನಾಡಿದ್ದು ಸುಳ್ಳು, ಬಾಯಿ ಚಪಲಕ್ಕೆ ಮಾತನಾಡಿದ್ದೆವು ಎಂದು ಬಿಜೆಪಿ ಎಂಪಿಗಳೇ ದೇಶದ ಜನರಿಗೆ ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರ ರೈತರ ವಿಚಾರದಲ್ಲಿ ಯಾವುದೇ ತೀರ್ಮಾನಗಳನ್ನು ಕೈಗೊಂಡರೂ ಬೇರೆ ಬೇರೆ ವಿಚಾರಗಳ ಮೇಲೆ ರೈತರ ಹೋರಾಟ ಮುಂದುವರೆಯುತ್ತದೆ. ಸದ್ಯಕ್ಕೆ ಇದು ಆರಂಭಿಕ ಜಯ. ಈ ಜಯಕ್ಕಾಗಿ 3 ಬಾರಿ ಭಾರತ್ ಬಂದ್ ಮೊದಲಾದ ಹೋರಾಟಗಳನ್ನು ನಡೆಸಲಾಗಿದೆ. ಆದ್ದರಿಂದ ಲೋಕಸಭೆಯಲ್ಲಿ ಕಾಯ್ದೆ ವಾಪಸಾತಿ ಅಂಗೀಕಾರಗೊಳ್ಳಬೇಕು ಮತ್ತು ಎಂಎಸ್‌ಪಿ ಕಾಯಿದೆಯಾಗಿ ಹೊರಬರಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಗುಮ್ಮನೂರು ಬಸವರಾಜ್, ನೀರ್ಥಡಿ ತಿಪ್ಪೇಶ್, ಭಗತ್ ಸಿಂಹ, ಆಲೂರು ಪುಟ್ಟಾನಾಯ್ಕ್, ದೇವರಾಜ್ ತಳವಾರ, ಬೇವಿನಹಳ್ಳಿ ರವಿ, ಕೆಂಚಮ್ಮನಹಳ್ಳಿ ಹನುಮಂತ ಸೇರಿದಂತೆ, ಇತರರು ಭಾಗವಹಿಸಿದ್ದರು.