ಪುಸ್ತಕಗಳು ಸಾರಸ್ವತ ಲೋಕದ ಆತ್ಮಗಳು

ಪುಸ್ತಕಗಳನ್ನು ಕೊಳ್ಳೆ ಹೊಡೆಯಿರಿ

ನಿಮ್ಮ ಕಾಲೇಜಿನ ಗ್ರಂಥಾಲಯಗಳಲ್ಲಿನ ಪುಸ್ತಕಗಳನ್ನು ಕೊಳ್ಳೆ ಹೊಡಿಯಿರಿ ಎಂದು ಡಾ.ಎಂ.ಜಿ. ಈಶ್ವರಪ್ಪ ವಿದ್ಯಾರ್ಥಿಗಳಿಗೆ ಕರೆ ನೀಡಿದರು. 

ಗ್ರಂಥಾಲಯಗಳ ಒಳಗೆ ಕುಳಿತುಕೊಳ್ಳಲು ಜಾಗವಿರದಂತೆ ವಿದ್ಯಾರ್ಥಿಗಳು ತುಂಬಿಕೊಂಡಿರಬೇಕು .ಅಲ್ಲಿನ ಪುಸ್ತಕಗಳನ್ನು ಓದಿ ಅಲ್ಲಿನ ಲೇಖಕರನ್ನು ನಿಮ್ಮವರನ್ನಾಗಿ ಮಾಡಿಕೊಳ್ಳಿ. ಕಾಲೇಜಿನಲ್ಲಿರುವ ನಿಮ್ಮ ಓಡಾಡುವ ಲೈಬ್ರರಿಗಳಾದ ಅಧ್ಯಾಪಕರುಗಳ ಸಲಹೆ, ಮಾರ್ಗದರ್ಶನ ಪಡೆಯಿರಿ ಎಂದು ಸಲಹೆ ನೀಡಿದರು.  

ವಿದ್ಯಾರ್ಥಿಗಳು ತರಗತಿಗಳಿಲ್ಲ ಎಂದರೆ ಮುಖ್ಯವಾಗಿ ಗ್ರಂಥಾಲಯದಲ್ಲಿರಬೇಕು.  ಇಲ್ಲವೇ ಆಟದ ಅಂಕಣದಲ್ಲಿರಬೇಕು ಎಂದರು.

`ನಮ್ಮ ನಡಿಗೆ ಪುಸ್ತಕದ ಕಡೆಗೆ’ ಕಾರ್ಯಕ್ರಮದಲ್ಲಿ ಡಾ. ಎಂ.ಜಿ. ಈಶ್ವರಪ್ಪ ವಿಶ್ಲೇಷಣೆ

ದಾವಣಗೆರೆ, ನ.18- ಪುಸ್ತಕ ಗಳು  ಸಾರಸ್ವತ ಲೋಕದ ಆತ್ಮಗಳು. ಅಂತಹ ಆತ್ಮಗ ಳನ್ನು ಮತ್ತೆ ಮತ್ತೆ ದರ್ಶನ ಮಾಡುವುದು ಪುಣ್ಯದ ಕೆಲಸ ಎಂದು ಬಾಪೂಜಿ ವಿದ್ಯಾಸಂಸ್ಥೆಯ ಆಡಳಿತ ನಿರ್ದೇಶ ಕರೂ, ಜಾನಪದ ತಜ್ಞರೂ ಆದ ಡಾ.ಎಂ.ಜಿ. ಈಶ್ವರಪ್ಪ ಹೇಳಿದರು.

ನಗರದ ಎ.ವಿ. ಕಮಲಮ್ಮ ಮಹಿಳಾ ಕಾಲೇಜಿನಲ್ಲಿ ಗುರುವಾರ ರಾಷ್ಟ್ರೀಯ ಗ್ರಂಥಾ ಲಯ ಸಪ್ತಾಹದ ಅಂಗವಾಗಿ ಹಮ್ಮಿ ಕೊಂಡಿದ್ದ `ನಮ್ಮ ನಡಿಗೆ ಪುಸ್ತಕದ ಕಡೆಗೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವ್ಯಕ್ತಿಯ ಕೈಯಲ್ಲಿ ಪುಸ್ತಕವಿದ್ದರೆ ಆತ ವಿದ್ಯಾರ್ಥಿ ಎಂದರ್ಥ. ಆದ್ದರಿಂದ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಯಾವಾಗಲೂ ಪುಸ್ತಕವನ್ನು ಜೊತೆಯಲ್ಲಿಟ್ಟು ಕೊಂಡಿರಬೇಕು.  ಪುಸ್ತಕಂ ಹಸ್ತ ಲಕ್ಷಣಂ ಎನ್ನುವ ಮಾತಿನಂತೆ ವಿದ್ಯಾರ್ಥಿಗಳಿಗೆ ನಿಜವಾದ ಶೋಭೆ ತರುವುದು ಪುಸ್ತಕ ಮಾತ್ರ ಎಂದು ಪ್ರತಿಪಾದಿಸಿದರು.

