ದಾವಣಗೆರೆ, ಆ.17- ಮುಂಬರುವ ಜಿ.ಪಂ., ತಾ.ಪಂ. ಚುನಾವಣೆಯಲ್ಲಿ ಬಹುಜನ ಸಮಾಜ ಪಾರ್ಟಿಯ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್. ಮುನಿಯಪ್ಪ ತಮ್ಮ ಇಂಗಿತ ವ್ಯಕ್ತಪಡಿಸಿದರು.
ನಗರದ ಹದಡಿ ರಸ್ತೆಯ ಹಳೇ ಜಿಲ್ಲಾ ಖಜಾನೆ ಕಚೇರಿ ಎದುರಿಗಿನ ಕಟ್ಟಡದಲ್ಲಿ ಬಹುಜನ ಸಮಾಜ ಪಕ್ಷದ ಜಿಲ್ಲಾ ಕಾರ್ಯಾಲಯ ಉದ್ಘಾಟಿಸಿ, ನಂತರ ರೋಟರಿ ಬಾಲಭವನದಲ್ಲಿ ನಡೆದ ಪಕ್ಷದ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದರು.
ಸ್ಥಳೀಯ ಸಂಸ್ಥೆಗಳಿಂದ ಹಿಡಿದು ಜಿ.ಪಂ., ತಾ.ಪಂ., ವಿಧಾನ ಸಭೆ ಚುನಾವಣೆಗಳಲ್ಲಿ ಕೂಡ ಬಹುಜನ ಸಮಾಜ ಪಾರ್ಟಿ ವತಿಯಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆ ಸಿದ್ಧತೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.
ದೇಶದ ಶೇ.85 ರಷ್ಟು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗದವರಿದ್ದಾರೆ. ಇವರು ಮನಸ್ಸು ಮಾಡಿದರೆ ಹಳ್ಳಿಯಿಂದ ದಿಲ್ಲಿಯವರೆಗೆ ಅಧಿಕಾರ ನಡೆಸುವ ಸಾಮರ್ಥ್ಯವಿದೆ. ಆದರೆ ಇವರು ಅಧಿಕಾರಕ್ಕೆ ಬರಬಾರದೆಂದು ವ್ಯವಸ್ಥಿತವಾಗಿ ಹತ್ತಿಕ್ಕುವ ಹುನ್ನಾರಗಳು ನಡೆಯುತ್ತಿವೆ ಎಂದು ದೂರಿದರು.
ಶೇ.15 ರಷ್ಟಿರುವ ಜನರು ಬಹುಸಂಖ್ಯಾತರಾಗಿರುವ ಎಸ್ಸಿ, ಎಸ್ಟಿ, ಅಲ್ಪಸಂಖ್ಯಾತರು, ಹಿಂದುಳಿದವರನ್ನು ಒಂದಾಗಲು ಬಿಡುತ್ತಿಲ್ಲ. ಅಧಿಕಾರವನ್ನು ತಾವೇ ಅನುಭವಿಸಬೇಕೆಂಬ ದುರಾಸೆ ಅವರದ್ದಾಗಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಪ.ಜಾತಿ, ಪ.ಪಂಗಡ, ಅಲ್ಪಸಂಖ್ಯಾತರು, ಹಿಂದುಳಿದವರನ್ನು ಕೇವಲ ಓಟ್ ಬ್ಯಾಂಕ್ ಆಗಿ ಮಾಡಿಕೊಂಡಿವೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಹುಜನ ಸಮಾಜ ಪಾರ್ಟಿಯ ಜಿಲ್ಲಾಧ್ಯಕ್ಷ ಡಿ. ಹನುಮಂತಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪಕ್ಷದ ರಾಜ್ಯ ಕಾರ್ಯದರ್ಶಿ ಡಾ. ಗಿರೀಶ್, ಹೆಚ್. ಮಲ್ಲೇಶ್ ಸೇರಿದಂತೆ ಮುಖಂಡರುಗಳಾದ ವೆಂಕಟೇಶ್ ಐಹೊಳೆ, ಪರಶುರಾಂ, ಶ್ರೀಮತಿ ಯಶೋಧಮ್ಮ, ನಂದೀಶ್, ಎ.ಪಿ. ನದಾಫ್, ರಂಗನಾಥ, ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.