ಪರಿಶ್ರಮದ ಮೇಲೆ ನಂಬಿಕೆ ಇರಬೇಕು

ಆವರಗೆರೆಯ ಶ್ರೀ ಸಿದ್ದಲಿಗೇಶ್ವರ ಶಾಲೆಯ ಕಾರ್ಯಕ್ರಮದಲ್ಲಿ ಈಶ್ವರಮ್ಮ ಪ್ರೌಢಶಾಲೆಯ ಉಪ ಪ್ರಾಂಶುಪಾಲರಾದ ಶಶಿರೇಖಾ

ದಾವಣಗೆರೆ, ನ.17- ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ದಾವಣಗೆರೆ ವಿಜ್ಞಾನ ಕೇಂದ್ರ, ಕಾಯಕ ಯೋಗಿ ಶ್ರೀ ಬಸವ ಪರಿಸರ ವೇದಿಕೆ ಮತ್ತು ಶ್ರೀ ಸಿದ್ದಲಿಂಗೇಶ್ವರ ವಿದ್ಯಾಸಂಸ್ಥೆ (ಆವರಗೆರೆ) ಇವರುಗಳ ಸಂಯುಕ್ತಾಶ್ರಯದಲ್ಲಿ ಮಕ್ಕಳ ದಿನಾಚರಣೆಯನ್ನು ಶ್ರೀ ಗುರು ಪಂಚಾಕ್ಷರಿ ಗವಾಯಿ ಮೆಮೋರಿಯಲ್ ಕಾಂಪೋಜಿಟ್ ಶಾಲೆಯಲ್ಲಿ ಆಚರಿಸಲಾಯಿತು. 

ಈಶ್ವರಮ್ಮ ಪ್ರೌಢ ಶಾಲೆಯ ಉಪ ಪ್ರಾಂಶುಪಾಲ ರಾದ ಶ್ರೀಮತಿ ಜಿ.ಎಸ್. ಶಶಿರೇಖಾ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು. ಸಾಧನೆ ಮಾಡಿದ ವ್ಯಕ್ತಿಗಳ ಉದಾಹರಣೆ ನೀಡಿದ ಅವರು, ಮಕ್ಕಳಿಗೆ ಪರಿಶ್ರಮ ಮತ್ತು ಅದೃಷ್ಟದ ವ್ಯತ್ಯಾಸವನ್ನು ತಿಳಿಸುವ ಮೂಲಕ ಮಕ್ಕಳಿಗೆ ಅವರ ಪರಿಶ್ರಮದ ಮೇಲೆ ನಂಬಿಕೆ ಇರಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕರ್ನಾಟಕ ವಿಜ್ಞಾನ ಪರಿಷತ್‌ ಜಿಲ್ಲಾ ಸಮಿತಿ ಸದಸ್ಯರಾದ ಹೆಚ್. ಚಂದ್ರಪ್ಪ ಅವರು, ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಒತ್ತು ನೀಡಿದಂತಹ ಜವಾಹರಲಾಲ್ ನೆಹರೂರವರ ವ್ಯಕ್ತಿತ್ವದ ಬಗ್ಗೆ ಮಕ್ಕಳಿಗೆ ತಿಳಿಸುವ ಮೂಲಕ ಅಭಿಪ್ರಾಯವನ್ನು ಹಂಚಿಕೊಂಡರು.

ಮತ್ತೋರ್ವ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಿಲ್ಲಾ ಬಾಲ ವಿಜ್ಞಾನಿ ಪ್ರಶಸ್ತಿ ಪುರಸ್ಕೃತ ಕು|| ಆಪ್ತಾ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳಾದ ನಾವು ಸಿಕ್ಕಿರುವ ಅವಕಾಶಗಳನ್ನು ಬಳಸಿಕೊಳ್ಳಬೇಕು. ಸೋಲು ಮತ್ತು ಗೆಲುವಿಗೆ ಒತ್ತು ಕೊಡದೆ, ಪ್ರಯತ್ನವನ್ನು ಮಾಡಬೇಕು ಎಂದು ತಿಳಿಸಿದರು.

ಇನ್ನೋರ್ವ ಅತಿಥಿಯಾಗಿ ಆಗಮಿಸಿದ್ದ ಆರ್.ಎಲ್. ಲಾ ಕಾಲೇಜಿನ ಪ್ರಾಧ್ಯಾಪಕರಾದ ಕಾ|| ಶಾಂತಿಕ ಮುರುಡೇಶ್ವರ್ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯು ಗುರಿಯನ್ನು ಹೊಂದಿರಬೇಕು. ಆ ಗುರಿಯ ಕಡೆಗೆ ಗಮನ ಮತ್ತು ಪ್ರಯತ್ನ ಇದ್ದರೆ ಮಾತ್ರ ಗುರಿ ಸಾಧಿಸಲು ಸಾಧ್ಯ ಎಂದು ತಿಳಿಸಿದರು.

ಬಿ.ಐ.ಇ.ಟಿ. ಕಾಲೇಜು ಆಂಗ್ಲ ಭಾಷಾ ಉಪನ್ಯಾಸಕರು ಹಾಗೂ ಶಾಲೆಯ ನಿರ್ದೇಶಕ ರಾದ ಶ್ರೀಮತಿ ಎ.ಹೆಚ್. ಸುಗ್ಗಲಾದೇವಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಜೀವನದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಮನಸ್ಸು ಮಗು ತರಹ ಇರಬೇಕು ಹಾಗೂ ಎಲ್ಲಾ ವಿಷಯಗಳಲ್ಲು ಕುತೂಹಲ ಹೊಂದಿರಬೇಕು. ಆಗ ಮಾತ್ರ ಹೆಚ್ಚಿನ ವಿಷ ಯಗಳನ್ನು ತಿಳಿಯಬಹುದು ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ ಕಾರ್ಯದರ್ಶಿ ಎಂ. ಗುರುಸಿದ್ದಸ್ವಾಮಿ,  ಶಾಲೆಯ ಹಿರಿಯ ವಿದ್ಯಾರ್ಥಿಗಳಾದ ಸುಶ್ಮಿತಾ ಮತ್ತು ಅನುಷ ಅವರು ಉಪಸ್ಥಿತರಿದ್ದರು.

ಹತ್ತನೇ ತರಗತಿಯ ವಿದ್ಯಾರ್ಥಿನಿ
ಕು|| ಶ್ರೀದೇವಿ ನಿರೂಪಿಸಿದರು. ಸ್ಪೂರ್ತಿ ಮತ್ತು ಸಂಗಡಿಗರು ಪ್ರಾರ್ಥನೆ ಮಾಡಿದರು. ಕು|| ಚೇತನ್ ಎಸ್.ಪಿ. ವಂದಿಸಿದರು. 

error: Content is protected !!