ಒಂದು ಪುಸ್ತಕದ ಒಡೆಯ ನಾಗಿದ್ದರೆ ಅವನು ಸರಸ್ವತಿಯ ಆರಾಧಕ ಎಂದರ್ಥ. ಬೇರೆಯವರ ಬಳಿ ಪುಸ್ತಕ ಅಥವಾ ಪೆನ್ನು ಪಡೆಯುವುದು ಶೋಭೆಯಲ್ಲ. ವಿದ್ಯಾರ್ಥಿಗಳು ತರಗತಿಯಲ್ಲಿ ಪುಸ್ತಕಗಳನ್ನು ಓದುವ ಜೊತೆಗೆ, ತರಗತಿಗಳ ಹೊರತಾಗಿಯೂ ಓದುವ
ಹವ್ಯಾಸ ರೂಢಿಸಿಕೊಳ್ಳ ಬೇಕು. ಕಂಬೈನ್ಡ್‌ ಸ್ಟಡಿ ಮೂಲಕ ಜ್ಞಾನ ಹೆಚ್ಚಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.

ನೆಹರೂ ಅವರ ಜನ್ಮ ದಿನದ ಅಂಗವಾಗಿ ಗ್ರಂಥಾಲಯ ಸಪ್ತಾಹ ಆಚರಿಸಲಾಗುತ್ತಿದೆ. ನೆಹರೂ ಅವರು ಬಹುದೊಡ್ಡ ವಿದ್ವಾಂಸರು. ಆದ್ದರಿಂದಲೇ ಅವರನ್ನು ಪಂಡಿತ್ ಜವಾಹರ್ ಲಾಲ್ ನೆಹರೂ ಎನ್ನಲಾಗುತ್ತದೆ. ತಮ್ಮ ಅಮೋಘ  ಪಾಂಡಿತ್ಯದಿಂದ ಅನೇಕ ಪುಸ್ತ ಗಳನ್ನು ಬರೆಯುವ ಮೂಲಕ ಭಾರತವನ್ನು ಪ್ರಪಂಚಕ್ಕೆ ಪರಿಚಯಿ ಸಿದ ದೊಡ್ಡ ವಿದ್ವಾಂಸರು ಹಾಗೂ ಆಡಳಿತಗಾರರಾದ ನೆಹರೂ ಅವರ ಪುಸ್ತಕಗಳು ಕಾಲೇಜಿನ ಲೈಬ್ರರಿಗಳಲ್ಲಿ ಲಭ್ಯವಿದ್ದು, ಅದನ್ನು ಓದುವಂತೆ ಈಶ್ವರಪ್ಪ ವಿದ್ಯಾರ್ಥಿಗಳಿಗೆ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಬಿ.ಪಿ. ಕುಮಾರ್ ಮಾತನಾಡುತ್ತಾ, ಪ್ರಸ್ತುತ ದಿನಗಳಲ್ಲಿ ಮೊಬೈಲ್‌ಗಳ ಅತಿಯಾದ ಬಳಕೆಯಿಂದಾಗಿ ಸಂಸ್ಕೃತಿ, ಸಂಸ್ಕಾರ, ವೈಚಾರಿಕತೆ ಒಳಗೊಂಡ ಪುಸ್ತಕಗಳನ್ನು ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಗ್ರಂಥಾಲಯಗಳು ಪುಸ್ತಕಗಳ ಜೈಲುಗಳಾಗಿವೆ ಎಂದರು.

ಸೀಮಿತವಾಗಿ ಮೊಬೈಲ್ ಬಳಸಿ, ಭವಿಷ್ಯ ಉಜ್ವಲಗೊಳಿಸಿಕೊಳ್ಳಲು ಪ್ರತಿ ದಿನ ಕನಿಷ್ಟ ಒಂದು ತಾಸು ಪುಸ್ತಕ ಓದಿ. ಇದರಿಂದಾಗಿ ಜ್ಞಾನಾರ್ಜನೆ ಹೆಚ್ಚಾಗುತ್ತದೆ. ಆ ಮೂಲಕ ಪ್ರಜ್ಞಾವಂತರಾಗಿ, ನಾಡಿಗೆ, ಹೆತ್ತವರಿಗೆ ಆದರ್ಶ ವ್ಯಕ್ತಿಗಳಾಗಿ ಬಾಳಿ ಎಂದು ಆಶಿಸಿದರು.

ಗ್ರಂಥಪಾಲಕ ಹೆಚ್.ಸತೀಶ್ ಮಾತನಾಡಿ, ನೆಹರೂ ಅವರ ಜನ್ಮ ದಿನದ ಅಂಗವಾಗಿ ಪ್ರತಿ ವರ್ಷ ನ.14 ರಿಂದ 20ರವರೆಗೆ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಆಚರಿಸಲಾಗುತ್ತಿದೆ.  ಗ್ರಂಥಾಲಯಗಳಿಂದ ದೂರ ಉಳಿಯುತ್ತಿರುವ ಓದುಗರನ್ನು ಹತ್ತಿರ ಸೆಳೆಯಲು 1968 ರಿಂದ ಈ ಕಾರ್ಯಕ್ರಮ ಆಚರಿಸಲಾಗುತ್ತಿದೆ ಎಂದರು. ಉಪನ್ಯಾಸಕರಾದ ಆರ್.ಜಿ.ಕವಿತಾ ಅತಿಥಿಗಳನ್ನು ಸ್ವಾಗತಿಸಿದರು.

error: Content is protected !!