ಮುಖಂಡರುಗಳ ಪರಿಶ್ರಮದ ನಡುವೆಯೂ ಮತದಾನಕ್ಕೆ ನಿರುತ್ಸಾಹ
ದಾವಣಗೆರೆ, ಮಾ.29- ಮಹಾನಗರ ಪಾಲಿಕೆ ಎರಡು ಸ್ಥಾನಗಳಿಗೆ ನಡೆದ ಉಪ ಚುನಾವಣೆ ಶಾಂತಿಯುತವಾಗಿ ನಡೆದಿದ್ದು, ಶೇ. 56.71 ರಷ್ಟು ನೀರಸ ಮತದಾನವಾಗಿದೆ.
ವಾರ್ಡ್ ನಂ.20ರ ಭಾರತ್ ಕಾಲೋನಿಯಲ್ಲಿ 7 ಮತಗಟ್ಟೆಗಳಲ್ಲಿ ಮತದಾನ ನಡೆಯಿತು. 7398 ಮತದಾರರ ಪೈಕಿ 2265 ಪುರುಷರು, 2228 ಮಹಿಳೆಯರು ಸೇರಿ ಒಟ್ಟು 4493 ಮತದಾರರು ಮತ ಚಲಾಯಿಸಿದ್ದಾರೆ. ಶೇ.60.73ರಷ್ಟು ಮತದಾನವಾಗಿದೆ.
ವಾರ್ಡ್ ಸಂಖ್ಯೆ 22ರ ಯಲ್ಲಮ್ಮನಗರದಲ್ಲಿ 8 ಮತ ಕೇಂದ್ರಗಳಲ್ಲಿ ಮತದಾನ ನಡೆದಿದ್ದು, 8056 ಮತದಾರರ ಪೈಕಿ 2113 ಪುರುಷರು ಹಾಗೂ 2131 ಮಹಿಳೆಯರು ಸೇರಿದಂತೆ ಒಟ್ಟು 4244 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಒಟ್ಟಾರೆ ಶೇ.52.68ರಷ್ಟು ಮತದಾನವಾಗಿದೆ.
ಬೆಳಿಗ್ಗೆ ಹೋಳಿ ಹಬ್ಬ ಇದ್ದುದರಿಂದ ಮತದಾರರು ಮತದಾನಕ್ಕೆ ಅಷ್ಟಾಗಿ ಉತ್ಸಾಹ ತೋರಿರಲಿಲ್ಲ. ಆದರೆ 11 ಗಂಟೆ ವೇಳೆಗೆ ಎರಡೂ ವಾರ್ಡ್‌ಗಳಲ್ಲಿ ಮತದಾನ ಚುರುಕು ಪಡೆಯಿತಾದರೂ, ಬಿಸಿಲ ಧಗೆ, ಹೋಳಿ ಹಾಗೂ ಮರು ಮತದಾನಕ್ಕೆ ಬೇಸತ್ತ ಮತದಾರ ಪ್ರಭು ಅಷ್ಟಾಗಿ ಆಸಕ್ತಿ ತೋರಲಿಲ್ಲ.
ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭ ವಾಯಿತು. 9 ಗಂಟೆಗೆ ಎರಡೂ ವಾರ್ಡ್ ಗಳಲ್ಲಿ ಶೇ.4.4ರಷ್ಟು ಮತದಾನವಾಗಿತ್ತು. 11 ಗಂಟೆ ವೇಳೆಗೆ ಎರಡೂ ವಾರ್ಡ್‌ಗಳಲ್ಲಿ ಶೇ.17.23ರಷ್ಟು ಮತದಾನವಾದರೆ, ಮಧ್ಯಾಹ್ನ 1 ಗಂಟೆ ಸುಮಾರಿಗೆ 31.43ರಷ್ಟು ಹಾಗೂ ಮೂರು ಗಂಟೆ ವೇಳೆಗೆ ಶೇ.41.9ರಷ್ಟು ಮತದಾನವಾಗಿತ್ತು.
ವಾರ್ಡ್‌ಗಳಲ್ಲಿ ಮುಖಂಡರ ದಂಡು: ಪಾಲಿಕೆಯಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳಿಗೆ ಈ ಎರಡೂ ವಾರ್ಡ್‌ಗಳು ಚುನಾವಣೆ ಅತಿ ಮುಖ್ಯವಾಗಿದ್ದ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳ ಮುಖಂಡರು, ಪಾಲಿಕೆ ಸದಸ್ಯರು ಚುನಾವಣೆ ನಡೆಯುವ ವಾರ್ಡ್‌ಗಳಲ್ಲಿ ಬೀಡು ಬಿಟ್ಟಿದ್ದರು.
