- ಅಣಬೇರು ಗ್ರಾಮದಲ್ಲಿ ಶ್ರೀ ಈಶ್ವರ, ಶ್ರೀ ಆಂಜನೇಯ ಸ್ವಾಮಿ, ಶ್ರೀ ಕುಕ್ಕುವಾಡೇಶ್ವರಿ ದೇವಸ್ಥಾನಗಳ ಉದ್ಘಾಟನೆ.
- ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯ ಮುಖ್ಯ
- ದೇವಸ್ಥಾನಗಳ ನಿರ್ಮಾಣಕ್ಕಿಂತ ಶಾಲೆಗಳ ನಿರ್ಮಾಣಕ್ಕೆ ಆದ್ಯತೆ ಕೊಡಿ
ದಾವಣಗೆರೆ, ನ.14- ಚುನಾವಣೆ ನೀತಿ ಸಂಹಿತೆ ನೆಪದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಳ್ಳುವುದನ್ನು ತಪ್ಪಿಸಲು ಚುನಾವಣಾ ಆಯೋಗ ಮತ್ತೊಮ್ಮೆ ಪರಾಮರ್ಶಿಸಿ, ನೀತಿ ಸಂಹಿತೆ ಮಾರ್ಪಾಡು ಮಾಡುವುದು ಸೂಕ್ತ ಎಂದು ತರಳಬಾಳು ಜಗದ್ಗುರು ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಸಲಹೆ ನೀಡಿದರು.
ದಾವಣಗೆರೆ ತಾಲ್ಲೂಕು ಅಣಬೇರು ಗ್ರಾಮದಲ್ಲಿ ಇಂದು ಏರ್ಪಾಡಾಗಿದ್ದ ಶ್ರೀ ಈಶ್ವರ, ಶ್ರೀ ಆಂಜನೇಯ ಸ್ವಾಮಿ, ಶ್ರೀ ಕುಕ್ಕುವಾಡೇಶ್ವರಿ ದೇವಿ ದೇವಸ್ಥಾನಗಳ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಸ್ಥಳೀಯ ಸಂಸ್ಥೆಗಳಿಂದ ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಳ್ಳುತ್ತಿರುವುದನ್ನು ಚುನಾವಣಾ ಆಯೋಗ ಗಮನಿಸಬೇಕಾಗಿದೆ ಎಂದರು.
ಪ್ರತಿಯೊಬ್ಬ ಪ್ರಜೆಗೂ ಮತದಾನದ ಅರಿವಿದೆ. ಯಾರೋ ಆಮಿಷವೊಡ್ಡುವುದು, ಆಶ್ವಾಸನೆ ಕೊಡುವುದಕ್ಕೆ ಮರುಳಾಗಿ ಬದಲಾಗುವಷ್ಟು ಮತದಾರರು ಅಪ್ರಬುದ್ಧರಲ್ಲ. ಚುನಾವಣೆಯಲ್ಲಿ ಯಾರನ್ನು ಆಯ್ಕೆ ಮಾಡಬೇಕು ಎಂಬುದನ್ನು ತೀರ್ಮಾನಿಸುವಷ್ಟು ಪ್ರಬುದ್ಧರಿದ್ದಾರೆಂದು ಹೇಳಿದರು.
ಸಂಸದ ಜಿ.ಎಂ. ಸಿದ್ದೇಶ್ವರ ಅವರು ನೀತಿ ಸಂಹಿತೆ ಸಡಿಲಿಕೆ ಕುರಿತಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವಂತೆ ಶ್ರೀಗಳು ಸೂಚನೆ ನೀಡಿದರು.
ಭರಮಸಾಗರ ಭಾಗದ ಕೆರೆಗಳನ್ನು ತುಂಬಿಸುವ ನೂರಾರು ಕೋಟಿ ರೂ. ಯೋಜನೆಗಳಿಗೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಸರ್ಕಾರಗಳು ಪಕ್ಷಾತೀತವಾಗಿ ಸಕಾರಾತ್ಮಕವಾಗಿ ಸ್ಪಂದಿಸಿದ್ದರಿಂದ ಕೆರೆಗಳಿಗೆ ನೀರು ತುಂಬಿಸಲು ಸಾಧ್ಯವಾಗಿದೆ ಎಂದರು.
ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಮಾತನಾಡಿ, ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಯಾವುದೂ ಅಸಾಧ್ಯವಾದುದಿಲ್ಲ ಎಂಬುದನ್ನು ಅಣಬೇರು ಗ್ರಾಮಸ್ಥರು ತೋರಿಸಿಕೊಟ್ಟಿದ್ದಾರೆ. ಗ್ರಾಮಸ್ಥರು ಸಾಮರಸ್ಯ, ಸಹಬಾಳ್ವೆಯನ್ನು ಮೈಗೂಡಿಸಿಕೊಂಡಿದ್ದಾರೆ ಎಂದರು.
