ಡಿ.ಜೆ. ಕುಣಿತ, ಕೇಕೆ, ಆರ್ಭಟದ ಸೊಲ್ಲಡಗಿಸಿದ ಕೊರೊನಾ
ದಾವಣಗೆರೆ, ಮಾ. 29 – ಕೊರೊನಾ ಕಾರಣದಿಂದಾಗಿ ಸಾರ್ವಜನಿಕ ಹೋಳಿ ಆಚರಣೆಗೆ ಜಿಲ್ಲಾಡಳಿತ ಕಡಿವಾಣ ಹಾಕಿದ ಪರಿಣಾಮವಾಗಿ, ಎಂದಿನಂತೆ ಡಿ.ಜೆ. ಆರ್ಭಟ, ಯುವಕರ ಉನ್ಮಾದದ ಕುಣಿತ, ಕೇಕೆ ಹಾಗೂ ಬೈಕುಗಳ ಆರ್ಭಟವಿಲ್ಲದೇ ಜನರು ಆತ್ಮೀಯತೆಯಿಂದ ಬಣ್ಣಗಳ ಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ನಗರದ ರಾಂ ಅಂಡ್ ಕೋ ಸರ್ಕಲ್ ಪ್ರತಿ ವರ್ಷ ಬಟ್ಟೆ ಹರಿದುಕೊಳ್ಳುವ ಓಕುಳಿ ಆಚರಣೆ ಕೇಂದ್ರವಾಗಿರುತ್ತಿತ್ತು. ಈ ಬಾರಿ ಕೊರೊನಾ ನಿರ್ಬಂಧದ ಕಾರಣದಿಂದಾಗಿ ವೃತ್ತದಲ್ಲಿ ಸಾಮಾನ್ಯ ವಾತಾವರಣವಿತ್ತು.
ಒಂದೆಡೆ ಯುವಕರು ಡಲ್ ಆಗಿದ್ದರೆ, ಮತ್ತೊಂದೆಡೆ ಬಾಲಕರು ಮನಸೋಇಚ್ಛೆ ಓಕುಳಿ ಆಡಿ ಸಂಭ್ರಮಿಸಿದರು. ಕುಟುಂಬದವರು, ಆತ್ಮೀಯರು ಹಾಗೂ ಗೆಳೆಯರೊಂದಿಗೆ ಸದ್ದು – ಗದ್ದಲವಿಲ್ಲದೇ ಬಣ್ಣ ಹಂಚಿಕೊಂಡು ಸಂಭ್ರಮಿಸಿ ದೃಶ್ಯ ಬೆಳಿಗ್ಗೆಯಿಂದ ಮಧ್ಯಾಹ್ನ ಬಿಸಿಲು ಚುರುಕಾಗುವವರೆಗೆ ಕಂಡು ಬಂತು.
ತ್ರಿಬ್ಬಲ್ ರೈಡಿಂಗ್, ಹೆಲ್ಮೆಟ್ ಹಾಗೂ ಮಾಸ್ಕ್ ರಹಿತವಾಗಿ ಯುವಕ – ಯುವತಿಯರು ರಸ್ತೆ ಸಂಚಾರ ಮಾಡುತ್ತಿದ್ದುದು ಸಾಮಾನ್ಯವಾಗಿತ್ತು. ಕೊರೊನಾ ನಡುವೆಯೂ ಬಣ್ಣ ಹಾಗೂ ಮೊಟ್ಟೆಗಳ ಮಾರಾಟ ನಡೆದೇ ಇತ್ತು. ಹಲವಾರು ಶಾಲಾ – ಕಾಲೇಜುಗಳು ಎಂದಿನಂತೆ ಕಾರ್ಯ ನಿರ್ವಹಿಸಿದ ಕಾರಣ, ವಿದ್ಯಾರ್ಥಿಗಳು ಲಗುಬಗೆಯಿಂದ ಓಕುಳಿ ಮುಗಿಸಿಕೊಂಡು ಶಾಲೆ ಕಡೆ ಹೆಜ್ಜೆಹಾಕಿದ್ದು ಕಂಡು ಬಂತು.
ಕುಟುಂಬ ಹಾಗೂ ಗೆಳೆಯರಿಗೆ ಸೀಮಿತವಾಗಿ ಓಕುಳಿ ನಡೆದರೂ ಸಂಭ್ರಮಕ್ಕೆ ಕೊರತೆ ಇರಲಿಲ್ಲ. ಯಾವುದೇ ಅಬ್ಬರವಿಲ್ಲದೇ, ಆತ್ಮೀಯತೆ ಮೆರೆಸುವ ರೀತಿಯಲ್ಲಿ 2021ರ ಓಕುಳಿ ನೆರವೇರಿತು.