ಜನಪ್ರತಿನಿಧಿಗಳ ಕೊರತೆ ನೀಗಿಸಲು ಸೂಚನೆ

ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್

ದಾವಣಗೆರೆ, ಆ.13- ಜಿಲ್ಲೆ ಹಾಗೂ ತಾಲ್ಲೂಕು ಪಂಚಾಯ್ತಿಗಳಲ್ಲಿನ ಜನಪ್ರತಿನಿಧಿಗಳ ಕೊರತೆ ನೀಗಿಸಿ, ಅಧಿಕಾರಿಗಳೇ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು ಎಂದು ಜಿ.ಪಂ.ನ ಆಡಳಿತಾಧಿಕಾರಿಯೂ ಆದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ  ಎಸ್.ಆರ್. ಉಮಾಶಂಕರ್ ಸೂಚಿಸಿದರು.

ಗುರುವಾರ ನಡೆದ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಮ್ಮ ಕ್ಷೇತ್ರಗಳ ಬಗೆಗಿನ ಸಮಸ್ಯೆಗಳನ್ನು ಸದಸ್ಯರು ಅಧಿಕಾರಿಗಳ ಗಮನಕ್ಕೆ ತರುತ್ತಿದ್ದರು. ಆದರೆ ಈಗ ಸದಸ್ಯರಿಲ್ಲದ ಕಾರಣ ಅಧಿಕಾರಿಗಳೇ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ, ಜನಪ್ರತಿನಿಧಿಗಳ ಕೊರತೆ ನೀಗಿಸಬೇಕು ಎಂದು ಹೇಳಿದರು.

ತಾಲ್ಲೂಕು ಅಧಿಕಾರಿಗಳು ಇಡೀ ತಾಲ್ಲೂಕಿನ ಜವಾಬ್ದಾರಿ ತೆಗೆದುಕೊಳ್ಳಬೇಕು. ಯಾವ ದೂರುಗಳಿಗೂ ಅವಕಾಶ ನೀಡಬೇಕೋ. ನಿಮ್ಮ ಹಂತದಲ್ಲಿಯೇ ತೀರ್ಮಾನ ತೆಗೆದುಕೊಳ್ಳಿ, ಸಾಧ್ಯವಾಗದಿದ್ದರೆ ಜಿ.ಪಂ. ಸಿಇಒ ಅವರ ಗಮನಕ್ಕೆ ತಂದು, ತೀರ್ಮಾನ ತೆಗೆದುಕೊಳ್ಳುವಂತೆ ಸಲಹೆ ನೀಡಿದರು.

ಈ ಹಿಂದೆ ಕಾಮಗಾರಿಗಳು ಅಥವಾ ಫಲಾನುಭವಿಗಳ ಆಯ್ಕೆ ವಿಷಯದಲ್ಲಿ ಜನಪ್ರತಿನಿಧಿಗಳ ಹೆಸರು ಹೇಳಿ ತಪ್ಪಿಸಿಕೊಳ್ಳುತ್ತಿದ್ದಿರಿ. ಆದರೆ ಈಗ ಅಂತಹ ಸಂದರ್ಭ ಬರುವುದಿಲ್ಲ. ನೀವೇ ಸಮರ್ಪಕ ನಿರ್ಧಾರ ತೆಗೆದುಕೊಳ್ಳಬೇಕು. ಅಧಿಕಾರ ದುರುಪಯೋಗ ಪಡಿಸಿಕೊಳ್ಳಬಾರದು ಎಂದು ಕಿವಿ ಮಾತು ಹೇಳಿದರು.

ಎಲ್ಲ ವಸತಿ ನಿಲಯಗಳಲ್ಲಿ ಘನತ್ಯಾಜ್ಯ ವಿಲೇವಾರಿ ಮಾಡಲು, ಪ್ರತಿ ಹಾಸ್ಟೆಲ್‍ಗಳಲ್ಲೂ ಕಾಂಪೋಸ್ಟ್ ಪಿಟ್ ಅಳವಡಿಸಬೇಕು.  ನರೇಗಾ ಯೋಜನೆ ಯಡಿ ಪೌಷ್ಠಿಕ ತೋಟ ನಿರ್ಮಿಸಲು ಅವಕಾಶಗಳಿದ್ದು, ಎಲ್ಲ ಹಾಸ್ಟೆಲ್‍ಗಳಲ್ಲೂ ಪೌಷ್ಠಿಕ ತೋಟ ನಿರ್ಮಿಸಬೇಕು ಎಂದು ಉಮಾಶಂಕರ್ ಸೂಚಿಸಿದರು.

ಮಳೆಯ ಕಾರಣ ಶಾಲಾ ಕಟ್ಟಡಗಳು ಹಾನಿಗೊಳಗಾಗಿದ್ದಲ್ಲಿ ಪ್ರತಿ ಕಟ್ಟಡ ದುರಸ್ತಿಗೆ  2 ಲಕ್ಷ ರೂ. ಅನುದಾನ ನೀಡಲು ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯಲ್ಲಿ ಹಾನಿಗೊಳಗಾದ ಕಟ್ಟಡಗಳ ಪಟ್ಟಿ ಕೊಡಿ ಎಂದಾಗ,  338 ಶಾಲೆಗಳ ಪಟ್ಟಿ ತಯಾರಿಸಿದ್ದು, ನೀಡುವುದಾಗಿ ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ ತಿಳಿಸಿದರು.

15 ಬಾಲ್ಯ ವಿವಾಹ ತಡೆ: ಕಳೆದ ಏಪ್ರಿಲ್‌ನಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ 115 ಬಾಲ್ಯ ವಿವಾಹಗಳನ್ನು ತಡೆಯಲಾಗಿದೆ. ಈ ಪೈಕಿ  7 ವಿವಾಹಗಳು ನಡೆದಿದ್ದು, 7 ಎಫ್‌ಐರ್ ದಾಖಲು ಮಾಡಲಾಗಿದೆ. ಲಾಕ್‌ಡೌನ್‌ ವೇಳೆ ಅತಿ ಹೆಚ್ಚು ಫೋಕ್ಸೋ ಪ್ರಕರಣಗಳು ದಾಖಲಾಗಿವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ವಿಜಯಕುಮಾರ್ ತಿಳಿಸಿದರು.

ಜಿ.ಪಂ. ಸಿಇಒ ಡಾ. ವಿಜಯ ಮಹಾಂತೇಶ್, ಉಪಕಾರ್ಯದರ್ಶಿ ಆನಂದ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!