ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಶಶಿಕಲಾ ಕೃಷ್ಣಮೂರ್ತಿ
ದಾವಣಗೆರೆ, ಮಾ. 29- ಕುಟುಂಬದಲ್ಲಿ ಯಾರಿಗಾದರೂ ಕ್ಯಾನ್ಸರ್ ಇದ್ದರೆ, ಅನುವಂಶಿಕವಾಗಿ ಈ ಕ್ಯಾನ್ಸರ್ ಬರುವ ಸಾಧ್ಯತೆ ಇರುವುದು. ಇಂಥವರು ಕ್ಯಾನ್ಸರ್ ತಡೆಗಟ್ಟಲು ಆಗಾಗ್ಗೆ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಎಸ್ಸೆಸ್ ವೈದ್ಯಕೀಯ ಮಹಾವಿದ್ಯಾಲಯದ ಪೆಥಾಲಜಿ ವಿಭಾಗದ ಮುಖ್ಯಸ್ಥರಾದ ಡಾ. ಶಶಿಕಲಾ ಪಿ. ಕೃಷ್ಣಮೂರ್ತಿ ತಿಳಿಸಿದರು.
ಅವರು ನಗರದ ಬಾಪೂಜಿ ತಾಂತ್ರಿಕ ಮಹಾವಿದ್ಯಾಲಯದ ಇನ್ಫಾರ್ಮೇಷನ್ ಸೈನ್ಸ್ ವಿಭಾಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಹಿಳಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿದರು.
ಹೆಣ್ಣು ಮಕ್ಕಳಲ್ಲಿ ಕಂಡುಬರುವ ಕ್ಯಾನ್ಸರ್ ರೋಗವನ್ನು ಪ್ರಾಥಮಿಕ ಹಂತದಲ್ಲಿ ಗುರುತಿಸಿ, ತಡೆಗಟ್ಟುವುದು ಹೇಗೆ ಎಂಬುದರ ಕುರಿತು ಮಾತನಾಡಿ ಒಂಭತ್ತು ಮಹಿಳೆಯರಲ್ಲಿ ಒಬ್ಬರು ಕ್ಯಾನ್ಸರ್ಗೆ ತುತ್ತಾಗುತ್ತಿದ್ದಾರೆ. ಬಾಯಿ, ಸ್ತನ, ಗರ್ಭಕೋಶ, ಶ್ವಾಸಕೋಶದ ಕ್ಯಾನ್ಸರ್ಗಳನ್ನು ಧೂಮಪಾನದಿಂದ ಆಹ್ವಾನ ಮಾಡಿಕೊಳ್ಳು ತ್ತಿದ್ದೇವೆ. ಆದ್ದರಿಂದ ಈ ದುಶ್ಚಟದಿಂದ ದೂರವಿರಿ. ಮದ್ಯಪಾನವೂ ಸಹ ಹಾನಿಕರ. ನಾವು ತೆಗೆದು ಕೊಳ್ಳುವ ಆಹಾರದ ಮೇಲೆ ಗಮನವಿರಬೇಕು ಎಂದು ಶಶಿಕಲಾ ಕೃಷ್ಣಮೂರ್ತಿ ತಿಳಿಸಿದರು.
ಕಾಲೇಜಿನ ನಿರ್ದೇಶಕರಾದ ಪ್ರೊ. ವೈ. ವೃಷಭೇಂದ್ರಪ್ಪ, ಇನ್ಫಾರ್ಮೇಷನ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಡಾ. ಬಿ. ಪೂರ್ಣಿಮ ಮಾತನಾಡಿದರು. ಪ್ರಾಂಶುಪಾಲ ಡಾ. ಸದಾಶಿವ ಕಣಕುಪ್ಪಿ ಉಪಸ್ಥಿತರಿದ್ದರು.
ವರ್ಷ ಸ್ವಾಗತಿಸಿದರು. ಕರುಣ ಪ್ರಾರ್ಥಿಸಿದರು. ರಂಜನ ನಿರೂಪಿಸಿದರು. ವಿನುತ ಮುಖ್ಯ ಅತಿಥಿಗಳ ಪರಿಚಯ ನೆರವೇರಿಸಿದರು.