ಎಸ್ಸೆಸ್ ವೈದ್ಯಕೀಯ ಮಹಾವಿದ್ಯಾಲಯದ ಸಾಂಸ್ಕೃತಿಕ ಸಮಾರಂಭದಲ್ಲಿ ಡಾ. ಸತ್ಯಮೂರ್ತಿ
ದಾವಣಗೆರೆ, ನ. 18- ವೈದ್ಯಕೀಯ ವೃತ್ತಿ ಯಲ್ಲಿ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆ ಗಳು ವಿದ್ಯಾರ್ಥಿಗಳಲ್ಲಿ ಮಾನಸಿಕ ಸಮತೋಲನ ಕಾಪಾಡುತ್ತವೆ. ವೈದ್ಯಕೀಯ ಶಿಕ್ಷಣದಲ್ಲಿ ಶಿಸ್ತು, ನಿಷ್ಠೆ, ಸೇವಾ ಹಾಗೂ ಸಮರ್ಪಣಾ ಭಾವಗಳನ್ನು ಮೈಗೂ ಡಿಸಿಕೊಳ್ಳಬೇಕೆಂದು ಬೆಂಗಳೂರಿನ ರಾಜರಾಜೇಶ್ವರಿ ವೈದ್ಯಕೀಯ ವಿದ್ಯಾಲಯದ ಡೀನ್ ಡಾ. ಸತ್ಯ ಮೂರ್ತಿ ಅವರು ತಮ್ಮ ವಿದ್ಯಾರ್ಥಿ ಜೀವನದ ಅನುಭವದ ಉದಾಹರಣೆಗಳ ಮೂಲಕ ತಿಳಿಸಿದರು.
ನಗರದ ಎಸ್ಸೆಸ್ ವೈದ್ಯಕೀಯ ಮಹಾವಿದ್ಯಾ ಲಯ ಮತ್ತು ಸಂಶೋಧನಾ ಕೇಂದ್ರದ ನಿನ್ನೆ ಹಮ್ಮಿಕೊಂಡಿದ್ದ ವಾರ್ಷಿಕ ಸಾಂಸ್ಕೃತಿಕ ಕಾರ್ಯ ಕ್ರಮ `ಮನ್ವಂತರ’ದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಅವರು ಮಾತನಾಡಿದರು.
ವೈದ್ಯ ವಿದ್ಯಾರ್ಥಿಗಳು ಸಾಮಾಜಿಕ ಕಾಳಜಿಯಿಂದ ಕಾರ್ಯನಿರ್ವಹಿಸಿ, ಅವರ ತಂದೆ-ತಾಯಿ, ವಿದ್ಯಾಲಯ ಹಾಗೂ ಸಮಾಜದ ಮೌಲ್ಯಗಳನ್ನು ಎತ್ತಿ ಹಿಡಿಯಲು ದೇಶದ ಉತ್ತಮ ನಾಗರಿಕರಾಗಬೇಕೆಂದು ಆಶಿಸಿದರು.
ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಬಾಪೂಜಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಡಾ.ಸಂಪನ್ನ ಮುತಾಲಿಕ್ ಮಾತನಾಡಿ, ವೈದ್ಯರ ಸಾಮಾಜಿಕ ಜವಾಬ್ದಾರಿಗಳನ್ನು ಉದ್ದೇಶಿಸಿ ತಮ್ಮ ವಿದ್ಯಾರ್ಥಿ ಜೀವನದ ಕೆಲವು ಅನುಭವದ ಮೆಲುಕು ಹಾಕುತ್ತಾ, ಹಾಸ್ಯ ಚಟಾಕಿ ಮತ್ತು ಕನ್ನಡ ಶಾಯಿರಿ ಮೂಲಕ ಉಪದೇಶಿಸಿದರು.
ಎಸ್ಸೆಸ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಪ್ರಾಂಶುಪಾಲ ಡಾ. ಬಿ.ಎಸ್.ಪ್ರಸಾದ್ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮಾತನಾಡಿ, ವೈದ್ಯಕೀಯ ಜೀವನದಲ್ಲಿ ಶೈಕ್ಷಣಿಕ ಚಟುವಟಿಕೆಯ ಜೊತೆಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಬಹುಮುಖ್ಯ ಪಾತ್ರ ವಹಿಸುವುದರ ಬಗ್ಗೆ ಭವಿಷ್ಯದ ವೈದ್ಯರೊಂದಿಗೆ ಹಂಚಿಕೊಂಡರು.
ವೈದ್ಯಕೀಯ ನಿರ್ದೇಶಕ ಡಾ.ಎನ್.ಕೆ.ಕಾಳಪ್ಪನವರ್, ಉಪ ಪ್ರಾಂಶುಪಾಲರುಗಳಾದ ಡಾ.ಅರುಣ ಅಜ್ಜಪ್ಪ, ಡಾ. ಶಶಿಕಲಾ ಪಿ. ಕೃಷ್ಣ ಮೂರ್ತಿ, ವಿದ್ಯಾರ್ಥಿ ಸಂಘದ ಛೇರ್ಮನ್ ಡಾ. ಎಮ್. ಬಸವರಾಜಪ್ಪ, ಉಪ ಛೇರ್ಮನ್ ಡಾ. ವಿಜಯಕುಮಾರ ಜತ್ತಿ, ಡಾ.ಹರೀಶ್ ಕುಮಾರ, ವಿದ್ಯಾರ್ಥಿ ಕಾರ್ಯದರ್ಶಿ ಡಾ. ಬಿ.ಎಂ ತುಷಾರ್, ಡಾ. ಕ್ಲೆಮೆಂಟಿನಾ, ಶ್ರವಣ, ಸೃಷ್ಟಿ ಮತ್ತು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.