ಮತ ಚಲಾಯಿಸಲು ಮತಗಟ್ಟೆಗಳಿಗೆ ಆಗಮಿಸುತ್ತಿದ್ದ ಮತದಾರರಿಗೆ ಮುಖಂಡರುಗಳು ಕೈ ಮುಗಿದು ತಮ್ಮ ತಮ್ಮ ಪಕ್ಷಗಳಿಗೆ ಮತ ನೀಡುವಂತೆ ಅಂತಿಮವಾಗಿ ಮನವಿ ಮಾಡುತ್ತಿದ್ದುದು ಕಂಡು ಬಂತು. ಪಕ್ಷಗಳ ಕಾರ್ಯಕರ್ತರು ಮತದಾನಕ್ಕೆ ಬರುತ್ತಿದ್ದವರಿಗೆ ಮಾಸ್ಕ್ ನೀಡುತ್ತಿದ್ದರು.
ಭಾರತ್ ಕಾಲೋನಿಯಲ್ಲಿ ಮಾಸ್ಕ್ ಧರಿಸದೇ ಮತದಾನ ಮಾಡಲು ಬಂದವರನ್ನು ಪೊಲೀಸರು ಮಾಸ್ಕ್ ಧರಿಸಿಕೊಂಡು ಬರುವಂತೆ ಹೇಳಿ ವಾಪಾಸ್ ಕಳುಹಿಸುತ್ತಿದ್ದರು.
ಕೆಲವು ಯುವ ಮತದಾರರು ಬಣ್ಣದಾಟವಾಡಿಯೇ ಮತ ಚಲಾಯಿಸಿದರು. ಪ್ರತಿ ಮತವೂ ಅತ್ಯಮೂಲ್ಯ ಎಂದರಿತ ಮುುಖಂಡರುಗಳು, ಮನೆಯ ಸದಸ್ಯರನ್ನು ಮತ ಕೇಂದ್ರಕ್ಕೆ ಕರೆ ತರುವಂತೆ ಯುವಕರಿಗೆ ಹೇಳಿ ಕಳುಹಿಸುತ್ತಿದ್ದರು. ಯುವಕರು ಬೈಕ್‌ಗಳಲ್ಲಿ ಮಹಿಳೆಯರು, ವೃದ್ದರನ್ನು ಮತ ಕೇಂದ್ರಗಳಿಗೆ ಕರೆ ತರುತ್ತಿದ್ದರು.
ಮಾತಿನ ಚಕಮಕಿ: ಈ ಹಿಂದೆ ಕಾಂಗ್ರೆಸ್ ಪಕ್ಷದಿಂದ ಚುನಾಯಿತರಾಗಿ ಮೇಯರ್ ಚುನಾವಣೆ ವೇಳೆ ರಾಜೀನಾಮೆ
ಪಾಲಿಕೆ ಸದಸ್ಯ ಸ್ಥಾನಕ್ಕೆ ಮತ್ತು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿರುವ ದೇವರಮನೆ ಶಿವಕುಮಾರ್ ಅವರು ಭಾರತ್ ಕಾಲೋನಿಗೆ ಬಂದಾಗ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವಾಗ್ವಾದ ನಡೆಯಿತು. ಎರಡೂ ಪಕ್ಷಗಳ ಕಾರ್ಯಕರ್ತರು ತಮ್ಮ ತಮ್ಮ ಪಕ್ಷಕ್ಕೆ ಜೈಕಾರ ಕೂಗಿದರು. ಪೊಲೀಸರು ಬಂದು ವಾತಾವರಣ ವಿಕೋಪಕ್ಕೆ ಹೋಗದಂತೆ ನೋಡಿಕೊಂಡ ಘಟನೆ ನಡೆದಿದೆ.
ಫೋಟೋ ತೆಗೆದುಕೊಂಡ ಮಹಿಳೆ: ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆಯೊಬ್ಬರು ಮತಗಟ್ಟೆಯಲ್ಲಿ ಫೋಟೋ ತೆಗೆದುಕೊಂಡು ಪರಿಣಾಮ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ ಘಟನೆ 22ನೇ ವಾರ್ಡ್‌ನಲ್ಲಿ ನಡೆದಿದೆ. ಮಹಿಳೆ ವಿರುದ್ಧ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ ಎನ್ನಲಾಗಿದೆ.