ಸ್ವಾತಂತ್ರ್ಯ ಹುತಾತ್ಮರ ಸ್ಮರಣೆ ನಾಗರಿಕರ ಆದ್ಯಕರ್ತವ್ಯ : ಶಾಸಕ ಎಸ್. ರಾಮಪ್ಪ

ಹರಿಹರ, ಆ.15- ದೇಶದ ಉಳಿವಿಗಾಗಿ ಮತ್ತು ಬೆಳವಣಿಗೆಗಾಗಿ ತ್ಯಾಗ, ಬಲಿದಾನ ಮಾಡಿರುವ ಮಹಾತ್ಮರನ್ನು ಸ್ಮರಣೆ ಮಾಡುವುದು ಪ್ರತಿಯೊಬ್ಬ ನಾಗರಿಕರ ಆದ್ಯಕರ್ತವ್ಯವಾಗಿದೆ ಎಂದು ಶಾಸಕ ಎಸ್. ರಾಮಪ್ಪ ಹೇಳಿದರು.

ನಗರದ ಗಾಂಧಿ ಮೈದಾನದಲ್ಲಿ ನಡೆದ 75 ನೇ ಸ್ವಾತಂತ್ರ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಡುವುದಕ್ಕೆ ಲಕ್ಷಾಂತರ ಜನರು ತಮ್ಮ ಪ್ರಾಣವನ್ನು ಬಲಿದಾನ ಮಾಡಿ ದ್ದಾರೆ. ದೇಶದ ಒಳಿತಿಗಾಗಿ ಜನರಿಗೆ ಸ್ವಾತಂತ್ರ್ಯ ತಂದು ಕೊಟ್ಟಿದ್ದರಿಂದಾಗಿ ನೀರಾವರಿ, ತಂತ್ರಜ್ಞಾನ, ವಿಜ್ಞಾನ, ರಕ್ಷಣಾತ್ಮಕ ಹಾಗೂ ಆರ್ಥಿಕವಾಗಿ ದೇಶವೂ ಸಹ ಪ್ರಗತಿಯ ಹಾದಿಯಲ್ಲಿ ಸಾಗುತ್ತಿದೆ ಎಂದು ಹೇಳಿದರು. 

ತಹಶೀಲ್ದಾರ್‌ ಕೆ.ಬಿ. ರಾಮಚಂದ್ರಪ್ಪ ಧ್ವಜಾರೋಹಣ ಮಾಡಿ ಮಾತನಾಡಿ, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ಸೈನಿಕ, ಶಿಕ್ಷಣ, ರಕ್ಷಣೆ ಸೇರಿದಂತೆ ಹಲವು ವಿಭಾಗಗಳಲ್ಲಿ ದೊಡ್ಡ ಪ್ರಮಾಣದಲ್ಲಿ ದೇಶ ಪ್ರಗತಿಯಲ್ಲಿದೆ. ಕೊರೊನಾ ಸಮಯದಲ್ಲಿ ಲಸಿಕೆಯನ್ನು ವಿಶ್ವದ ಅನೇಕ ರಾಷ್ಟ್ರಗಳಿಗೆ ಸರಬರಾಜು ಮಾಡುವ ಮೂಲಕ ವಿಶ್ವದ ಜನರು ಆರೋಗ್ಯವಾಗಿ ಇರುವಂತೆ ಮಾಡುವ ಕೆಲಸ ಸಹ ಭಾರತದಲ್ಲಿ ಆಗಿದೆ ಎಂದು ಹೇಳಿದರು. 

ಈ ವೇಳೆ ಶಿಕ್ಷಣ ಕ್ಷೇತ್ರದಲ್ಲಿ ರಕ್ಷಿತ್‌ ಪಾಟೀಲ್, ಪ್ರೇಮಕುಮಾರಿ, ನಿವೃತ್ತ ಬಿಇಓ ಗುರುಬಸಪ್ಪ, ಬಸವರಾಜಯ್ಯ, ಸಾಹಿತ್ಯ ಕೆ.ಟಿ. ಗೀತಾ ಕೊಂಡಜ್ಜಿ, ಕ್ರೀಡೆ ಅನುಷಾ, ನಿರಂಜನ ಪಾಟೀಲ್, ಸಮಗ್ರ ಕೃಷಿ ಕೆ.ಜಿ. ರಂಗನಾಥ ಮಲೇಬೆನ್ನೂರು, ಪತ್ರಿಕೆ ನಟರಾಜ್ ಮಲೇಬೆನ್ನೂರು, ಹೆಚ್.ಮಂಜಾನಾಯ್ಕ್, ಸೇನೆ ಬೀರಪ್ಪ ಭಾನುವಳ್ಳಿ, ಸಾರ್ವಜನಿಕ ಅಶ್ರಫ್ ಅಲಿ, ಪೊಲೀಸ್ ನಾಗರಾಜ್, ಮಂಜುಳಾ ಸೇರಿದಂತೆ, ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ 58 ಸಾಧಕರಿಗೆ ಸನ್ಮಾನಿಸಿ, ಗೌರವಿಸಿದರು. 

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ರತ್ನ ಡಿ ಉಜ್ಜೇಶ್, ಎಪಿಎಂಸಿ ಅಧ್ಯಕ್ಷ ಮಂಜುನಾಥ್ ಪಾಟೀಲ್, ನಗರಸಭೆ ಉಪಾಧ್ಯಕ್ಷ ಎಂ.ಎಸ್. ಬಾಬುಲಾಲ್ ಸದಸ್ಯರಾದ ಶಂಕರ್ ಖಟಾವ್ಕರ್, ವಿರುಪಾಕ್ಷ, ನಾಗರತ್ನ, ಅಧಿಕಾರಿಗಳಾದ ಬಿಇಓ ಬಿ.ಸಿ. ಸಿದ್ದಪ್ಪ, ತಾ.ಪಂ ಇಓ ಜೆ.ಡಿ. ಗಂಗಾಧರನ್, ಸಿಪಿಐ ಸತೀಶ್‌ಕುಮಾರ್, ಪೌರಾಯುಕ್ತೆ ಎಸ್ ಲಕ್ಷ್ಮಿ, ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ರೇವಣಸಿದ್ದಪ್ಪ ಅಂಗಡಿ ಇತರರು ಹಾಜರಿದ್ದರು. 

error: Content is protected !!