ದಾವಣಗೆರೆ, ಮಾ.29- ತಾಲ್ಲೂಕಿನ ಮೂರು ಗ್ರಾಮ ಪಂಚಾಯ್ತಿಗಳ ಚುನಾವಣೆ ಸೋಮವಾರ ಶಾಂತಯುತವಾಗಿ ನಡೆದಿದ್ದು, ಶೇ 86.67ರಷ್ಟು ಮತದಾನವಾಗಿದೆ.
ಮುಂಜಾನೆಯಿಂದಲೇ ಹಳ್ಳಿಗಳಲ್ಲಿ ಮತದಾನ ಬಿರುಸಿನಿಂದ ಸಾಗಿತ್ತು. ಯುವಕರು, ಮಹಿಳೆಯರು, ಪುರುಷರು, ವೃದ್ಧರು ಅತ್ಯುತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡಿದ್ದರು.
ಬೇತೂರು, ಕನಗೊಂಡನಹಳ್ಳಿ, ಕುಕ್ಕುವಾಡ ಈ ಮೂರು ಪಂಚಾಯಿತಿಗಳಿಂದ 13687 ಮತದಾರರ ಪೈಕಿ 6108 ಪುರುಷರು ಹಾಗೂ 5755 ಮಹಿಳೆಯರು ಸೇರಿ ಒಟ್ಟು 11863 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಮೂರು ಗ್ರಾ.ಪಂ.ಗಳಿಗೆ ಬೆಳಿಗ್ಗೆ 9 ಗಂಟೆ ವೇಳೆಗೆ ಶೇ. 14.08 ರಷ್ಟು ಮತದಾನವಾಗಿತ್ತು. ಬೆಳಿಗ್ಗೆ 11 ಗಂಟೆಗೆ ಶೇ 27.65ರಷ್ಟು ಮತದಾನವಾದರೆ, ಮಧ್ಯಾಹ್ನ 1ಕ್ಕೆ ಶೇ. 50.52ರಷ್ಟು ಮತದಾನವಾಗಿತ್ತು.
ಬೇತೂರು ಗ್ರಾ.ಪಂ. ಕ್ಷೇತ್ರಕ್ಕೆ ನಡೆದ ಚುನಾವಣೆ ಪೈಕಿ ಬೇತೂರು ಗ್ರಾಮದ ಮೂರು ಮತ ಕೇಂದ್ರಗಳಲ್ಲಿ 3487 ಮತದಾರರ ಪೈಕಿ 1554 ಪುರುಷರು, 1509 ಮಹಿಳೆಯರು ಸೇರಿ ಒಟ್ಟು 3063 ಮತದಾರರು ಮತ ಚಲಾಯಿಸಿದ್ದಾರೆ.
ಬಿ.ಕಲಪನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ ಕೇಂದ್ರದಲ್ಲಿ 1290 ಮತದಾರರ ಪೈಕಿ 593 ಪುರುಷರು, 526 ಮಹಿಳೆಯರು ಸೇರಿ ಒಟ್ಟು 1119 ಮತದಾರರ ಮತ ಚಲಾಯಿಸಿದ್ದು, ಶೇ.86.74ರಷ್ಟು ಮತದಾನವಾಗಿದೆ. ಬಿ.ಚಿತ್ತಾನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆಯಲ್ಲಿ 870 ಮತದಾರರ ಪೈಕಿ 415 ಮಹಿಳೆಯರು, 377 ಪುರುಷರು ಸೇರಿ 792 ಮತದಾರರು ಮತ ಚಲಾಯಿಸಿದ್ದಾರೆ. ಶೇ.91.03ರಷ್ಟು ಮತದಾನವಾಗಿದೆ.
ಕನಗೊಂಡನಹಳ್ಳಿ ಗ್ರಾಮ ಪಂಚಾಯ್ತಿಗೆ ನಡೆದ ಚುನಾವಣೆಯಲ್ಲಿ ಕನಗೊಂಡನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ 1022 ಮತದಾರರ ಪೈಕಿ 501 ಪುರುಷರು, 464 ಮಹಿಳೆಯರು ಸೇರಿ ಒಟ್ಟು 965 ಮತದಾರರು ಮತ ಚಲಾಯಿಸಿದ್ದು, ಶೇ.94.42ರಷ್ಟು ಮತದಾನವಾಗಿದೆ.
ಮಾಯಕೊಂಡದಲ್ಲಿ ನಡೆಯದ ಚುನಾವಣೆ
ಮಾಯಕೊಂಡವನ್ನು ತಾಲ್ಲೂಕು ಕೇಂದ್ರ ವನ್ನಾಗಿ ಮಾಡಬೇಕೆಂಬ ಬೇಡಿಕೆ ಇಟ್ಟುಕೊಂಡು ಗ್ರಾಮಸ್ಥರು ಗ್ರಾ.ಪಂ ಚುನಾವಣೆ ಬಹಿಷ್ಕರಿಸಿದ್ದ ಹಿನ್ನೆಲೆಯಲ್ಲಿ ಚುನಾವಣೆ ನಡೆದಿಲ್ಲ.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಎಸ್.ವೆಂಕಟೇಶ್, ಮಾಯಕೊಂಡವನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡಬೇಕೆಂಬುದು ನಮ್ಮ ಬಹು ವರ್ಷದ ಬೇಡಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಪಂದಿಸದ ಕಾರಣ ಗ್ರಾ.ಪಂ. ಚುನಾವಣೆ ಬಹಿಷ್ಕರಿಸುವ ನಿರ್ಧಾರವನ್ನು ಗ್ರಾಮಸ್ಥರು ಮಾಡಿದ್ದಾರೆ ಎಂದರು.
