ಬೋರ್ಡ್ ಪರೀಕ್ಷೆಯಾಗಿ ಪಿಯು ಅರ್ಧ ವಾರ್ಷಿಕ ಪರೀಕ್ಷೆ

ಎಐಡಿಎಸ್ಓ ನೇತೃತ್ವದಲ್ಲಿ ಪಿಯುಸಿ ವಿದ್ಯಾರ್ಥಿಗಳ ಪ್ರತಿಭಟನೆ

ದಾವಣಗೆರೆ, ನ.16- ದ್ವಿತೀಯ ಪಿಯುಸಿ ಅರ್ಧ ವಾರ್ಷಿಕ ಪರೀಕ್ಷೆಯನ್ನು ಬೋರ್ಡ್ ಪರೀಕ್ಷೆಯಾಗಿ ನಡೆಸುವ ಹಠಾತ್ ಹೇರಿಕೆಯನ್ನು ಹಿಂಪಡೆಯಲು ಆಗ್ರಹಿಸಿ, ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್ಓ) ನೇತೃತ್ವದಲ್ಲಿ ವಿವಿಧ ಕಾಲೇಜುಗಳ ಪಿಯುಸಿ ವಿದ್ಯಾರ್ಥಿಗಳು ನಗರದಲ್ಲಿ ಇಂದು ಪ್ರತಿಭಟನೆ ನಡೆಸಿದರು.

ಜಯದೇವ ವೃತ್ತದಲ್ಲಿ ಪ್ರತಿಭಟಿಸಿದ ಸಂಘ ಟನೆಯ ಪದಾಧಿಕಾರಿಗಳು, ವಿದ್ಯಾರ್ಥಿಗಳು, ಪದವಿ ಪೂರ್ವ ಶಿಕ್ಷಣ ಇಲಾಖೆಯ ನೀತಿಯನ್ನು ಖಂಡಿಸಿದರು. ಪ್ರತಿಭಟನಾ ಮೆರವಣಿಗೆ ಮುಖೇನ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಉಪವಿಭಾಗಾಧಿಕಾರಿ ಮುಖಾಂತರ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದರು.

