ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಬಿ. ವಾಮದೇವಪ್ಪ ನಾಮಪತ್ರ ಸಲ್ಲಿಕೆ ನಂತರದ ಸಭೆಯಲ್ಲಿ ಬೆಂಬಲಿಗರ ವಿಶ್ವಾಸ
ದಾವಣಗೆರೆ, ಮಾ.29- ಜಿಲ್ಲೆಯಾದ್ಯಂತ ಕನ್ನಡ ಕಟ್ಟುವ ಕೆಲಸದ ಮುಖೇನ ಕನ್ನಡದ ತೇರನ್ನು ಯಶಸ್ವಿಯಾಗಿ ಎಳೆದಿರುವ ಹಾಗೂ ಜಿಲ್ಲಾ ಕಸಾಪದ ಏಳಿಗೆಗೆ ಶ್ರಮಿಸಿ, ಅಧ್ಯಕ್ಷ ಸ್ಥಾನಕ್ಕೆ ಅರ್ಹರಾಗಿರುವ ಬಿ. ವಾಮದೇವಪ್ಪ ಅವರನ್ನು ಅವಿರೋಧವಾಗಿ ಆಯ್ಕೆ ಮಾಡ ಬಹುದಾಗಿತ್ತು. ಚುನಾವಣೆ ಅವಶ್ಯವಿರಲಿಲ್ಲ ಎಂದು ವಾಮದೇವಪ್ಪ ಅವರ ಗುರು – ಹಿರಿಯರು, ಬೆಂಬಲಿಗ ಕನ್ನಡಾಭಿಮಾನಿಗಳು ಅಭಿಮಾನದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಲ್ಲದೇ, ಚುನಾವಣೆ ಎದುರಿಸುವ ಪರಿಸ್ಥಿತಿ ಇದ್ದರೂ ಸಹ ಅದರಲ್ಲಿ ಅವರ ಗೆಲುವು ಶತ ಸಿದ್ಧ ಎಂಬುದಾಗಿ ವಿಶ್ವಾಸ ಅಭಿವ್ಯಕ್ತಪಡಿಸಿದ್ದಾರೆ.
ನಗರದ ಅಪೂರ್ವ ಹೋಟೆಲ್ ಸಭಾಂಗಣದಲ್ಲಿ ಇಂದು ಜಿಲ್ಲಾ ಕಸಪಾ ಸ್ಥಾನದ ಸೇವಾಕಾಂಕ್ಷಿಯಾದ ಬಿ. ವಾಮದೇವಪ್ಪ ಅವರ ಬೆಂಬಲಿಗರ, ಸ್ನೇಹಿತರ ಸಭೆಯಲ್ಲಿ ವಾಮ ದೇವಪ್ಪ ಅವರ ಕನ್ನಡ ಸೇವೆ ಬಗ್ಗೆ ಗುರು-ಹಿರಿ ಯರು, ಬೆಂಬಲಿಗ ಕನ್ನಡಾಭಿಮಾನಿಗಳು ಗುಣ ಗಾನ ಮಾಡಿ, ಅಧ್ಯಕ್ಷರಾಗಿ ಆಯ್ಕೆಯಾಗಲೆಂಬ ಅಭಿಲಾಷೆಯೊಂದಿಗೆ ಶುಭ ಹಾರೈಸಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಪ್ರೊ. ಎಸ್.ಬಿ. ರಂಗನಾಥ, ಬಿ. ವಾಮದೇವಪ್ಪ ಅವರು ಕಳೆದ ಮೂರು ದಶಕಗಳಿಂದಲೂ ತಾಯಿ ಕನ್ನಡ ಭುವನೇಶ್ವರಿ ರಥವನ್ನು ಕೇವಲ ನಗರ ಪ್ರದೇಶಕ್ಕಷ್ಟೇ ಸೀಮಿತಗೊಳಿಸದೇ ದಾವಣಗೆರೆಯ ಗ್ರಾಮೀಣ ಪ್ರದೇಶದ ಹಳ್ಳಿ ಹಳ್ಳಿಗೂ ಎಳೆದೊಯ್ದ ಕೀರ್ತಿ ಇವರದ್ದಾಗಿದೆ. ಗುಣಮಟ್ಟದ ಕನ್ನಡ ಸೇವೆ ಮಾಡಿ ದ್ದಾರೆ. ಅವರನ್ನು ಅವಿರೋಧವಾಗಿ ಆಯ್ಕೆ ಮಾಡ ಬಹುದಿತ್ತು. ಆದರೆ ಅವರು ಮಾಡಿರುವ ಕನ್ನಡ ಸೇವೆಯೇ ಚುನಾವಣೆಯಲ್ಲಿ ಬಹುಮತದಿಂದ ಗೆಲ್ಲಿಸಲಿದೆ ಎಂದು ಹೇಳಿದರು.