ನಮ್ಮ ಬೇಡಿಕೆ ಈಡೇರದಿದ್ದರೆ ಮುಂದಿನ ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಸೇರಿದಂತೆ ಎಲ್ಲಾ ಚುನಾವಣೆಗಳನ್ನೂ ಬಹಿಷ್ಕರಿಸುವ ನಿರ್ಧಾರ ಕೈಗೊಂಡಿರುವುದಾಗಿ ಅವರು ಹೇಳಿದರು.
ಖಜಾನೆ ಕಚೇರಿ, ನಾಡ ಕಚೇರಿ, ರೈಲು ನಿಲ್ದಾಣ, ಪೊಲೀಸ್ ಠಾಣೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೀಗೆ ಎಲ್ಲಾ ಸೌಲಭ್ಯ ಹೊಂದಿರುವ ಮಾಯಕೊಂಡ ತಾಲ್ಲೂಕು ಕೇಂದ್ರವಾಗುವ ಎಲ್ಲಾ ಅರ್ಹತೆ ಪಡೆದಿದೆ. ಆದರೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ನಮ್ಮ ಬೇಡಿಕೆ ಈಡೇ ರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೊಳೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತ ಕೇಂದ್ರದಲ್ಲಿ 1217 ಮತ ದಾರರ ಪೈಕಿ 515 ಪುರುಷರು, 460 ಮಹಿಳೆಯರು ಸೇರಿ 975 ಮತಗಳು ಚಲಾವಣೆಯಾಗಿವೆ. ಜಡಗನಹಳ್ಳಿ ಶಾಲೆಯಲ್ಲಿ 403 ಮತದಾರರ ಪೈಕಿ 194 ಪುರುಷರು, 199 ಮಹಿಳೆಯರು ಸೇರಿ ಒಟ್ಟು 393 ಮತ ಚಲಾವಣೆಯಾಗಿವೆ. ಅತಿ ಹೆಚ್ಚು ಅಂದರೆ ಶೇ.97.52ರಷ್ಟು ಮತದಾನವಾಗಿದೆ. ಬಲ್ಲೂರು ಸ.ಹಿ.ಪ್ರಾ. ಶಾಲೆಯಲ್ಲಿ 1259 ಮತದಾರರ ಪೈಕಿ 594 ಪುರುಷರು, 540 ಮಹಿಳೆಯರು ಸೇರಿ 1089 ಮತದಾರರು ಮತದಾನ ಮಾಡಿದ್ದಾರೆ. ಶೇ.86.50ರಷ್ಟು ಮತದಾನವಾಗಿದೆ.
ಕುಕ್ಕುವಾಡ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಕುಕ್ಕುವಾಡ ಗ್ರಾಮದ ಮೂರು ಮತ ಗಟ್ಟೆಗಳಲ್ಲಿ 2279 ಮತದಾರರ ಪೈಕಿ, 949 ಪುರುಷರು, 876 ಮಹಿಳೆಯರು ಸೇರಿದಂತೆ ಒಟ್ಟು 1825 ಮತದಾರರು ಮತ ಚಲಾಯಿಸಿದ್ದಾರೆ.
ನಾಗರಸನಹಳ್ಳಿ ಸ.ಹಿ.ಪ್ರಾ ಶಾಲೆಯ ಮತ ಕೇಂದ್ರದಲ್ಲಿ 779 ಮತದಾರರ ಪೈಕಿ 356 ಪುರುಷರು, 339 ಮಹಿಳೆಯರು ಸೇರಿ 695 ಮತದಾರರು ಮತದಾನ ಮಾಡಿದ್ದಾರೆ. 89.22ರಷ್ಟು ಮತದಾನವಾಗಿದೆ. ಸ.ಹಿ.ಪ್ರಾ. ಶಾಲೆ ಹೊನ್ನಮರಡಿ ಸ.ಹಿ.ಪ್ರಾ. ಶಾಲೆ ಮತ ಕೇಂದ್ರದಲ್ಲಿ 384 ಮತದಾರರ ಪೈಕಿ 192 ಪುರುಷರು, 167 ಮಹಿಳೆಯರು ಸೇರಿ 359 ಜನರು ಮತದಾನ ಮಾಡಿದ್ದಾರೆ. ಶೇ.93.49ರಷ್ಟು ಮತದಾನವಾಗಿದೆ.
ಹೊನ್ನಮರಡಿಯ ಸ.ಹಿ.ಪ್ರಾ. ಶಾಲೆ ಆಂಜನೇಯ ನಗರದ ಮತ ಕೇಂದ್ರದಲ್ಲಿ 697 ಮತದಾರರ ಪೈಕಿ 297 ಪುರುಷರು, 298 ಮಹಿಳೆಯರು ಸೇರಿ ಒಟ್ಟು 588 ಮತ ಚಲಾವಣೆಯಾಗಿವೆ. ಶೇ.84.36ರಷ್ಟು ಮತದಾನವಾಗಿದೆ.
ಹೊನ್ನಾಳಿ ತಾಲ್ಲೂಕಿನ ಅರಬಗಟ್ಟೆಯಲ್ಲಿ ಖಾಲಿಯಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಶೇ.83.79ರಷ್ಟು ಮತದಾನವಾಗಿದೆ. 1049 ಮತದಾರರ ಪೈಕಿ 456 ಪುರುಷರು, 423 ಮಹಿಳೆಯರು ಸೇರಿ ಒಟ್ಟು 879 ಮತದಾರರು ಮತದಾನ ಮಾಡಿದ್ದಾರೆ.