ಶ್ರೀರಾಮ ಸೇನೆ ಪ್ರತಿಭಟನೆ
ದಾವಣಗೆರೆ, ನ.16- ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ 2017ರಲ್ಲಿ ಅಕ್ರಮವಾಗಿ ನಿವೇಶನ ಹಂಚಿಕೆಯ ಸಂಪೂರ್ಣವಾಗಿ ತನಿಖೆ ನಡೆಸಿ, ತಪ್ಪಿಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಶ್ರೀರಾಮ ಸೇನೆ ಜಿಲ್ಲಾ ಘಟಕದ ವತಿಯಿಂದ ನಗರದ ದೂಡಾ ಕಚೇರಿ ಮುಂದೆ ಇಂದು ಪ್ರತಿಭಟನೆ ನಡೆಸಲಾಯಿತು.
ದೂಡಾದಿಂದ 2009ರಲ್ಲಿ ಅಕ್ರಮವಾಗಿ ನಿವೇಶನ ಹಂಚಿದ್ದರಿಂದ ಶ್ರೀರಾಮ ಸೇನೆ ವತಿಯಿಂದ ಸುಮಾರು 90 ಪ್ರಕರಣಗಳನ್ನು ಸಲ್ಲಿಸಿದ್ದೆವು. ಅವುಗಳು ಬೆಂಗ ಳೂರಿನ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿವೆ. ಅದೇ ರೀತಿ 2012ರಲ್ಲಿ ನಿವೇಶನ ಹಂಚಿಕೆಗಾಗಿ ಪ್ರಕಟಿಸಿದ್ದು, ಅವುಗಳನ್ನು 2017ರಲ್ಲಿ ಅಕ್ರಮವಾಗಿ ಮತ್ತು ಕಾನೂನು ಬಾಹಿರವಾಗಿ ಹಂಚಿಕೆ ಮಾಡಿ ಭ್ರಷ್ಟಾಚಾರ ಎಸಗಿರುವುದಾಗಿ ಸಂಘಟನೆಯ ಜಿಲ್ಲಾಧ್ಯಕ್ಷ ಮಣಿ ಸರ್ಕಾರ್ ಆಪಾದಿಸಿದರು.
ಈ ಪ್ರಕರಣಗಳಲ್ಲಿ ಎಲ್ಲಾ ರಾಜಕೀಯ ಮತ್ತು ಸರ್ಕಾರಿ ನೌಕರರು ಸುಳ್ಳು ಮಾಹಿತಿ ನೀಡಿ ನಿವೇಶನಗಳನ್ನು ಪಡೆದುಕೊಂಡಿದ್ದಾರೆ. ಆ ಎಲ್ಲಾ ಪ್ರಕರಣಗಳಲ್ಲಿ ಸ್ವಹಿತಾಸಕ್ತಿ ಮತ್ತು ಸ್ವಜನ ಪಕ್ಷಪಾತ, ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಅವರು ದೂರಿದರು.
ದೂಡಾ ಅಧ್ಯಕ್ಷ ದೇವರಮನೆ ಶಿವಕುಮಾರ್ ಮತ್ತು ಅವರ ಸಹೋದರರು, ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಅವರ ಸಹೋದರರು, ಹಿಂದಿನ ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳು, ಆಯುಕ್ತರು, ಅಧಿಕಾರಿಗಳು, ದೂಡ ಸದಸ್ಯರು ಸೇರಿಕೊಂಡು ಭ್ರಷ್ಟಾಚಾರ ಎಸಗಿದ್ದಾರೆ. ಈ ವಿಚಾರವಾಗಿ ತನಿಖೆ ನಡೆಸಿ, ಸೂಕ್ತ ಕಾನೂನು ಕ್ರಮಕೈಗೊಳ್ಳಲು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರು ಮನವಿ ಮಾಡಿದರೂ ಸಹ ಸರ್ಕಾರ ಇಲ್ಲಿಯವರೆಗೂ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ ಎಂದು ಅವರು ಕಿಡಿ ಕಾರಿದರು.
ಪ್ರತಿಭಟನೆಯಲ್ಲಿ ಶ್ರೀರಾಮ ಸೇನೆ ನಗರ ಅಧ್ಯಕ್ಷ ಬಿ.ಜಿ. ರಾಹುಲ್, ಜಿಲ್ಲಾ ಉಪಾಧ್ಯಕ್ಷ ಆಲೂರು ರಾಜಶೇಖರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾಗರ್, ನಗರ ಉಪಾಧ್ಯಕ್ಷ ರಾಜು, ದಾವಣಗೆರೆ ದಕ್ಷಿಣ ವಲಯದ ಅಧ್ಯಕ್ಷ ಶಿಬಾರ್ ರಮೇಶ್, ಜಿಲ್ಲಾ ಖಜಾಂಚಿ ಶ್ರೀಧರ್, ಉತ್ತರ ವಲಯದ ಅಧ್ಯಕ್ಷ ವಿನೋದ ವೆರ್ಣೇಕರ್, ಜಿಲ್ಲಾ ಹೋರಾಟ ಪ್ರಮುಖ್ ಕರಾಟೆ ರಮೇಶ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಡಿ.ಬಿ. ವಿನೋದರಾಜ್, ಜಿಲ್ಲಾ ವ್ಯವಸ್ಥಾಪಕ ಸುನೀಲ್ ವಾಲಿ, ಮಹೇಶ್, ರಘು, ಮಾರ್ಕಂಡೇಯ ಸೇರಿದಂತೆ ಇತರರು ಭಾಗವಹಿಸಿದ್ದರು.