ಬಿ. ವಾಮದೇವಪ್ಪ ಮಾತನಾಡಿ, ಹಲವು ವರ್ಷಗಳಿಂದ ಕನ್ನಡ ಸೇವೆ ಮಾಡುತ್ತಿದ್ದೇನೆ. ಸಮ್ಮೇಳನಗಳನ್ನು ಯಶಸ್ವಿಯಾಗಿ ನಿರ್ವಹಿಸಿ ದ್ದೇನೆ. ಅಲ್ಲದೇ ದತ್ತಿನಿಧಿ ಹೆಚ್ಚು ಸ್ಥಾಪಿಸುವಲ್ಲಿ ಶ್ರಮಿಸಿದ್ದೇನೆ. 2016ರಲ್ಲಿ ಕೇವಲ ನಾಲ್ಕು ತಿಂಗಳಿನಲ್ಲಿ ಮೂರು ಸಾವಿರ ಆಜೀವ ಸದಸ್ಯರನ್ನಾಗಿಸಿದ್ದೇನೆ. ಕನ್ನಡ ಭವನ ಅಭಿವೃದ್ಧಿಯಲ್ಲಿ ನನ್ನ ಪಾತ್ರ ಇದೆ ಎಂದ ಅವರು, ಮತದಾರರಲ್ಲಿ ಉತ್ತಮ ಅಭಿಪ್ರಾಯವಿದೆ ಎಂದು ತಿಳಿಸಿದರು.
ಈ ಚುನಾವಣೆಯಲ್ಲಿ ಆಯ್ಕೆಗೊಂಡಲ್ಲಿ ಪ್ರತಿ ಗ್ರಾಮದಲ್ಲೂ ಕನ್ನಡ ಧ್ವಜ ಸ್ತಂಬ ಸ್ಥಾಪನೆ, ಕುವೆಂಪು ಕನ್ನಡ ಭವನದಲ್ಲಿನ ಗ್ರಂಥಾಲಯದಲ್ಲಿ ಕನ್ನಡ ಸಾಹಿತ್ಯಕ್ಕೆ ಸಂಬಂಧಪಟ್ಟ ಪುಸ್ತಕಗಳ ಸಂಖ್ಯೆ ಹೆಚ್ಚಿಸಿ, ಅದನ್ನು ಮನೆಯಲ್ಲಿ ಓದುವಂತಹ ವ್ಯವಸ್ಥೆ ಮಾಡುತ್ತೇನೆ. ಕನ್ನಡದ ತೇರನ್ನು ಮತ್ತಷ್ಟು ಉತ್ತಮವಾಗಿ ಸಾಗಿಸುವಂತಹ ಪ್ರಯತ್ನದ ಜೊತೆಗೆ ಕನ್ನಡ ಸೇವೆ ಮಾಡುವ ಆಸಕ್ತಿವುಳ್ಳವರಿಗೆ ಅವಕಾಶ ಕಲ್ಪಿಸುತ್ತೇನೆ ಎಂದರು.
