ಅಕಾಲಿಕ ಮಳೆ: ಬೆಳೆ ಹಾನಿ ಜಂಟಿ ಸರ್ವೆಗೆ ಸೂಚನೆ

ಕುಂಬಳೂರು : ಬೆಳೆ ಹಾನಿ ವೀಕ್ಷಿಸಿದ ಡಿಸಿ ಮಹಾಂತೇಶ್‌ ಬೀಳಗಿ ಹೇಳಿಕೆ

ಮಲೇಬೆನ್ನೂರು, ನ.18- ಅಕಾಲಿಕ ಮಳೆಯಿಂದಾಗಿ ಕಟಾವಿಗೆ ಬಂದಿದ್ದ ಸುಮಾರು 2 ಸಾವಿರ ಎಕರೆ ಭತ್ತದ ಬೆಳೆ ನೆಲಕಚ್ಚಿರುವ ಮಾಹಿತಿ ಇದ್ದು, ಬೆಳೆ ಹಾನಿ ಕುರಿತು ಶುಕ್ರವಾರ ಸಂಜೆಯೊಳಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್‌ ಬೀಳಗಿ ತಿಳಿಸಿದರು.

ಅವರು ಗುರುವಾರ ಬೆಳಿಗ್ಗೆ ಭಾಸ್ಕರ್‌ರಾವ್‌ ಕ್ಯಾಂಪ್‌, ಕುಂಬಳೂರು, ನಿಟ್ಟೂರು, ಆದಾಪುರ ಗ್ರಾಮಗಳಲ್ಲಿ ಮಳೆಯಿಂದಾಗಿ ನೆಲಕಚ್ಚಿರುವ ಭತ್ತದ ಬೆಳೆಯನ್ನು ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಇಡೀ ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಆಗಿದ್ದು, ಜಗಳೂರು ತಾಲ್ಲೂಕಿನಲ್ಲಿ ಮೆಕ್ಕೆಜೋಳಕ್ಕೆ ಮತ್ತು ಹರಿಹರ ತಾಲ್ಲೂಕಿನಲ್ಲಿ ಭತ್ತದ ಬೆಳೆಗೆ ಹಾನಿಯಾಗಿದೆ.

ಹಾನಿ ಕುರಿತು ತಕ್ಷಣ ವರದಿ ನೀಡುವಂತೆ ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆಗಳ ಜಂಟಿ ಸರ್ವೆಗೆ ಸೂಚನೆ ನೀಡಿದ್ದೇನೆ. ಬೆಳೆ ಹಾನಿಯಾಗಿರುವ ರೈತರ ಖಾತೆಗೆ ಪರಿಹಾರ ನೀಡಲಾಗುವುದು. ಲ್ಯಾವಣಿ ಮೇಲೆ ಹೊಲ ಮಾಡುತ್ತಿರುವ ರೈತರಿಗೆ ನೇರವಾಗಿ ಪರಿಹಾರ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಜಿಲ್ಲಾಧಿಕಾರಿ ಮಹಾಂತೇಶ್‌ ಬೀಳಗಿ ಅವರು ರೈತರಿಗೆ ಭರವಸೆ ನೀಡಿದರು.

ಈ ವೇಳೆ ಸಾವಯವ ಕೃಷಿಕ ಎ.ಎನ್‌. ಆಂಜನೇಯ ಅವರು, ಶೇ. 40 ರೈತರು ಲ್ಯಾವಣಿ ಹೊಲ ಮಾಡುತ್ತಿದ್ದು, ಹೊಲಗಳಲ್ಲೇ ಹೆಚ್ಚು ಹಾನಿಯಾಗಿದೆ. ಹೊಲ ಮಾಡು ವವರಿಗೆ ನೇರವಾಗಿ ಪರಿಹಾರ ನೀಡುವಂತೆ ಡಿಸಿ ಅವರಿಗೆ ಮನವಿ ಮಾಡಿದರು. ಕುಂಬಳೂರಿನಲ್ಲಿ ರೈತ ಕೋಣನತಂಬಿಗಿ ಕರಿಯಪ್ಪ ಅವರು 10 ಎಕರೆ ಲ್ಯಾವಣಿ ಹೊಲ ಮಾಡಿದ್ದು, ಭತ್ತದ ಬೆಳೆ ಬಹಳ ಚನ್ನಾಗಿಯೇ ಇತ್ತು, ಆದರೀಗ ಪೂರ್ತಿ ಹೊಲ ನೆಲಕಚ್ಚಿದೆ ಎಂದು ಡಿಸಿ ಎದುರು ಕಣ್ಣೀರಿಟ್ಟರು.

ನಾಗೋಳ್‌ ಧನಂಜಯ 11 ಎಕರೆ, ಕೆ. ಆಂಜನೇಯ 10 ಎಕರೆ, ಲೋಕಾಪುರ ಆಂಜನೇಯ 10 ಎಕರೆ ಮತ್ತು ವಿನಾಯಕನಗರ ಕ್ಯಾಂಪಿನ ಹಲಗೇರಿ ಕರಿಬಸಪ್ಪ 7 ಎಕರೆ ಲ್ಯಾವಣಿ ಹೊಲ ಮಾಡಿದ್ದರು. ಮಳೆಯಿಂದಾಗಿ ಬಹಳ ನಷ್ಟವಾಗಿದೆ ಸರ್‌ ಎಂದು ಡಿಸಿ ಅವರಿಗೆ ತಿಳಿಸಿದರು. 

ರೈತರನ್ನು ಸಮಾಧಾನಪಡಿಸಿದ ಜಿಲ್ಲಾಧಿಕಾರಿ ಮಹಾಂತೇಶ್‌ ಬೀಳಗಿ ಅವರು, ಪ್ರಕೃತಿ ವಿಕೋಪಕ್ಕೆ ಯಾರೂ ಹೊಣೆ ಅಲ್ಲ. ನಿಮಗೆ ಪರಿಹಾರ ನೀಡಲು ಪ್ರಯತ್ನಿಸುತ್ತೇನೆಂದರು.

ಗ್ರೇಡ್‌-2 ತಹಶೀಲ್ದಾರ್‌ ಶಶಿಧರಯ್ಯ, ಡಿಸಿ ಆಪ್ತ ಸಹಾಯಕ ಬಿ.ಡಿ. ಮರುಳಸಿದ್ದಪ್ಪ, ಉಪತಹಶೀಲ್ದಾರ್‌ ಆರ್‌. ರವಿ, ಕಂದಾಯ ನಿರೀಕ್ಷಕ ಆನಂದ್‌, ಗ್ರಾಮ ಲೆಕ್ಕಾಧಿಕಾರಿಗಳಾದ ಶ್ರೀಧರ್‌, ಅಣ್ಣಪ್ಪ, ಗ್ರಾಮ ಸಹಾಯಕ ಮಾರುತಿ,  ರೈತರಾದ ಕರಡಿ ಸೋಮಶೇಖರ್‌, ಕೋಟ್ಯಾಳ್‌ ಸಿದ್ದಪ್ಪ, ಸಾಲಿ ಹನುಮಂತಪ್ಪ, ರುದ್ರಣ್ಣರ ಹನುಮೇಶ್‌, ಕೆಂಚಪ್ಪರ ಷಣ್ಮುಖಪ್ಪ, ಕ್ಯಾಂಪಿನ ಕುಂಬಾರ್‌ ಬಸವರಾಜ್‌ ಈ ವೇಳೆ ಹಾಜರಿದ್ದರು.

error: Content is protected !!