ದೇವರ ಹೆಸರಲ್ಲಿ ಹಾಲು ವ್ಯರ್ಥಮಾಡದಿರಿ

ದೇವರ ಹೆಸರಲ್ಲಿ ಹಾಲು ವ್ಯರ್ಥಮಾಡದಿರಿ - Janathavani‘ಹಾಲು ಕುಡಿಯುವ ಹಬ್ಬ-ಬಸವ ಪಂಚಮಿ’ಯಲ್ಲಿ ಬಸವಪ್ರಭು ಶ್ರೀ

ದಾವಣಗೆರೆ, ಆ.13- ಸಾಕಷ್ಟು ಪೌಷ್ಠಿಕಾಂಶ ಇರುವ ಹಾಲನ್ನು ದೇವರು, ಧರ್ಮದ ಹೆಸರಿನಲ್ಲಿ ವ್ಯರ್ಥ ಮಾಡಬಾರದು ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.

ಇಲ್ಲಿನ ದೊಡ್ಡಪೇಟೆಯಲ್ಲಿರುವ ಬಸವ ಕೇಂದ್ರ, ವಿರಕ್ತಮಠದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ `ಹಾಲು ಕುಡಿಯುವ ಹಬ್ಬ-ಬಸವ ಪಂಚಮಿ’ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಹಾಲು ಪೌಷ್ಠಿಕ ಆಹಾರ. ಅದರಲ್ಲಿ ಸಾಕಷ್ಟು ಶಕ್ತಿ ಇರುತ್ತದೆ. ಹಾಲಿನಿಂದ ಭೀಮ ಬಲ ಬರುತ್ತದೆ. ವೈದ್ಯರೂ ಅದನ್ನೇ ಹೇಳುತ್ತಾರೆ. ಹಾಲು ಕುಡಿಯುವುದರಿಂದ ಇತ್ತೀಚೆಗೆ ಓಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ನೀರಜ್‌ ರಂತೆ ಶಕ್ತಿವಂತರಾಗಲು ಸಾಧ್ಯ ಎಂದು ಶ್ರೀಗಳು ಹಾಲಿನ ಮಹತ್ವ ತಿಳಿಸಿಕೊಟ್ಟರು.

ಮೊಟ್ಟೆಯಿಂದ ಜನಿಸಿದ ಹಾವು ಹಾಲು ಕುಡಿಯುವುದಿಲ್ಲ. ಇಂತಹ ವೈಜ್ಞಾನಿಕ ಸತ್ಯವನ್ನು ಅರಿಯದೆ ಹಾವಿಗೆ ಅಥವಾ ಕಲ್ಲಿನ ಮೂರ್ತಿಗೆ ಹಾಲು ಎರೆಯುವುದು ಸರಿಯಲ್ಲ. ಮೂಢನಂಬಿಕೆಗಳನ್ನು ಬಿಟ್ಟು ವೈಚಾರಿಕವಾಗಿ ಹಬ್ಬ ಮಾಡುವ ಅಗತ್ಯವಿದೆ. ಆಗ  ಹಬ್ಬಕ್ಕೊಂದು ಅರ್ಥ ಬರುತ್ತದೆ ಎಂದು ಹೇಳಿದರು. ದೇಶದಲ್ಲಿ ಬಹಳಷ್ಟು ಜನರಿಗೆ ಕುಡಿಯಲು ಹಾಲೇ ಸಿಗುತ್ತಿಲ್ಲ. ಅನೇಕ ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಇದನ್ನು ಅರಿತುಕೊಂಡು ಹಾಲನ್ನು ವ್ಯರ್ಥ ಮಾಡಬೇಡಿ ಎಂದು ಹೇಳಿದರು.

ಕಲ್ಲಿನ ಮೂರ್ತಿಗೆ ಹಾಲೆರೆಯುವ ಜನರು ನಿಜವಾಗಿ ನಾಗರಹಾವು ಪ್ರತ್ಯಕ್ಷವಾದರೆ ಕೊಲ್ಲುತ್ತಾರೆ.  ಭಕ್ಷ್ಯ ಭೋಜನವನ್ನು ತಯಾರಿಸಿ ದೇವರಿಗೆ ಇಡುತ್ತಾರೆ. ಆದರೆ ದೇವರು ಪ್ರತ್ಯಕ್ಷನಾಗುವುದಿಲ್ಲ. ಆದರೆ ಹಸಿದವರು ಯಾರಾದರೂ ಅನ್ನ ಕೇಳಿದರೆ ಅವರನ್ನು ಮುಂದಕ್ಕೆ ಕಳುಹಿಸುತ್ತಾರೆ. ಮಕ್ಕಳು ಹಾಗೂ, ಮನುಷ್ಯರ ಹೃದಯದಲ್ಲಿ ದೇವರು ಅಡಗಿ ಕುಳಿತಿದ್ದಾನೆ ಎಂದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಕ್ಕಳಿಗೆ ಹಾಲು ವಿತರಿಸಲಾಯಿತು. 

ಶ್ರೀ ಮುರುಘರಾಜೇಂದ್ರ ವಿದ್ಯಾವರ್ಧಕ ಫಂಡ್ ಸಂಘದ ಕಾರ್ಯದರ್ಶಿ ಎಂ. ಜಯಕುಮಾರ್,  ಶ್ರೀ ಶಿವಯೋಗಾಶ್ರ ಟ್ರಸ್ಟ್ ಸಹ ಕಾರ್ಯದರ್ಶಿ ಎಸ್.ಓಂಕಾರಪ್ಪ, ಮಹಿಳಾ ಬಸವ ಕೇಂದ್ರದ ಮಹದೇವಮ್ಮ, ಹಾಸಬಾವಿ ಕರಿಬಸಪ್ಪ, ಮುರುಗೇಶ್ ಉಪಸ್ಥಿತರಿದ್ದರು.  ರೋಷನ್ ಜಮೀರ್ ಸ್ವಾಗತಿಸಿದರು. ಫಾರುಕ್‌ ವುಲ್ಲಾ ಕಾರ್ಯಕ್ರಮವನ್ನು ನಿರೂಪಿಸಿದರು.

error: Content is protected !!