ಸಭೆಯಲ್ಲಿ ಹಿರಿಯ ಸಾಹಿತಿ ಎಸ್.ಟಿ. ಶಾಂತಗಂಗಾಧರ್, ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಬಿ.ಎಂ. ಸದಾಶಿವಪ್ಪ ಶ್ಯಾಗಲೆ, ವಿಶ್ರಾಂತ ಉಪನ್ಯಾಸಕರಾದ ಸುಭಾಸ್ ಚಂದ್ರ ಭೋಸ್, ಸಾಹಿತಿ ಎಂ.ಕೆ.ಬಕ್ಕಪ್ಪ, ಶಿಕ್ಷಣ ತಜ್ಞ ಡಾ. ಹೆಚ್.ವಿ. ವಾಮದೇವಪ್ಪ, ಉಪನ್ಯಾಸಕಿ ಸುಮತಿ ಜಯಪ್ಪ, ಬಸವಾಪಟ್ಟಣ ಎನ್.ವಿ.ರಮೇಶ್, ಸಾಲಿಗ್ರಾಮ ಗಣೇಶ ಶೆಣೈ, ಹೊನ್ನಾಳಿ ಮುರಿಗೆಪ್ಪ ಗೌಡ, ಸಂತೆಬೆನ್ನೂರು ಕೆ. ಸಿರಾಜ್ ಅಹಮದ್, ಮಲ್ಯಾಡಿ ಪ್ರಭಾಕರ ಶೆಟ್ಟಿ, ಉಪ್ಪುಂದ ಕುಶಾಲ್ ಶೆಟ್ಟಿ, ಎಲ್.ನಾಗರಾಜ್, ಎಮ್.ಡಿ. ನೀಲಗಿರಿಯಪ್ಪ, ಕಿರಣ್ ಕುಮಾರ್ ಸಂತೆಬೆನ್ನೂರು, ವೀರೇಶ್ ಪ್ರಸಾದ್, ಗೋವಿಂದಪ್ಪ ಹೊನ್ನಾಳಿ, ಕೆ. ರಾಘವೇಂದ್ರ ನಾಯರಿ, ಸಿ.ಜಿ. ಜಗದೀಶ್ ಕೂಲಂಬಿ, ಇ.ಎಂ. ಮಂಜುನಾಥ, ಮುರುಗೇಶ್ ಹೆದ್ನೆ, ತಾರೇಶ್, ಹೆಚ್. ಜಯಣ್ಣ, ಕಾಕನೂರು ಎಮ್.ಬಿ. ನಾಗರಾಜ್, ಕೊರಟಗೆರೆ ಡಿ.ಎಮ್. ಶಿವಕುಮಾರ್, ಬಸವಾಪಟ್ಟಣ ಎಲ್.ಜಿ. ಮಧುಕುಮಾರ್, ಕೆ.ಹೆಚ್.ಮಂಜುನಾಥ್, ಕೆ.ಚಂದ್ರಣ್ಣ, ಬೇತೂರು ಷಡಾಕ್ಷರಪ್ಪ, ಗೋಪನಾಳ್ ಪಾಲಾಕ್ಷಪ್ಪ, ಬಿ.ಎಸ್. ಜಗದೀಶ್, ಏಜಾಜ್ ಅಹಮದ್, ಎಸ್.ಹೆಚ್. ಚಂದ್ರಪ್ಪ, ಪಲ್ಲಾಗಟ್ಟೆ ಶೇಖರಪ್ಪ ಸೇರಿದಂತೆ ಜಿಲ್ಲೆಯ ಕಸಾಪ ಆಜೀವ ಸದಸ್ಯರು ಇದ್ದರು.
ನಾಮಪತ್ರ ಸಲ್ಲಿಕೆ: ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ಚುನಾವಣೆ ಮೇ 9ರಂದು ನಡೆಯಲಿದ್ದು, ನಾಮಪತ್ರ ಸಲ್ಲಿಕೆಯ ಮೊದಲ ದಿನವಾದ ಇಂದು ಬಿ. ವಾಮದೇವಪ್ಪ ಅವರು ಚುನಾವಣಾಧಿಕಾರಿಗಳಾದ ತಹಸೀಲ್ದಾರ್ ಅವರಿಗೆ ನಾಮಪತ್ರ ಸಲ್ಲಿಸಿದರು. ನಂತರ ಮೆರವಣಿಗೆ ನಡೆಸಿದರು.