ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಅಧ್ಯಕ್ಷತೆಯಲ್ಲಿ ಭೂಮಿ ಪೂಜೆ ನೆರವೇರಿಸಿದ ಸಂಸದ ಸಿದ್ದೇಶ್ವರ, ಶಾಸಕ ರವೀಂದ್ರನಾಥ್
ದಾವಣಗೆರೆ, ಆ.16- ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಹರಿಹರ ಮತ್ತು ದಾವಣಗೆರೆ ಅವಳಿ ನಗರಗಳಲ್ಲಿ ಕೈಗೊಂಡಿರುವ 8 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮ ಗಾರಿಗಳಿಗೆ ನಗರದಲ್ಲಿ ಇಂದು ವಿಧ್ಯುಕ್ತವಾಗಿ ಚಾಲನೆ ದೊರೆಯಿತು.
ದುಗ್ಗಮ್ಮ ದೇವಸ್ಥಾನ ಬಳಿಯ ನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂ 10 ರ ಸುಲ್ತಾನ್ ಪೇಟೆ, ಆನೆಪ್ಪ ಕೇರಿ, ಗಣೇಶ್ ಪೇಟೆ, ತ್ಯಾಪೇರ್ ಬೀದಿ, ದೇವಾಂಗ ಪೇಟೆ ಹಾಗೂ ಕೊತ್ವಾಲ್ ಪೇಟೆಯಲ್ಲಿ 95 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ನಿರ್ಮಾಣ ಮತ್ತು ರಸ್ತೆಯ ಎರಡು ಬದಿಯಲ್ಲಿ ಪೈಪ್ ಚರಂಡಿ ನಿರ್ಮಿಸುವ ಕಾಮಗಾರಿಗೆ ಶಾಸಕ ಎಸ್.ಎ. ರವೀಂದ್ರನಾಥ್, ಸಂಸದ ಜಿ.ಎಂ. ಸಿದ್ದೇಶ್ವರ, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಮೇಯರ್ ಎಸ್.ಟಿ. ವೀರೇಶ್, ಪಾಲಿಕೆ ಸದಸ್ಯ ರಾಕೇಶ್ ಜಾಧವ್ ಅವರುಗಳು ಭೂಮಿ ಪೂಜೆ ನೆರವೇರಿಸಿದರು.
ನಂತರ 63 ಲಕ್ಷ ರೂ. ವೆಚ್ಚದಲ್ಲಿ ಜೆ.ಹೆಚ್. ಪಟೇಲ್ ಬಡಾವಣೆಯಲ್ಲಿ ಪಾರ್ಕ್ ಸಂಖ್ಯೆ 6 ರ ಬಲಭಾಗ ದಲ್ಲಿರುವ ಹೈಟೆನ್ಷನ್ ಲೈನ್ ಕೆಳಗಿರುವ ಬಫರ್ ಜೋನ್ ಗೆ ಚೈನ್ ಲಿಂಕ್ ಫೆನ್ಸಿಂಗ್ ಅಳವಡಿಸಿ ವಾಕಿಂಗ್ ಪಾತ್ ನಿರ್ಮಿಸುವ ಕಾಮಗಾರಿಗೆ ಚಾಲನೆ ನೀಡಲಾಯಿತು.
92 ಲಕ್ಷ ರೂ ವೆಚ್ಚದಲ್ಲಿ ವಾರ್ಡ್ ನಂ 40 ರಲ್ಲಿ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿ 5ನೇ ಕ್ರಾಸ್ ರಾಜಕಾಲುವೆ ಹತ್ತಿರವಿರುವ ಉದ್ಯಾನವನ ಅಭಿವೃದ್ಧಿ ಕಾಮಗಾರಿ, 36 ಲಕ್ಷ ರೂ ವೆಚ್ಚದಲ್ಲಿ ವಿನಾಯಕ ಬಡಾವಣೆ ಸೌಜನ್ಯ ಉದ್ಯಾನವನದ ನವೀಕರಣ ಕಾಮಗಾರಿ, 99 ಲಕ್ಷ ರೂ ವೆಚ್ಚದಲ್ಲಿ ಡಿ. ದೇವರಾಜ ಅರಸು ಬಡಾವಣೆಯ ‘ಬಿ’ ಬ್ಲಾಕ್‌ನಲ್ಲಿರುವ ಆಟದ ಮೈದಾನ ಅಭಿವೃದ್ಧಿ ಕಾಮಗಾರಿ, ಹರಿಹರದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ನಗರದ ಲೇಬರ್ ಕಾಲೋನಿಯಲ್ಲಿ ಉದ್ಯಾನವನದ ಅಭಿವೃದ್ಧಿ, 35 ಲಕ್ಷ ರೂ ವೆಚ್ಚದಲ್ಲಿ ಹರಿಹರದ ಕೈಲಾಸ ನಗರದಲ್ಲಿರುವ ಸಾರ್ವಜನಿಕ ಹಿಂದೂ ರುದ್ರಭೂಮಿ ಅಭಿವೃದ್ಧಿಗೆ ಚಾಲನೆ ದೊರೆಯಿತು.
ಇದೇ ವೇಳೆ 100 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ಜೆ.ಹೆಚ್. ಪಟೇಲ್ ಬಡಾವಣೆಯ ಮುಖ್ಯ ರಸ್ತೆ ಮತ್ತು ಡಿ ಬ್ಲಾಕ್‌ನ ಅಡ್ಡ ರಸ್ತೆಗಳಲ್ಲಿ ಮರು ಡಾಂಬರೀಕರಣ ಕಾಮಗಾರಿ, 90 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಜೆ.ಹೆಚ್. ಪಟೇಲ್ ಬಡಾವಣೆಯ ಡಬಲ್ ರಸ್ತೆಗೆ ಮರು ಡಾಂಬರೀಕರಣ ಕಾಮಗಾರಿ ಹಾಗೂ 60 ಲಕ್ಷ ರೂ. ವೆಚ್ಚದಲ್ಲಿ ನಡೆದಿರುವ ಬಸವೇಶ್ವರ ಬಡಾವಣೆಯಲ್ಲಿರುವ ಉದ್ಯಾನವನದ ಅಭಿವೃದ್ಧಿ ಕಾಮಗಾರಿ ಮತ್ತು 51 ಲಕ್ಷ ರೂ ವೆಚ್ಚದಲ್ಲಿ ಪೂರ್ಣಗೊಂಡಿರುವ ಬೀರೂರು-ಸಮ್ಮಸಗಿ ರಸ್ತೆಯ ಕೆಎಸ್ ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗದ ಡಿಸಿಎಂ ಟೌನ್ ಶಿಪ್ ವರೆಗೆ ರಸ್ತೆಯ ಮಧ್ಯದ ವಿಭಜಕದ ಅಲಂಕಾರಿಕ ಕೋನಿಕಲ್ ದೀಪಗಳನ್ನು ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ದೂಡಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಅಜ್ಜಂಪುರ ಶೆಟ್ರು ಮೃತ್ಯುಂಜಯ, ದೂಡಾ ಸದಸ್ಯರಾದ ದೇವಿರಮ್ಮ, ಪಾಲಿಕೆ ನಾಮನಿರ್ದೇಶನ ಸದಸ್ಯರಾದ ಹೆಚ್.ಸಿ. ಜಯ್ಯಮ್ಮ, ಶಿವನಗೌಡ ಪಾಟೀಲ್ ಸೇರಿದಂತೆ ಇತರರು ಇದ್ದರು.