ಪ್ರತಿ ವರ್ಷ ತರಳಬಾಳು ಹುಣ್ಣಿಮೆ ಆಯೋಜಿಸಿ, ಲಕ್ಷಾಂತರ ಭಕ್ತರನ್ನು ಬರಮಾಡಿಕೊಂಡು ಭಾವೈಕ್ಯತೆಯ ಸಂದೇಶ ಸಾರುವ ಮೂಲಕ ರೈತ ಪರ, ಜನ ಪರ ಕಾರ್ಯಗಳಿಗೆ ಮುನ್ನುಡಿ ಬರೆದು, ಅದನ್ನು ಕಾರ್ಯರೂಪಕ್ಕೆ ತರುತ್ತಿರುವ ತರಳಬಾಳು ಶ್ರೀಗಳು ನಮಗೆ ಪ್ರೇರಣೆ ಎಂದು ಹೇಳಿದರು.
ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಹೆಚ್ಚು ದೇವಸ್ಥಾನಗಳನ್ನು ನಿರ್ಮಿಸುವ ಬದಲು ಹೆಚ್ಚು ಹೆಚ್ಚು ಶಾಲೆಗಳನ್ನು ನಿರ್ಮಿಸಿ, ತನ್ಮೂಲಕ ಶಿಕ್ಷಣಕ್ಕೆ ಒತ್ತು ನೀಡಬೇಕು. ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವ ಮೂಲಕ ಅವರನ್ನೇ ದೇಶದ ಆಸ್ತಿಯನ್ನಾಗಿ ಮಾಡುವಂತೆ ಕರೆ ನೀಡಿದರು.
ಅಣಬೇರು ಗ್ರಾಮದಲ್ಲಿ ಈ ಸಮಾರಂಭಕ್ಕೆ ಸೇರಿರುವ ಜನಸ್ತೋಮ ಅವರಲ್ಲಿರುವ ಒಗ್ಗಟ್ಟು ಮತ್ತು ಸಹಬಾಳ್ವೆಯನ್ನು ತೋರಿಸುತ್ತದೆ. ಈ ಭಾಗದ ಜನರ ಬೇಡಿಕೆಗಳ ಬಗ್ಗೆ ತಮಗೆ ಅರಿವಿದೆ. ಮುಂದಿನ ದಿನಗಳಲ್ಲಿ ಅನುಕೂಲ ಮಾಡಿಕೊಡುವುದಾಗಿ ಭರವಸೆ ನೀಡಿದರು.
ಹೆಬ್ಬಾಳು ವಿರಕ್ತಮಠದ ಶ್ರೀ ಮಹಾಂತರುದ್ರೇಶ್ವರ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಮಾಯಕೊಂಡ ಶಾಸಕ ಪ್ರೊ. ಎನ್. ಲಿಂಗಣ್ಣ ಮಾತನಾಡಿದರು. ದೇವಸ್ಥಾನಗಳ ಸಮಿತಿ ಅಧ್ಯಕ್ಷ ಕೆ.ಸಿ. ರಾಜಪ್ಪ ಅಧ್ಯಕ್ಷತೆ ವಹಿಸಿದ್ದರು.
ಬಯಲು ಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಣಬೇರು ಜೀವನಮೂರ್ತಿ, ಜಿ.ಪಂ. ಮಾಜಿ ಅಧ್ಯಕ್ಷರಾದ ಅಣಬೇರು ಪಾರ್ವತಮ್ಮ, ಶೈಲಜಾ ಬಸವರಾಜ್, ತಾಪಂ ಸದಸ್ಯೆ ಮಂಜುಳಾ ಶಿವಮೂರ್ತಿ, ಗ್ರಾ.ಪಂ. ಅಧ್ಯಕ್ಷೆ ಕಾವ್ಯ ಬಿ.ಸಿ. ಅಶೋಕ್ ಮತ್ತಿತರರು ಉಪಸ್ಥಿತರಿದ್ದರು.
ಎಂ. ಮಾರುತಿ ಪ್ರಾರ್ಥಿಸಿದರು. ಡಾ. ಡಿ.ಆರ್. ಗಿರೀಶ್ ಸ್ವಾಗತಿಸಿದರು. ಬಿ. ಶಿವಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಣಬೇರು ಶಿವಮೂರ್ತಿ ವಂದಿಸಿದರು.