ಮಲೇಬೆನ್ನೂರು, ನ.17- ಮಂಗಳವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಕಟಾವಿಗೆ ಬಂದಿದ್ದ ಸುಮಾರು 1 ಸಾವಿರ ಎಕರೆ ಭತ್ತದ ಬೆಳೆ ನೆಲ ಕಚ್ಚಿದ್ದು, ಅಪಾರ ನಷ್ಟ ಸಂಭವಿಸಿದೆ.
ಈ ಬಾರಿ ಎಲ್ಲಾ ಕಡೆ ಭತ್ತದ ಬೆಳೆ ಯಾವುದೇ ರೋಗ ಬಾಧೆ ಇಲ್ಲದೆ, ಸಮೃದ್ಧಿಯಾಗಿ ಬೆಳೆದಿದ್ದವು.
ರೈತರು ಉತ್ತಮ ಇಳುವರಿಯನ್ನು ನಿರೀಕ್ಷಿಸಿದ್ದರು. ಇಂತಹ ಸಂದರ್ಭದಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಂದಾಯ ಇಲಾಖೆ ಪ್ರಕಾರ ಮಲೇಬೆನ್ನೂರು, ಹೋಬಳಿಯ ಆದಾಪುರದಲ್ಲಿ 50, ನಿಟ್ಟೂರಿನಲ್ಲಿ 50, ಹರಳಹಳ್ಳಿಯಲ್ಲಿ 100, ಹಾಲಿವಾಣ ದಲ್ಲಿ 20, ಸಂಕ್ಲೀಪುರದಲ್ಲಿ 30, ಕುಣೆಬೆಳಕೆರೆಯಲ್ಲಿ 40, ನಂದಿತಾವರೆಯಲ್ಲಿ 35, ಬೂದಿಹಾಳ್‌ನಲ್ಲಿ 25, ಕುಂಬಳೂರಿನಲ್ಲಿ 50, ಜಿಗಳಿಯಲ್ಲಿ 50, ಯಲವಟ್ಟಿಯಲ್ಲಿ 35, ಧೂಳೆಹೊಳೆಯಲ್ಲಿ 30, ಇಂಗಳಗೊಂದಿಯಲ್ಲಿ 25, ಪಾಳ್ಯದಲ್ಲಿ 15 ಎಕರೆ ಸೇರಿದಂತೆ ಸುಮಾರು 600 ಎಕರೆ ಭತ್ತದ ಬೆಳೆ ನೆಲಕಚ್ಚಿದೆ ಎಂದು ಕಂದಾಯ ನಿರೀಕ್ಷಕ ಆನಂದ್ §ಜನತಾವಾಣಿ¬ ಗೆ ಮಾಹಿತಿ ನೀಡಿದ್ದಾರೆ.
ನೆಲಕಚ್ಚಿರುವ ಭತ್ತದ ಬೆಳೆಯ ಅಂದಾಜು ನಷ್ಟ 30 ಲಕ್ಷ ರೂ. ಎನ್ನಲಾಗಿದೆ. ಭಾನುವಳ್ಳಿ, ಕೆ. ಬೇವಿನಹಳ್ಳಿ, ಬನ್ನಿ ಕೋಡು, ಕೊಕ್ಕನೂರು, ನಂದಿಗುಡಿ ಇನ್ನಿತರೆ ಗ್ರಾಮಗ ಳಲ್ಲೂ ಭತ್ತದ ಬೆಳೆ ನೆಲಕಚ್ಚಿರುವ ಬಗ್ಗೆ ವರದಿಯಾಗಿದೆ. ಹರಿಹರ ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಅವರು ಹಾಲಿವಾಣ, ಹರಳಹಳ್ಳಿ, ನಿಟ್ಟೂರಿನಲ್ಲಿ ಭತ್ತ ಚಾಪೆ ಹಾಸಿರುವುದನ್ನು ಪರಿಶೀಲಿಸಿ, ನೆಹರು ನಗರ ಕ್ಯಾಂಪ್‌ನಲ್ಲಿ ವಾಸದ ಮನೆ ಕುಸಿದು ಬಿದ್ದಿರುವುದನ್ನು ವೀಕ್ಷಿಸಿದರು.
ಬೆಳೆ ಹಾನಿ ಬಗ್ಗೆ ಕೃಷಿ ಇಲಾಖೆಯ ಇನಾಯತ್ ಸ್ಥಳ ಪರಿಶೀಲಿಸಿದರು. ಹರಳಹಳ್ಳಿ ವೃತ್ತದಲ್ಲಿ ಗ್ರಾಮ ಲೆಕ್ಕಾಧಿಕಾರಿ ಅಣ್ಣಪ್ಪ, ಕುಂಬಳೂರು ವೃತ್ತದಲ್ಲಿ ಶ್ರೀಧರ್, ಜಿಗಳಿ ವೃತ್ತದಲ್ಲಿ ಸುಭಾನಿ ಅವರು ಬೆಳೆ ಹಾನಿ ಕುರಿತು ವರದಿ ನೀಡಿದ್ದಾರೆ ಎಂದು ಕಂದಾಯ ನಿರೀಕ್ಷಕ ಆನಂದ್ ತಿಳಿಸಿದರು.