ಇದೇ ದಿನಾಂಕ 12ರಂದು ಪದವಿ ಪೂರ್ವ ಶಿಕ್ಷಣ ಇಲಾಖೆಯು ದ್ವಿತೀಯ ಪಿಯು ಅರ್ಧ ವಾರ್ಷಿಕ ಪರೀಕ್ಷೆ-2021ರ ಮರು ವಿನ್ಯಾಸದ ಕುರಿತು ಸುತ್ತೋಲೆ ಹೊರಡಿಸಿದೆ. ಸುತ್ತೋಲೆಯ ಪ್ರಕಾರ ಈಗ ನಡೆಯುವ ಅರ್ಧ ವಾರ್ಷಿಕ ಪರೀಕ್ಷೆಯನ್ನು ರಾಜ್ಯ ಬೋರ್ಡ್ ಪರೀಕ್ಷೆಯಾಗಿ ನಡೆಸಲಾಗುವುದು. ಪ್ರಶ್ನೆ ಪತ್ರಿಕೆಗಳು ಕೇಂದ್ರ ಕಚೇರಿಯಿಂದ ಬರುತ್ತವೆ. ನವೆಂಬರ್‌ 29ರಿಂದ ಪರೀಕ್ಷೆಗಳು ನಡೆಯಲಿವೆ. ಕೇವಲ 15 ದಿನಗಳಲ್ಲಿ ರಾಜ್ಯದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಾಗಬೇಕಿದ್ದು, ಗೊಂದಲಕ್ಕೆ ಸಿಲುಕಿಸಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು. ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಪ್ರಸ್ತುತ ದ್ವಿತೀಯ ಪಿಯುಸಿ, ಮೊದಲ ಪಿಯು ಪರೀಕ್ಷೆಗಳನ್ನು ಬರೆಯದೇ ಬಡ್ತಿ ಹೊಂದಿದ್ದಾರೆ. ಎರಡು ವರ್ಷಗಳು ಪರೀಕ್ಷೆಗಳನ್ನು ಬರೆಯಲು ಆಗದೇ ಬರವಣಿಗೆ ಅಭ್ಯಾಸ ಇರದೇ ಪ್ರಸ್ತುತ ಎರಡನೇ ಪಿಯುಸಿಗೆ ತೇರ್ಗಡೆ ಆಗಿದ್ದಾರೆ. ದ್ವಿತೀಯ ಪಿಯು ಶೈಕ್ಷಣಿಕ ವೇಳಾಪಟ್ಟಿ ಪ್ರಕಾರ ಮೇ 3ನೇ ವಾರ ತರಗತಿಗಳು ಆರಂಭವಾಗಿ ಮಾರ್ಚ್ 3ನೇ ವಾರಕ್ಕೆ ಅಂತಿಮ ಪರೀಕ್ಷೆಗಳು ನಡೆಯುತ್ತವೆ. ಈಗ ಕೋವಿಡ್ ಹಿನ್ನೆಲೆಯಲ್ಲಿ ತರಗತಿಗಳು ಆರಂಭವಾಗಿದ್ದೇ ಆಗಸ್ಟ್ 3ನೇ ವಾರಕ್ಕೆ. ಆದರೆ ಇದೀಗ ಮುಂಬರುವ ಏಪ್ರಿಲ್‌ಗೆ ಅಂತಿಮ ಪರೀಕ್ಷೆಗಳು ನಡೆಯುತ್ತವೆ ಎಂದು ಹೇಳಲಾಗಿದೆ. ಕಾಲೇಜು ಪುನರಾರಂಭವಾಗಲು ಮೂರು ತಿಂಗಳು ವಿಳಂಬವಾಗಿದೆ. ಇದರಿಂದ ತಯಾರಿ ಸಮಯ, ಪಾಠದ ಸಮಯ ಎಲ್ಲವೂ ಕುಗ್ಗಿದೆ. ಹೀಗಾಗಿ ರಾಜ್ಯದ ಹಲವು ಕಾಲೇಜುಗಳಲ್ಲಿ ಪಠ್ಯಕ್ರಮ ಪೂರ್ಣಗೊಂಡಿಲ್ಲ. ಪರೀಕ್ಷೆಗೆ ಸಮರ್ಪಕವಾದ ತಯಾರಿ ನಡೆಸಲು ಸಾಧ್ಯವಾಗಿಲ್ಲ. ರಾಜ್ಯ ಸರ್ಕಾರದ ಅರ್ಧ ವಾರ್ಷಿಕ ಬೋರ್ಡ್ ಪರೀಕ್ಷೆ ರೀತಿ ನಡೆಯುತ್ತದೆ ಎಂಬ ಹಠಾತ್ ನಿರ್ಧಾರವು ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಪೋಷಕರಲ್ಲಿ ಅತೀವ ಆತಂಕ ಸೃಷ್ಟಿಸಿದೆ ಎಂದು ಆಕ್ಷೇಪಿಸಿದರು.

ರಾಜ್ಯ ಸರ್ಕಾರ, ವಿದ್ಯಾರ್ಥಿಗಳ ಭವಿಷ್ಯ, ಮಾನಸಿಕ ಆರೋಗ್ಯ ಹಾಗೂ ಪೋಷಕರು, ಉಪನ್ಯಾಸಕರ ಹಿತಾಸಕ್ತಿಯನ್ನು ಗಮನದಲ್ಲಿ ಇಟ್ಟುಕೊಂಡು, ಯಥಾಪ್ರಕಾರ ಪ್ರತಿ ವರ್ಷದಂತೆ ಅಂತಿಮ ಪರೀಕ್ಷೆಯನ್ನು ಮಾತ್ರ ಪಬ್ಲಿಕ್ ಪರೀಕ್ಷೆಯಾಗಿ ಮಾಡಿ, ಜೂನ್ ತಿಂಗಳಿಗೆ ನಿಗದಿಪಡಿಸಬೇಕು. ಅರ್ಧ ವಾರ್ಷಿಕ ಪರೀಕ್ಷೆಯನ್ನು ಕಾಲೇಜು ಮಟ್ಟದಲ್ಲಿ, ವಿಕೇಂದ್ರೀಕೃತ ಪ್ರಕ್ರಿಯೆಯಲ್ಲಿ ನಡೆಸಬೇಕು ಎಂದು ಎಐಡಿಎಸ್‌ಓ ಹಾಗೂ ರಾಜ್ಯದ ವಿದ್ಯಾರ್ಥಿಗಳು ಶಿಕ್ಷಣ ಸಚಿವರನ್ನು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಎಐಡಿಎಸ್ಓ ಜಿಲ್ಲಾ ಕಾರ್ಯದರ್ಶಿ ಪೂಜಾ ನಂದಿಹಳ್ಳಿ, ಪುಷ್ಪಾ, ಕಾವ್ಯ, ಧನುಷ್, ಗಣೇಶ್ ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

error: Content is protected !!